ವಿಕ ಸುದ್ದಿಲೋಕ ಬೆಂಗಳೂರು ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳಕ್ಕೆ ಆಂಧ್ರ ಪ್ರದೇಶ ಸರಕಾರ ಅಡ್ಡಗಾಲು ಹಾಕುತ್ತಿದ್ದು, ಈ ವಿಚಾರ ಸುಪ್ರೀಂಕೋರ್ಟ್ ನಲ್ಲಿದೆ. ಭೂಸ್ವಾಧೀನ ಮಾಡಬಾರದು ಎಂದು ಕೇಂದ್ರಕ್ಕೆ ಪತ್ರ ಬರೆದಿದೆ. ಹಾಗಾಗಿ ಕೇಂದ್ರ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಈ ಹಿಂದೆ ಆಗಿರುವ ಆದೇಶದ ಪ್ರಕಾರ ನಡೆದುಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ. ವಿಧಾನಸೌಧದಲ್ಲಿಮಾಧ್ಯಮಗಳೊಂದಿಗೆ ಮಂಗಳ ವಾರ ಮಾತನಾಡಿ,‘‘ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸಲು ಅನುಮತಿ ನೀಡಬಾರದು ಹಾಗೂ ಈ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಬಾರದು ಎಂದು ಆಂಧ್ರ ಸರಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಆಂಧ್ರ ಹಾಗೂ ಮಹಾರಾಷ್ಟ್ರ ಸರಕಾರದವರು ಈ ವಿಚಾರದಲ್ಲಿಮಧ್ಯಪ್ರವೇಶ ಮಾಡುವುದು ಒಳ್ಳೆಯದಲ್ಲ,’’ ಎಂದು ಹೇಧಿಳಿದರು. ‘‘ಸಂಪುಟ ಸಭೆಯ ತೀರ್ಮಾನದಂತೆ 1.33 ಲಕ್ಷ ಎಕರೆಯನ್ನು ಒಂದೇ ಬಾರಿಗೆ ಸ್ವಾಧೀನ ಪಡಿಸಿಕೊಂಡು 70 ಸಾವಿರ ಕೋಟಿ ರೂ. ಅನ್ನು ಮೂರು ಹಂತದಲ್ಲಿನೀಡಲು ಮುಂದಾಗಲಾಗಿತ್ತು. ಎಕರೆಗೆ 35-40 ಲಕ್ಷ ರೂ. ಪರಿಹಾರ ನಿಗದಿಗೊಳಿಸ ಲಾಗಿದೆ. ಈ ಭೂಸ್ವಾಧೀನವನ್ನು ಆಂಧ್ರ ಸರಕಾರ ಪ್ರಶ್ನಿಸಿದೆ. ಅವರು ಈ ಮಟ್ಟಕ್ಕೆ ಹೋಗುತ್ತಾರೆ ಎಂದು ಎಣಿಸಿರಲಿಲ್ಲ. ಕಳೆದ 12 ವರ್ಷದಿಂದಲೂ ಕೃಷ್ಣಾ ನ್ಯಾಯಾಧಿಕರಣ-2ರ ಅಂತಿಮ ತೀರ್ಪಿನ ನೋಟಿಫಿಕೇಷನ್ ಮಾಡಿ ಎಂದು ಒತ್ತಡ ಹೇರುತ್ತಲೇ ಇದ್ದೇವೆ. ನವಿಲೆಯಲ್ಲಿಸಮಾನಾಂತರ ಆಣೆಕಟ್ಟೆ ನಿರ್ಮಿಸಿ ನಮ್ಮ ಪಾಲಿನ 30 ಟಿಎಂಸಿ ನೀರನ್ನು ಬಳಸಿಕೊಳ್ಳಬೇಕಿದೆ ಎಂದು ಬೋರ್ಡ್ ಮುಂದೆ ತಿಳಿಸಿದ್ದೇವೆ. ಆದರೆ, ಆಂಧ್ರ ಪ್ರದೇಶದವರು ಈ ಸಭೆಗೆ ಬರುತ್ತಿಲ್ಲ. ನಮ್ಮ ನೀರು ಅವರಿಗೆ ಹರಿದು ಹೋಗುತ್ತಿದೆ,’’ ಎಂದು ಹೇಳಿದರು.

