(ಪ್ರಮುಖ) ಕೇಂದ್ರ, ರಾಜ್ಯಗಳ ನಡುವಿನ ಅಸಮತೋಲನ ನಿವಾರಣೆಗೆ ಸಾಂಸ್ಥಿಕ ವೇದಿಕೆ ರಚನೆ ಆಶಯ ತಮಿಳುನಾಡು ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ

Contributed byKeerthi Prasad|Vijaya Karnataka

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಧಿಕಾರ, ಆರ್ಥಿಕ ಹಂಚಿಕೆಯ ಅಸಮತೋಲನ ಸರಿಪಡಿಸಲು ಬಲವಾದ ಸಾಂಸ್ಥಿಕ ವೇದಿಕೆ ರಚಿಸಬೇಕೆಂದು ಅವರು ಒತ್ತಿ ಹೇಳಿದ್ದಾರೆ. ನಿಷ್ಕ್ರಿಯವಾಗಿರುವ ಅಂತಾರಾಜ್ಯ ಮಂಡಳಿಗೆ ಚೈತನ್ಯ ತುಂಬಿ, ರಾಜ್ಯಗಳ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸಬೇಕಿದೆ. ಒಕ್ಕೂಟ ವ್ಯವಸ್ಥೆಯ ಸಮತೋಲನ ಮರುಸ್ಥಾಪನೆಗೆ ಕರ್ನಾಟಕ ಸಿದ್ಧವಿದೆ ಎಂದು ತಿಳಿಸಿದ್ದಾರೆ.

balancing powers between center and states siddaramaiah writes to tamil nadu cm
ಬೆಂಗಳೂರು: ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಾಗೂ ಹಣ ಹಂಚಿಕೆಯಲ್ಲಿರುವ ಅಸಮತೋಲನವನ್ನು ಸರಿಪಡಿಸಲು ಬಲವಾದ ವೇದಿಕೆ ಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರಿಗೆ ಪತ್ರ ಬರೆದಿದ್ದಾರೆ. ನಿಷ್ಕ್ರಿಯವಾಗಿರುವ 'ಅಂತಾರಾಜ್ಯ ಮಂಡಳಿ'ಗೆ ಪುನಶ್ಚೇತನ ನೀಡಿ, ರಾಜ್ಯಗಳ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸಬೇಕು. ಒಕ್ಕೂಟ ವ್ಯವಸ್ಥೆಯ ಸಮತೋಲನ ಮರುಸ್ಥಾಪನೆಗೆ ಕರ್ನಾಟಕ ಸದಾ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ. ರಾಜ್ಯಗಳ ಹಕ್ಕುಗಳ ರಕ್ಷಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಒಗ್ಗಟ್ಟು ಅತ್ಯಗತ್ಯ ಎಂದು ಪತ್ರದಲ್ಲಿ ಒತ್ತಿ ಹೇಳಿದ್ದಾರೆ.

ಸಂವಿಧಾನದ ಮೂಲ ರಚನೆಯ ಅವಿಭಾಜ್ಯ ಅಂಗವಾಗಿರುವ ಒಕ್ಕೂಟ ವ್ಯವಸ್ಥೆ ಕೇವಲ ರಾಜಕೀಯ ಬೇಡಿಕೆಯಲ್ಲ. ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಮತ್ತು ಶಾಸಕಾಂಗ ವಿಷಯಗಳಲ್ಲಿ ಅಧಿಕಾರ ಕೇಂದ್ರದತ್ತ ಕೇಂದ್ರೀಕೃತವಾಗುತ್ತಿರುವುದು ಸಂವಿಧಾನ ರಚನಕಾರರು ರೂಪಿಸಿದ್ದ ಸೂಕ್ಷ್ಮ ಸಮತೋಲನವನ್ನು ಕದಡಿದೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದ ನಿಜವಾದ ಶಕ್ತಿ ಸಹಕಾರ ಒಕ್ಕೂಟ ವ್ಯವಸ್ಥೆ, ಸಾಂವಿಧಾನಿಕ ನಂಬಿಕೆ ಮತ್ತು ಬಹುತ್ವದ ಗೌರವದಲ್ಲಿದೆ. ರಾಜ್ಯಗಳು ಕೇವಲ ಕೇಂದ್ರದ ಯೋಜನೆಗಳನ್ನು ಜಾರಿಗೊಳಿಸುವ ಏಜೆನ್ಸಿಗಳಾಗದೆ, ತಮ್ಮದೇ ಆದ ಆರ್ಥಿಕ ಸ್ವಾಯತ್ತತೆ ಹೊಂದಿರಬೇಕು. ವಿವಿಧತೆಯಲ್ಲಿ ಏಕತೆ ಸಾಧಿಸಿರುವ ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ಎಲ್ಲ ರಾಜ್ಯಗಳ ಭೌಗೋಳಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳನ್ನು ಸಮಾನವಾಗಿ ಗೌರವಿಸಿದಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಓದಲೇ ಬೇಕಾದ ಸುದ್ದಿ