ಸುಂಕ್ಲಮ್ಮ ದೇವಿಯ ವಿಶಿಷ್ಟ ಆಚರಣೆ, ತಮ್ಮಯ್ಯನಗುಡ್ಡದಲ್ಲಿಜತನದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಜೀವಂತ (ಕಿಕ್ಕರ್ )
ಇಡೀ ಊರಿಗೆ ಊರೇ ಖಾಲಿ!
*ಸಾಕು ಪ್ರಾಣಿಗಳ ಸಮೇತ ಹೊರ ನಡೆದ ಗ್ರಾಮಸ್ಥರು
*ಖಾಲಿಯಾದ ಊರು ಕಾಯಲು ಹತ್ತಾರು ಜನರಿದ್ದರು
ಹುಡೇಂ ಕೃಷ್ಣಮೂರ್ತಿ ಕೂಡ್ಲಿಗಿ
ತಾಲೂಕು ಕೇಂದ್ರ ಗಡಿಭಾಗದ ಹಳ್ಳಿಯೊಂದರಲ್ಲಿತಲೆ ತಲಾಂತರದಿಂದ ಆಚರಿಸಿಕೊಂಡು ಬಂದ ಧಾರ್ಮಿಕ ಕಾರ್ಯದಿಂದಾಗಿ ಸಾಕು ಪ್ರಾಣಿಗಳ ಜತೆ ಜನರೆಲ್ಲಗಂಟು, ಮೂಟೆಯೊಂದಿಗೆ ಹೊರಗೆ ಹೋಗಿದ್ದರಿಂದ ಮಂಗಳವಾರ ಇಡೀ ಊರಿಗೆ ಊರೇ ಖಾಲಿಯಾಗಿತ್ತು.
ಇದು ತಾಲೂಕಿನ ತಮ್ಮಯ್ಯನಗುಡ್ಡ ಗ್ರಾಮದಲ್ಲಿಹಸುಗೂಸು, ಬಾಣಂತಿಯರು, ವೃದ್ಧರು ಸೇರಿದಂತೆ ಪ್ರತಿಯೊಬ್ಬರೂ ತಾವು ಸಾಕಿರುವ ಹಸು, ಎಮ್ಮೆ, ಎತ್ತು, ನಾಯಿ, ಬೆಕ್ಕುಗಳೊಂದಿಗೆ ತಮ್ಮ ಮನೆಗಳನ್ನು ತೊರೆಯುವಂಥ ಸುಂಕ್ಲಮ್ಮ ದೇವಿಯ ವಿಶಿಷ್ಟ ಆಚರಣೆಯ ದೃಶ್ಯವಿದು.
ತಮ್ಮಯ್ಯನಗುಡ್ಡ ಗ್ರಾಮದಲ್ಲಿಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಸುಂಕ್ಲಮ್ಮ ದೇವಿಯ ವಿಶಿಷ್ಟ ಆಚರಣೆಯು ಕಳೆದ ಐದು ವರ್ಷಗಳ ನಂತರ ನಡೆದಿದ್ದು, ಎಲ್ಲಜಾತ್ರೆಗಳಿಗಿಂತಲೂ ಈ ಜಾತ್ರೆ ವಿಭಿನ್ನವಾಗಿದೆ.
ಇಡೀ ಗ್ರಾಮ ಸ್ತಬ್ಧ:
ಗ್ರಾಮ ಸುತ್ತಲೂ ಪಾರಿಬೇಲಿ ಹಾಕುವುದರೊಂದಿಗೆ ಮಂಗಳವಾರ ಬೆಳಗ್ಗೆ ಪ್ರತಿ ಮನೆಯವರೂ ಪುಟ್ಟಿಗಳಲ್ಲಿದವಸ, ಧಾನ್ಯ ಹೊತ್ತು ಗುಂಪಾಗಿ ಒಟ್ಟಿಗೆ ಸಾಗುವ ಮೆರವಣಿಗೆಯ ದೃಶ್ಯಾವಳಿ ನೋಡುವುದೇ ಸೊಬಗು. ಗ್ರಾಮದ ಹೊರವಲಯಕ್ಕೆ ತೆರಳಿದವರು ಹುಣಸೆ ಮರಗಳ ತೋಪು, ತೋಟಗಳಲ್ಲಿರುವ ಮರಗಳಡಿ ಇಲ್ಲವೇ ಗುಡಾರಗಳನ್ನು ಹಾಕಿಕೊಂಡು ದಿನಪೂರ್ತಿ ಅಲ್ಲೇ ಉಳಿದು ರೊಟ್ಟಿ, ಕಾಳುಪಲ್ಯೆ, ಸಿಹಿ ಅಡುಗೆ ತಯಾರಿಸಿಕೊಂಡು ಒಟ್ಟಿಗೆ ಕುಳಿತು ಭೋಜನ ಸವಿದು ಹಬ್ಬ ಆಚರಿಸಿದರು. ಬೆಳಗ್ಗೆಯಿಂದ ಸಂಜೆಯವರೆಗೂ ಇಡೀ ಗ್ರಾಮ ಸ್ತಬ್ಧವಾಗಿತ್ತಾದರೂ, ಮನೆಗಳಲ್ಲಿಕಳ್ಳತನ ನಡೆಯದಂತೆ ಗ್ರಾಮ ಪ್ರವೇಶದ ನಾಲ್ಕಾರು ಕಡೆ ಹತ್ತಾ ರು ಜನರು ಕಾವಲಿದ್ದರು.
ಆಚರಣೆಯ ವೈಜ್ಞಾನಿಕ ಹಿನ್ನೆಲೆ:
ಕೂಡ್ಲಿಗಿ ತಾಲೂಕಿನ ತಮ್ಮಯ್ಯನಗುಡ್ಡ ಗ್ರಾಮದಲ್ಲಿಸುಂಕ್ಲಮ್ಮದೇವಿ ಆಚರಣೆಯು ತಲೆ ತಲಾಂತರದಿಂದ ನಡೆಸಿಕೊಂಡ ಬಂದ ಸಂಪ್ರದಾಯವಾಗದೆ. ಸಾಕು ಪ್ರಾಣಿಗಳೊಂದಿಗೆ ಜನರು ಊರು ತೊರೆಯುವುದು ಮೂಢನಂಬಿಕೆಯಂತೆ ಕಂಡರೂ ವೈಜ್ಞಾನಿಕ ಹಿನ್ನೆಲೆಯೂ ಅಲ್ಲಗಳೆಯುವಂತಿಲ್ಲ. ಸಾಕಷ್ಟು ವರ್ಷಗಳ ಹಿಂದೆ ಪ್ಲೇಗ್ ನಂಥ ಮಾರಕ ಕಾಯಿಲೆ ಬಂದು ಸಾವು, ನೋವುಗಳು ಸಂಭವಿಸುತ್ತಿದ್ದ ಸಂದರ್ಭದಲ್ಲಿಆಗ ಒಂದು ದಿನ ಮನೆ ತೊರೆದರೆ ಸಾಂಕ್ರಾಮಿಕವಾಗಿ ರೋಗ ಹರಡುವುದಿಲ್ಲ. ರೋಗದ ವೈರಸ್ ಸಾಯುವುದರಿಂದ ರೋಗ, ರುಜಿನೆಗಳು ಬರುವುದನ್ನು ತಡೆಯಬಹುದೆಂಬ ವೈಜ್ಞಾನಿಕ ಚಿಂತನೆಯೂ ಅಡಗಿರಬಹುದು. ಹೀಗಾಗಿ, ತಲೆ ತಲಾಂತರದಿಂದಲೂ ಸುಂಕ್ಲಮ್ಮ ದೇವಿ ಆಚರಣೆಯ ಹಿನ್ನೆಲೆಯಲ್ಲಿಊರ ಹೊರಗೆ ಎಲ್ಲರೂ ಬೀಡು ಬಿಡುವಂಥ ಸಂಪ್ರದಾಯವನ್ನು ಈಗಲೂ ಆಚರಿಸಿಕೊಂಡು ಬರಲಾಗುತ್ತಿದೆ ಎಂಬುದು ಗ್ರಾಮದ ಹಿರಿಯರ ಮಾತಾಗಿದೆ.
ಮೆರವಣಿಗೆ ಹೋಗುವ ದೃಶ್ಯ ಚೆಂದ:
ಕೂಡ್ಲಿಗಿ ತಾಲೂಕಿನ ತಮ್ಮಯ್ಯನಗುಡ್ಡ ಗ್ರಾಮದಲ್ಲಿವಾಲ್ಮೀಕಿ ನಾಯಕರು, ಮಾದಿಗರು, ಮುಸ್ಲಿಂ ಸೇರಿ 250ಕ್ಕೂ ಹೆಚ್ಚು ಮನೆಗಳಿವೆ. ಸುಂಕ್ಲಮ್ಮದೇವಿ ಜಾತ್ರೆಯ ಧಾರ್ಮಿಕ ಆಚರಣೆಯಾಗಿ ಗ್ರಾಮದ ಪ್ರತಿಯೊಬ್ಬರೂ ಬೆಳಗ್ಗೆ ತಮ್ಮ ಮನೆಗಳಿಂದ ಒಟ್ಟಿಗೆ ಊರ ಹೊರಗೆ ಮೆರವಣಿಗೆಯಲ್ಲಿಹೋಗುವ ದೃಶ್ಯ ನೋಡುವುದೇ ಚೆಂದ. ಹಾಗೇ ಸಂಜೆ ವಾಪಸ್ ಬರುವ ಧಾರ್ಮಿಕ ಆಚರಣೆ ಸಂಪನ್ನಗೊಂಡಿತು.
ಕೋಟ್ -
ನಮ್ಮೂರಲ್ಲಿತಲೆ ತಲಾಂತರದಿಂದಲೂ ಮೂರು ವರ್ಷಕ್ಕೊಮ್ಮೆ ಸುಂಕ್ಲಮ್ಮ ದೇವಿ ಜಾತ್ರೆ ಹಿನ್ನೆಲೆ ಇಡೀ ಊರಿಗೆ ಒಳಿತಾಗಲಿ ಎಂದು ಮಕ್ಕಳು, ವೃದ್ಧರು ಹಾಗೂ ಸಾಕು ಪ್ರಾಣಿಗಳೊಂದಿಗೆ ಬೆಳಗ್ಗೆಯಿಂದ ಸಂಜೆಯಾಗುವವರೆಗೂ ಒಂದು ದಿನ ಪೂರ್ತಿ ಊರ ಹೊರಗೆ ಹೋಗಿ ವಾಸ ಮಾಡಿದ್ದು, ಅಲ್ಲೇ ಅಡುಗೆ ತಯಾರಿಸಿ ಊಟ ಮಾಡಿದೆವು. ಸಂಜೆಗತ್ತಲು ಆವರಿಸುತ್ತಿದ್ದಂತೆ ವಾಪಸ್ ಮನೆಗಳಿಗೆ ಹೋಗುವ ಸಂಪ್ರದಾಯವನ್ನು ನಾವು ಈಗಲೂ ಮುಂದುವರಿಸಿಕೊಂಡು ಬಂದಿದ್ದೇವೆ.
-ಮಂಜಣ್ಣ, ಗ್ರಾಮದ ಮುಖಂಡ, ತಮ್ಮಯ್ಯನಗುಡ್ಡ ಗ್ರಾಮ
---
ಫೋಟೋಗಳು
03 ಕೂಡ್ಲಿಗಿ 01: ಕೂಡ್ಲಿಗಿ ತಾಲೂಕಿನ ತಮ್ಮಯ್ಯನಗುಡ್ಡ ಗ್ರಾಮದಲ್ಲಿಸುಂಕ್ಲಮ್ಮ ದೇವಿ ಜಾತ್ರೆ ಹಿನ್ನೆಲೆ ಉರ ಹೊರಗೆ ಬೀಡು ಬಿಟ್ಟಿರುವ ಜನರು.
03 ಕೂಡ್ಲಿಗಿ 01ಎ: ತಮ್ಮಯ್ಯಗುಡ್ಡ ಗ್ರಾಮದ ಜನರು ಊರಿಂದ ಗುಳೆ ಹೋಗಿ ಬಯಲಿನಲ್ಲಿಅಡುಗೆ ತಯಾರಿಸುತ್ತಿರುವುದು.

