ರನ್ನಬೆಳಗಲಿಯ ಬಿವಿಎಸ್ ಪ್ರೌಢಶಾಲೆಯ ಇಂಗ್ಲಿಷ್ ಮತ್ತು ಗಣಿತ ಶಿಕ್ಷಕರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಪೂರ್ಣಾಂಕ ಪಡೆದ ಐವರು ವಿದ್ಯಾರ್ಥಿಗಳಿಗೆ ಬೆಂಗಳೂರಿಗೆ ವಿಮಾನಯಾನ ಪ್ರವಾಸದ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ವಿದ್ಯಾರ್ಥಿಗಳಿಗೆ ರಾಜಧಾನಿ ಬೆಂಗಳೂರಿಗೆ ವಿಮಾನದಲ್ಲಿಪ್ರವಾಸ ಮಾಡಿಸಿದ್ದಾರೆ. ಈ ಪ್ರವಾಸಕ್ಕಾಗಿ ಶಿಕ್ಷಕರು ಸುಮಾರು 80 ಸಾವಿರ ರೂ. ಖರ್ಚು ಮಾಡಿದ್ದಾರೆ. ವಿದ್ಯಾರ್ಥಿಗಳು ಬೆಂಗಳೂರಿನ ಪ್ರಮುಖ ಸ್ಥಳಗಳನ್ನು ವೀಕ್ಷಿಸಿ ವಾಪಸಾಗಿದ್ದಾರೆ.
ಮಹಾಲಿಂಗಪುರ: ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಮ್ಮ ವಿಷಯಗಳಲ್ಲಿ ನೂರು ಅಂಕ ಪಡೆದ ಐವರು ವಿದ್ಯಾರ್ಥಿಗಳಿಗೆ, ಅವರ ಶಿಕ್ಷಕರು ನೀಡಿದ್ದ ಮಾತಿನಂತೆ ವಿಮಾನದಲ್ಲಿ ಬೆಂಗಳೂರಿಗೆ ಪ್ರವಾಸದ ಭಾಗ್ಯವನ್ನು ಕಲ್ಪಿಸಿದ್ದಾರೆ. ರನ್ನಬೆಳಗಲಿಯ ಬಿವಿಎಸ್ ಪ್ರೌಢಶಾಲೆಯ ಇಂಗ್ಲಿಷ್ ಮತ್ತು ಗಣಿತ ಶಿಕ್ಷಕರು, ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ವಿಶಿಷ್ಟ ಬಹುಮಾನವನ್ನು ಘೋಷಿಸಿದ್ದರು. ಈ ಪ್ರವಾಸಕ್ಕಾಗಿ ಶಿಕ್ಷಕರು ಸುಮಾರು 80 ಸಾವಿರ ರೂ. ಖರ್ಚು ಮಾಡಿದ್ದಾರೆ.
ಸಾಮಾನ್ಯವಾಗಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುತ್ತದೆ. ಆದರೆ ಇಲ್ಲಿನ ಇಂಗ್ಲಿಷ್ ಶಿಕ್ಷಕ ಕೆ.ಎ.ಧಡೂತಿ ಮತ್ತು ಗಣಿತ ಶಿಕ್ಷಕ ಎಂ.ಡಿ.ನೆವನಕ್ಕಿ, ತಮ್ಮ ವಿಷಯಗಳಲ್ಲಿ ನೂರು ಅಂಕ ಗಳಿಸಿದವರಿಗೆ ವಿಮಾನದಲ್ಲಿ ಬೆಂಗಳೂರಿಗೆ ಪ್ರವಾಸದ ಭರವಸೆ ನೀಡಿದ್ದರು. ತಮ್ಮ ಮಾತಿಗೆ ತಪ್ಪದ ಈ ಶಿಕ್ಷಕರು, ಐವರು ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕರೆದೊಯ್ದು, ಅಲ್ಲಿನ ಪ್ರಮುಖ ಸ್ಥಳಗಳನ್ನು ತೋರಿಸಿದ್ದಾರೆ.ಗಣಿತ ವಿಷಯದಲ್ಲಿ ರೂಪಾ ಹಳ್ಳೂರ, ಪಲ್ಲವಿ ಭದ್ರಶೆಟ್ಟಿ, ಪದ್ಮಾ ಸಣಹಟ್ಟಿ, ಸುಜಾತಾ ಯಡಹಳ್ಳಿ ಅವರು ನೂರು ಅಂಕ ಗಳಿಸಿದ್ದರು. ಇನ್ನು ಮಹಾಲಿಂಗಪ್ಪ ಬಡಿಗೇರ ಗಣಿತ ಮತ್ತು ಇಂಗ್ಲಿಷ್ ಎರಡೂ ವಿಷಯಗಳಲ್ಲಿ ನೂರು ಅಂಕಗಳನ್ನು ಪಡೆದು ವಿಶೇಷ ಸಾಧನೆ ಮಾಡಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿ ಬೇರೆ ಬೇರೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ, ಮಾರ್ಚ್ 6ರಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ರಾಜಧಾನಿಯಲ್ಲಿ ಪ್ರಮುಖ ಸ್ಥಳಗಳನ್ನು ವೀಕ್ಷಿಸಿ, ನಂತರ ಸುರಕ್ಷಿತವಾಗಿ ರನ್ನಬೆಳಗಲಿಗೆ ಮರಳಿದ್ದಾರೆ.
ಗಣಿತ ಶಿಕ್ಷಕ ಎಂ.ಡಿ.ನೆವನಕ್ಕಿ ಅವರು ಅನಾರೋಗ್ಯದಿಂದ ವಿಶ್ರಾಂತಿ ಪಡೆಯುತ್ತಿದ್ದು, ಅವರ ಬದಲಾಗಿ ಶಿಕ್ಷಕ ಎಸ್.ಬಿ.ರಡ್ಡೇರಟ್ಟಿ ಅವರು ವಿದ್ಯಾರ್ಥಿಗಳೊಂದಿಗೆ ಪ್ರಯಾಣದಲ್ಲಿ ಭಾಗವಹಿಸಿ, ಅವರಿಗೆ ಸಾಥ್ ನೀಡಿದ್ದರು. ಈ ವಿಶಿಷ್ಟ ಬಹುಮಾನವು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿದೆ.