ಕಾಸರಗೋಡು: ಭಾರೀ ವಿವಾದ ಸೃಷ್ಟಿಸಿದ್ದ ರಾಷ್ಟ್ರೀಯ ಹೆದ್ದಾರಿ 66 ರ ಕುಂಬಳೆಯ ಆರಿಕ್ಕಾಡಿಯ ತಾತ್ಕಾಲಿಕ ಟೋಲ್ ಗೇಟ್ ನಲ್ಲಿಸಂಗ್ರಹವಾದ ಶುಲ್ಕದ ವಿವರ ಬಹಿರಂಗಗೊಂಡಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎಐ) ಈಗ ಫಾಸ್ಟ್ ಟ್ಯಾಗ್ , ಯುಪಿಐ ಮತ್ತು ನಗದು ಮೂಲಕ ಸಂಗ್ರಹಿಸಿದ ಮೊತ್ತದ ಸ್ಪಷ್ಟ ಅಂಕಿ ಅಂಶಗಳನ್ನು ಬಹಿರಂಗಪಡಿಸಿದೆ. ಕೇಂದ್ರ ಸರಕಾರದ ಸಾರ್ವಜನಿಕ ಕುಂದುಕೊರತೆ ಪೋರ್ಟಲ್ ಸಿಪಿಜಿಆರ್ ಎಎಂ ಮೂಲಕ ಬಂದ ದೂರಿಗೆ ಪ್ರತಿಕ್ರಿಯೆಯಾಗಿ ಅಧಿಕಾರಿಗಳು ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.
ಕುಂಬಳೆ ನಿವಾಸಿ ಅಬ್ದುಲ್ ಖಾದರ್ ಫಿರ್ಷಾದ್ ಎಂಬವರು ಸಲ್ಲಿಸಿದ ದೂರಿನಂತೆ ಈ ಮಾಹಿತಿ ನೀಡಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ, ಕುಂಬಳೆ ಟೋಲ್ ಪ್ಲಾಜಾದಲ್ಲಿಹೆಚ್ಚಿನ ಜನರು ಫಾಸ್ಟ್ ಟ್ಯಾಗ್ ವ್ಯವಸ್ಥೆಯ ಮೂಲಕ ಪಾವತಿಸಿದ್ದಾರೆ.ಇಲ್ಲಿ2.7 ಕೋಟಿ ರೂ.ಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಯುಪಿಐ, ಕ್ಯೂಆರ್ ಕೋಡ್ ಮೂಲಕ ಮೂಲಕ 26 ಸಾವಿರ ರೂ.ಸ್ವೀಕರಿಸಲಾಗಿದೆ. ಉಳಿದಂತೆ ನೇರ ಪಾವತಿ ಮೂಲಕ 1.1 ಲಕ್ಷ ರೂ. ಪಾವತಿಸಿದ್ದಾರೆ. ಆದರೆ ಯಾವ ದಿನದಿಂದ ಸಂಗ್ರಹ ಪ್ರಾರಂಭಗೊಂಡಿದೆ ಎಂಬುದನ್ನು ಉಲ್ಲೇಖಿಸಿಲ್ಲ.

