ವಿಕ ಸುದ್ದಿಲೋಕ ಭಾಲ್ಕಿ ಗಡಿಭಾಗದಲ್ಲಿ ನಾಲ್ಕು ದಶಕಗಳಿಂದ ಡಾ. ಬಸವಲಿಂಗ ಪಟ್ಟದ್ದೇವರು ಕೈಗೊಳ್ಳುತ್ತಿರುವ ಶೈಕ್ಷಣಿಕ, ಸಾಮಾಜಿಕ, ಮಾನವೀಯ ಕಾರ್ಯಗಳು ಮಾದರಿಯಾಗಿವೆ ಎಂದು ಬೆಂಗಳೂರಿನ ಪದ್ಮಶ್ರೀ ಪುರಸ್ಕೃತೆ ಎಸ್ .ಜಿ ಸುಶೀಲಮ್ಮ ಅಭಿಪ್ರಾಯಪಟ್ಟರು. ತಾಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿಸನ್ಮಾನ ಸ್ವೀಕರಿಸಿ ಮಾತನಾಡಿದರು. ಹೆತ್ತವರು ತಮಗೆ ಬೇಡವೆಂದು ಬಿಸಾಡಿದ ಎಳೆ ಕಂದಮ್ಮಗಳಿಗೆ ರಕ್ಷಣೆ ನೀಡಿ ಅವರ ಬದುಕನ್ನು ಬೆಳಗುತ್ತಿರುವ ಪಟ್ಟದ್ದೇವರ ಶ್ರೇಷ್ಠ ಕಾರ್ಯ ವರ್ಣನಾತೀತ ಎಂದು ಬಣ್ಣಿಸಿದರು. ಗಡಿಭಾಗದಲ್ಲಿವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ದೊರೆಯಬೇಕೆಂದು ಪಟ್ಟದ್ದೇವರು ಸ್ಥಾಪಿಸಿದ ಸಂಸ್ಥೆಗಳಲ್ಲಿಉತ್ತಮ ಶಿಕ್ಷಣ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಮಹೋನ್ನತ ಸಾಧನೆಗೈಯಬೇಕು ಎಂದು ಕಿವಿಮಾತು ಹೇಳಿದರು. ಅರ್ಬನ್ ಡೆವಲಪ್ಮೆಂಟ್ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ಏಕಾಗ್ರತೆಯ ಓದು, ಸಮಯದ ಸದುಪಯೋಗ, ನಿರಂತರ ಪ್ರಯತ್ನ ಯಶಸ್ಸಿನ ರಹಸ್ಯಗಳಾಗಿವೆ ಎಂದರು. ಮನೋವೈದ್ಯ ಪ್ರೀತಂ ಬ್ರಹ್ಮಾಪುರೆ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಮನೋಲ್ಲಾಸದಿಂದ ಪಾಲ್ಗೊಳ್ಳಲು ಮತ್ತು ಒತ್ತಡವನ್ನು ನಿಯಂತ್ರಿಸಲು ಯೋಗ, ಧ್ಯಾನ ಸೇರಿದಂತೆ ದೈಹಿಕ ಚಟುವಟಿಕೆಗಳಲ್ಲಿತೊಡಗಿಸಿಕೊಳ್ಳಬೇಕು ಎಂದರು. ನಾಡೋಜ ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಶ್ರೀ ಗುರು ಪ್ರಸನ್ನ ಜನ ಸೇವಾ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಉಮಾ ಪ್ರಕಾಶ ಖಂಡ್ರೆ, ಪ್ರಾಚಾರ್ಯರಾದ ಬಸವರಾಜ ಮೊಳಕೀರೆ, ವಿಷ್ಣು ಕೋಟೆ, ಕಿರಣ್ ಸಜ್ಜನ್ ಮಾತನಾಡಿದರು. ಬೆಂಗಳೂರಿನ ಸುಮಂಗಲಿ ಆಶ್ರಮದ ಎನ್ . ಕಾಂತಮ್ಮ, ಎಂ. ಶ್ರೀದೇವಿ, ಜಯಂತಿ ಹೆಬ್ಬಾರ್ , ಕಲಬರಗಿಯ ಕಲ್ಯಾಣರಾವ್ ಪಾಟೀಲ, ಕಿರಣ ಚಾಕೋತೆ ಇತರರು ಇದ್ದರು. ಮಧುಕರ ಗಾಂವಕರ್ ನಿರೂಪಿಸಿ ವಂದಿಸಿದರು.

