ಸಹಕಾರಿ ಸಂಘಗಳು ರೈತರ ಬೆನ್ನೆಲುಬು
ವಿಕ ಸುದ್ದಿಲೋಕ ಯಲ್ಲಾಪುರ
ಮಲೆನಾಡಿನ ಜಿಲ್ಲೆಗಳ ಎಲ್ಲಸಹಕಾರಿ ಸಂಘಗಳು ರೈತರ ಬದುಕಿಗೆ ಉಪಯುಕ್ತವಾಗಿ ಕಾರ್ಯನಿರ್ವಹಿಸುತ್ತಿವೆ. ಕೃಷಿ ಆಧಾರಿತ ಸಹಕಾರಿ ಸಂಘಗಳೇ ರೈತರ ನಿಜವಾದ ಬೆನ್ನೆಲುಬು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ಅವರು ಮಂಗಳವಾರ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘‘ಜಾಗೃತ ಸದಸ್ಯರಿದ್ದರೆ ಸಹಕಾರಿ ಸಂಘದ ಬೆಳವಣಿಗೆ ಕಷ್ಟವಲ್ಲಎಂಬುದಕ್ಕೆ ಈ ಸಂಘ ನಿದರ್ಶನ. ಸರ್ವವ್ಯಾಪಿಯಾಗಿ, ಸರ್ವಸ್ಪರ್ಶಿಯಾಗಿ ಸಂಘ ಬೆಳೆದು ನಿಂತಿದೆ’’ ಎಂದರು.
ಮೀಟಿಂಗ್ ಹಾಲ್ ಉದ್ಘಾಟನೆ ಮಾಡಿದ ಟಿಎಸ್ ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ‘‘ಹಿಂದಿನ ಸಹಕಾರಿಗಳನ್ನು ಸ್ಮರಿಸುತ್ತಲೇ ದಾರಿ ತಪ್ಪುತ್ತಿರುವ ಸಹಕಾರಿ ಕ್ಷೇತ್ರವನ್ನು ಸರಿಪಡಿಸಬೇಕಾದ ಅಗತ್ಯವಿದೆ. ಸಹಕಾರಿ ಕ್ಷೇತ್ರ ಸರಿಯಾದ ದಾರಿಯಲ್ಲಿಸಾಗಲು ಕ್ಷೇತ್ರವನ್ನು ಮುನ್ನಡೆಸುವ ಆಡಳಿತ ಮಂಡಳಿಯವರು, ಸಿಬ್ಬಂದಿ ಹಾಗೂ ಸದಸ್ಯರು ಒಟ್ಟಾಗಿ ಮುನ್ನಡೆಯಬೇಕಿದೆ. ರೈತರು ಸಹಕಾರಿ ಸಂಘಗಳ ಮೂಲಕವೇ ವ್ಯವಹಾರ ಮಾಡಬೇಕು’’ ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ‘‘ಸಹಕಾರಿ ಕ್ಷೇತ್ರದಲ್ಲಿನಮ್ಮ ಜಿಲ್ಲೆರಾಜ್ಯಕ್ಕೇ ಆದರ್ಶವಾಗಿದೆ. ಆದರೆ ಜಿಲ್ಲೆಯಲ್ಲಿರಾಜಕೀಯದ ಅತಿಯಾದ ಹಸ್ತಕ್ಷೇಪದಿಂದ ಸಹಕಾರಿ ಕ್ಷೇತ್ರ ಪಾವಿತ್ರ್ಯತೆ ಕಳೆದುಕೊಳ್ಳುತ್ತಿದೆ. ಅನಾರೋಗ್ಯಕರ ಪೈಪೋಟಿಯಿಂದ ನ್ಯಾಯಾಲಯದ ಮೆಟ್ಟಿಲೇರಿ, ತೀರ್ಮಾನಕ್ಕಾಗಿ ಕಾಯುವ ಸ್ಥಿತಿ ಬಂದಿದೆ. ಸಹಕಾರಿಗಳು ಪ್ರತಿಷ್ಠೆ ಬಿಟ್ಟು ಸಹಕಾರಿ ಕ್ಷೇತ್ರವನ್ನು ಬಲಪಡಿಸಲು ಒಟ್ಟಾಗಬೇಕು. ಎಲ್ಲಸಹಕಾರಿ ಸಂಸ್ಥೆಗಳು, ರೈತರು ಒಗ್ಗಟ್ಟಾಗಿ ಅಡಕೆ ಮಂಡಳಿಯ ರಚನೆಗೆ ಒತ್ತಡ ಹಾಕಬೇಕು’’ ಎಂದು ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನಾಗರಾಜ ಕವಡಿಕೆರೆ ಮಾತನಾಡಿ, ‘‘ಪ್ರಾಮಾಣಿಕ ಸದಸ್ಯರು, ನಿರ್ದೇಶಕರು, ಸಿಬ್ಬಂದಿಯ ಸಹಕಾರದಿಂದ ಸಂಸ್ಥೆ ಬೆಳೆಯುತ್ತಿದೆ. ರೈತರ ಕಷ್ಟ ನಷ್ಟದ ಸಂದರ್ಭದಲ್ಲಿಅವರೊಂದಿಗೆ ಸಂಘವು ಸದಾ ಇರುತ್ತದೆ’’ ಎಂದು ಭರವಸೆ ನೀಡಿದರು.
ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರಾದ ಉಮೇಶ ಭಾಗ್ವತ, ಎಂ.ಆರ್ .ಹೆಗಡೆ ಕುಂಬ್ರಿಗುಡ್ಡೆ, ಸಂತೋಷ ಭಟ್ಟ ಹಳವಳ್ಳಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಆರ್ .ಎಸ್ ಭಟ್ಟ, ಟಿಎಸ್ ಎಸ್ ನಿರ್ದೇಶಕ ಕೃಷ್ಣ ಹೆಗಡೆ ಜೂಜಿನಬೈಲ, ಸಂಘದ ಮುಖ್ಯ ಕಾರ್ಯನಿರ್ವಾಹಕ ಎಂ.ಎಸ್ ಹೆಗಡೆ ಹಾಗೂ ನಿರ್ದೇಶಕರು ಇದ್ದರು.
ಸಂಘದ ಉಪಾಧ್ಯಕ್ಷ ಟಿ.ಆರ್ ಹೆಗಡೆ ಸ್ವಾಗತಿಸಿದರು. ನಿರ್ದೇಶಕರಾದ ನರಸಿಂಹ ಕೋಣೆಮನೆ ಪ್ರಾಸ್ತಾವಿಕ ಮಾತನಾಡಿದರು. ಸುಬ್ಬಣ್ಣ ದಾನ್ಯಾನಕೊಪ್ಪ, ಗೋಪಾಲಕೃಷ್ಣ ಭಟ್ಟ ನಿರ್ವಹಿಸಿದರು. ಮಹಾಬಲೇಶ್ವರ ಭಟ್ಟ ಮಾಲದಮನೆ ವಂದಿಸಿದರು.
12ಎಸ್ಸಾರೆಸ್ 5===
ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ವಜ್ರ ಮಹೋತ್ಸವ ಶಾಂತಾರಾಮ ಸಿದ್ದಿ ಉದ್ಘಾಟಿಸಿದರು

