ಭಾರತೀಯನಿಗೆ 10 ಕೋಟಿ ರೂ. ಲಾಟರಿ!

Contributed byshree vijendra|Vijaya Karnataka

ದುಬೈನಲ್ಲಿ ಚಾಲಕನಾಗಿ 20 ವರ್ಷ ದುಡಿದ ವಿಬೀಶ್‌ ಪಳ್ಳಿಯಾಲಿಗೆ 10 ಕೋಟಿ ರೂ. ಲಾಟರಿ ತಗುಲಿದೆ. 15 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದ ಇವರಿಗೆ ಅಂತಿಮವಾಗಿ ಅದೃಷ್ಟ ಒಲಿದಿದೆ. ಈ ಹಣವನ್ನು ಮಗಳ ಭವಿಷ್ಯಕ್ಕಾಗಿ ಬಳಸಲು ವಿಬೀಶ್‌ ನಿರ್ಧರಿಸಿದ್ದಾರೆ. ಭಾರತಕ್ಕೆ ಮರಳಿ ತವರಿನಲ್ಲಿ ನೆಲೆಸುವ ಯೋಚನೆಯಲ್ಲಿದ್ದಾರೆ. ಅವರ ಈ ಅದೃಷ್ಟದ ಕಥೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

indian wins 10 crore lottery
ದುಬೈನಲ್ಲಿ 20 ವರ್ಷಗಳಿಂದ ಚಾಲಕನಾಗಿ ದುಡಿಯುತ್ತಿದ್ದ ವಿಬೀಶ್‌ ಪಳ್ಳಿಯಾಲಾ ಎಂಬ ಭಾರತೀಯನ ಅದೃಷ್ಟ ಅರಳಿದೆ. ಸುಮಾರು 15 ವರ್ಷಗಳಿಂದ ನಿರಂತರವಾಗಿ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ವಿಬೀಶ್‌ ಇದೀಗ ಬರೋಬ್ಬರಿ 10 ಕೋಟಿ ರೂಪಾಯಿಗಳ ಜಾಕ್‌ಪಾಟ್‌ ಗೆದ್ದಿದ್ದಾರೆ. ಈ ಸಿಹಿ ಸುದ್ದಿ ಅವರಲ್ಲಿ ಅಪಾರ ಸಂತಸ ಮೂಡಿಸಿದೆ.

ಒಂದಲ್ಲಾ ಒಂದು ದಿನ ತಮ್ಮ ಅದೃಷ್ಟ ಖಂಡಿತ ತೆರೆದುಕೊಳ್ಳುತ್ತದೆ ಎಂಬ ನಂಬಿಕೆಯಿಂದ ವಿಬೀಶ್‌ ಪ್ರತಿ ತಿಂಗಳು ತಪ್ಪದೆ ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಕಳೆದ ಫೆಬ್ರವರಿ 7ರಂದು ಖರೀದಿಸಿದ್ದ ಟಿಕೆಟ್ ಕೈಕೊಟ್ಟರೂ, 28ರಂದು ಮತ್ತೆ ಟಿಕೆಟ್ ಖರೀದಿಸುವಂತೆ ಅವರ ಸೋದರ ಸಂಬಂಧಿ ಹಾಗೂ ಇಬ್ಬರು ಸ್ನೇಹಿತರು ಒತ್ತಾಯಿಸಿದ್ದರು. ಅವರ ಒತ್ತಾಯಕ್ಕೆ ಒಪ್ಪಿ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿದ್ದರು. ಅಬುಧಾಬಿಯಿಂದ ಶಾರ್ಜಾಗೆ ವಾಹನ ಚಲಾಯಿಸುತ್ತಿದ್ದಾಗ ಅವರಿಗೆ 10 ಕೋಟಿ ರೂಪಾಯಿ ಜಾಕ್‌ಪಾಟ್‌ ತಲುಪಿದ ಸುದ್ದಿ ತಿಳಿಯಿತು.
ವಿಬೀಶ್‌ ತಮ್ಮ ಅನುಭವ ಹಂಚಿಕೊಂಡಿದ್ದು, "ಒಬ್ಬ ಚಾಲಕನಾಗಿ ತಿಂಗಳಿಗೆ 1,000 ದಿರ್ಹಾಮ್‌ (ಸುಮಾರು 22,000 ರೂ.) ಹಣವನ್ನು ಲಾಟರಿ ಟಿಕೆಟ್‌ಗಾಗಿ ಮೀಸಲಿಡುವುದು ತುಂಬಾ ಕಷ್ಟಕರವಾಗಿತ್ತು. ನನ್ನ ಪತ್ನಿ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಳು. ಹೀಗಾಗಿ, ಕೆಲವೊಮ್ಮೆ ಪತ್ನಿಗೆ ಹೇಳದೇ ಟಿಕೆಟ್ ಖರೀದಿಸುತ್ತಿದ್ದೆ. ಈಗ 10 ಕೋಟಿ ರೂ. ಲಾಟರಿ ಹೊಡೆದಿದೆ. ಈಗ ಭಾರತಕ್ಕೆ ಮರಳಿ ತವರಿನಲ್ಲಿಯೇ ನೆಲೆಸಲು ಯೋಚಿಸುತ್ತಿದ್ದೇನೆ," ಎಂದಿದ್ದಾರೆ.

ಬೆಂಗಳೂರಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿರುವ ತಮ್ಮ ಮಗಳ ಭವಿಷ್ಯಕ್ಕಾಗಿ ಈ ಹಣವನ್ನು ಬಳಸುವುದಾಗಿ ವಿಬೀಶ್‌ ತಿಳಿಸಿದ್ದಾರೆ. ಈ ಅನಿರೀಕ್ಷಿತ ಗೆಲುವು ಅವರ ಜೀವನದಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ.