ವಿಕ ಸುದ್ದಿಲೋಕ ಔರಾದ್ ಪ್ರಾಥಮಿಕ ಹಂತದ ಶಿಕ್ಷಣ ದೃಢವಾಗಿದ್ದರೆ ಮಾತ್ರ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ ಮತ್ತು ಜೀವನ ಉಜ್ವಲವಾಗುತ್ತದೆ ಎಂದು ಶಾಸಕ ಪ್ರಭು ಚವ್ಹಾಣ ಅಭಿಪ್ರಾಯಪಟ್ಟರು. ಪಟ್ಟಣದ ಪೋದಾರ ಲರ್ನ್ ಸ್ಕೂಲ್ ನಲ್ಲಿಈಚೇಗೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಶಿಕ್ಷಣವು ಕೇವಲ ಪಾಠಪುಸ್ತಕಗಳಿಗೆ ಸೀಮಿತವಾಗಿರದೆ, ಅವರ ವ್ಯಕ್ತಿತ್ವ ರೂಪಿಕರಣಕ್ಕೂ ಪೂರಕವಾಗಿರಬೇಕು ಎಂದು ತಿಳಿಸಿದರು. ಮಕ್ಕಳು ಪಾಲಕರು ಮತ್ತು ಗುರುಗಳಿಗೆ ಗೌರವ ನೀಡಿದಾಗ ಮಾತ್ರ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ. ಇತ್ತೀಚಿನ ದಿನಗಳಲ್ಲಿಹಿರಿಯರನ್ನು ಗೌರವಿಸುವ ಗುಣ ಮಕ್ಕಳಲ್ಲಿಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಉತ್ತಮ ಸಂಸ್ಕಾರ ಹೊಂದಿದವರನ್ನು ಸಮಾಜ ಸದಾ ಗುರುತಿಸಿ ಗೌರವಿಸುತ್ತದೆ ಎಂದರು. ಮೊಬೈಲ್ ಬಳಕೆಯ ಅತಿರೇಕವು ಮಕ್ಕಳ ಮನೋವೈಖರಿಯ ಮೇಲೆ ದುಷÜ್ಪರಿಣಾಮ ಬೀರುತ್ತಿರುವುದನ್ನು ಉಲ್ಲೇಖಿಸಿದ ಅವರು, ಇತ್ತೀಚಿನ ವರ್ಷಗಳಲ್ಲಿಮೊಬೈಲ್ ಗಳ ಪ್ರಭಾವ ಹೆಚ್ಚಾಗಿದೆ. ಸರಿಯಾದ ಮಾರ್ಗದರ್ಶನದ ಕೊರತೆಯಿಂದ ಕೆಲವು ಮಕ್ಕಳು ದಾರಿ ತಪ್ಪುತ್ತಿರುವುದು ಕಂಡುಬರುತ್ತಿದೆ. ಈ ಕುರಿತು ಪಾಲಕರು ವಿಶೇಷ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಎಸ್ಪಿ ಪ್ರದೀಪ್ ಗುಂಟಿ ಮಾತನಾಡಿ, ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹೊಂದಿ ಶೈಕ್ಷಣಿಕ ಸಾಧನೆಯತ್ತ ಮುನ್ನಡೆಯಬೇಕು. ಪಾಲಕರು ಮಕ್ಕಳಿಗೆ ಶಿಸ್ತು ಮತ್ತು ಮೌಲ್ಯಗಳನ್ನು ಕಲಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಗುಣಮಟ್ಟದ ಶಿಕ್ಷಣವೇ ವ್ಯಕ್ತಿಯನ್ನು ಗುರಿ ಸಾಧನೆಗೆ ತಲುಪಿಸುತ್ತದೆ. ವ್ಯವಸ್ಥಿತ ಜ್ಞಾನ ನೀಡುವ ಪುಸ್ತಕಗಳು ವ್ಯಕ್ತಿಯನ್ನು ಸಾಧನೆಯ ಮಾರ್ಗದಲ್ಲಿಮುನ್ನಡೆಸುವ ಜತೆಗೆ ಸಮಾಜದ ಪ್ರಗತಿಗೂ ಕಾರಣವಾಗುತ್ತವೆ ಎಂದರು. ಸಂಸ್ಥೆಯ ಅಧ್ಯಕ್ಷ ಮನೋಜ ಕಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲಾತೂರಿನ ಪೋದಾರ್ ಶಾಲೆಯ ಪ್ರಾಂಶುಪಾಲ ಗಿರಿಧರ್ ರಡ್ಡಿ, ಪ್ರಾಂಶುಪಾಲ ಮನೋಜ ಕಾನೆಕರ್ , ಬಿಜೆಪಿ ತಾಲೂಕು ಅಧ್ಯಕ್ಷ ಕಾಮಶೆಟ್ಟಿ ಪನ್ನಾಳೆ, ಮಾಜಿ ಪುರಸಭೆ ಸದಸ್ಯ ದಯಾನಂದ ಘೂಳೆ, ವಿರಾಜ್ ಮಾಕನಿಕರ್ , ಬಾಲಾಜಿ ಉದಗೀರೆ ಸೇರಿದಂತೆ ಅನೇಕ ಗಣ್ಯರು ಹಾಗೂ ಪಾಲಕರು ಪಾಲ್ಗೊಂಡರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಸಮಾರಂಭಕ್ಕೆ ಮೆರಗು ತಂದವು

