ಉಡುಪಿ: ಹಿಂದೂ ಸಂಘಟನೆ ಮುಖಂಡ ಮಂಜು ಕೊಳ ಅವರಿಗೆ ಮಂಗಳವಾರ ರಾತ್ರಿ ಮಲ್ಪೆಯಲ್ಲಿಯುವಕರಿಬ್ಬರು ಚೂರಿಯಿಂದ ಇರಿದಿದ್ದಾರೆ.
ಗಾಯಗೊಂಡಿರುವ ಮಂಜು ಕೊಳ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ವೈದ್ಯಾಧಿಕಾರಿಗಳು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮಲ್ಪೆ ಹಾಗೂ ಪಲಿಮಾರು ಜೋಡಿಯೊಂದರ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ರಾಜಿ ಸಂಧಾನಕ್ಕೆ ಮಾತುಕತೆ ನಡೆಸಲು ಮಂಜು ಕೊಳ ಮಲ್ಪೆಗೆ ಬಂದಿದ್ದರು. ಈ ವೇಳೆ ಮಲ್ಪೆ ಯುವಕರ ತಂಡದ ಜತೆ ಮಾತಿಗೆ ಮಾತು ಬೆಳೆದಾಗ ಯುವಕರು ಚೂರಿಯಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ. ಹೊಟ್ಟೆ ಭಾಗಕ್ಕೆ ಇರಿದ ಪರಿಣಾಮ ಅಲ್ಲೇ ಕುಸಿದು ಬಿದ್ದ ಮಂಜು ಕೊಳ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ವಶಕ್ಕೆ ಪಡೆಯಲಾಗಿದೆ. ಇದು ವೈಯಕ್ತಿಕ ವಿಚಾರಕ್ಕೆ ನಡೆದಿರುವ ಘಟನೆಯಾಗಿದ್ದು, ಯಾವುದೇ ಕೋಮುದ್ವೇಷ ಉದ್ದೇಶ ಹೊಂದಿಲ್ಲ. ಮಂಜು ಕೊಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

