ಮಹಿಷವಾಡಗಿ ಸೇತುವೆ ನಿರ್ಮಾಣ ಕಾಮಗಾರಿ ಸ್ಥಗಿತ
ಹೋರಾಟಗಾರರ ಅಸಮಾಧಾನ
ವಿಕ ಸುದ್ದಿಲೋಕ ರಬಕವಿ-ಬನಹಟ್ಟಿ
ಬೆಳಗಾವಿ-ಬಾಗಲಕೋಟೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮಹಿಷವಾಡಗಿ ಸೇತುವೆ ನಿರ್ಮಾಣ ಕಾಮಗಾರಿ ಮತ್ತೆ ಸ್ಥಗಿತಗೊಂಡಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿಒಂದು ವಾರ ರಬಕವಿಯಲ್ಲಿಉಪವಾಸ ಸತ್ಯಾಗ್ರಹ ನಡೆಸಿದ ಪರಿಣಾಮ ಸೇತುವೆ ಬಗ್ಗೆ ಕೊಂಚ ಆಸಕ್ತಿ ತೋರಿದ್ದ ಸರಕಾರ, ಮೂರು ವರ್ಷದಿಂದ ಸ್ಥಗಿತಗೊಂಡಿದ್ದ ಕಾಮಗಾರಿಗೆ ಚಾಲನೆ ನೀಡಿತ್ತು. ಸರಕಾರದ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತಾದರೂ ಮತ್ತೆ ಕಾಮಗಾರಿ ಸ್ಥಗಿತಗೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಸೇತುವೆಗಾಗಿ ಸ್ವಾಧೀನಪಡಿಸಿಕೊಂಡಿರುವ ಅಥಣಿ ತಾಲೂಕಿನ ಮಹಿಷವಾಡಗಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ರೈತರ ಭೂಮಿಗೆ ಪರಿಹಾರ ವಿತರಿಸಿದ ಬಳಿಕವೂ ಕಾಮಗಾರಿ ವೇಗ ಪಡೆಯದಿರುವುದು ಸೇತುವೆ ನಿರ್ಮಾಣ ಹೋರಾಟ ಸಮಿತಿ ಸದಸ್ಯರಲ್ಲಿಆಕ್ರೋಶ ಮೂಡಿಸಿದೆ. ಸೇತುವೆಗಾಗಿ ಮತ್ತೆ ಹೋರಾಟ ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ.
ಬೇಸಿಗೆ ವೇಳೆ ಹಿಪ್ಪರಗಿ ಬ್ಯಾರೇಜ್ ನಲ್ಲಿಅಷ್ಟೊಂದು ಪ್ರಮಾಣದಲ್ಲಿನೀರಿರುವುದಿಲ್ಲ. ನದಿಪಾತ್ರದಲ್ಲಿಕಾಮಗಾರಿ ಕೈಗೊಳ್ಳಲು ಈಗ ಕಾಲ ಪಕ್ವವಾಗಿದೆ. ನದಿಯೊಳಗೆ ನಿರ್ಮಿಸಬೇಕಿರುವ ಮೂರು ಪಿಲ್ಲರ್ ಗಳ ಕಾಮಗಾರಿ ಕೈಗೊಳ್ಳಬೇಕಿದೆ. ಪ್ರಸಕ್ತ ವರ್ಷದೊಳಗೆ ಸೇತುವೆ ನಿರ್ಮಾಣ ಕಾರ್ಯ ಮುಕ್ತಾಯಗೊಳಿಸುವುದಾಗಿ ಜಿಲ್ಲಾಉಸ್ತುವಾರಿ ಸಚಿವ ಆರ್ .ಬಿ. ತಿಮ್ಮಾಪೂರ ಆಶ್ವಾಸನೆ ನೀಡಿದ್ದಾರೆ. ಆದರೆ, ಕಾಮಗಾರಿ ವೇಗ ನೋಡಿದರೆ ಈ ವರ್ಷದಲ್ಲೂಸೇತುವೆ ನಿರ್ಮಾಣ ಕಾಮಗಾರಿ ಪೂರ್ಣವಾಗಲ್ಲಎಂಬ ಮಾತು ಕೇಳಿ ಬರುತ್ತಿದೆ.
-------
ಕಾಮಗಾರಿಗೆ ವೇಗ ನೀಡಲು ಮೇಲಧಿಕಾರಿಗಳಿಗೆ ತಿಳಿಸಿದ್ದರೂ ನಿರ್ಲಕ್ಷತ್ರ್ಯ ವಹಿಸಿದ್ದಾರೆ. ಬೇಸಿಗೆಯೊಳಗೆ ನದಿಯೊಳಗಿನ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸುವೆ.
-ಸಿದ್ದು ಸವದಿ ತೇರದಾಳ ಶಾಸಕರು
----------
ಬೇಸಿಗೆ ಮುಗಿಯುವ ಹಂತದಲ್ಲಿದೆ. ಇನ್ನೊಂದು ತಿಂಗಳೊಳಗೆ ನದಿಯೊಳಗಿನ ಕಾಮಗಾರಿ ಪೂರ್ಣಗೊಳ್ಳಬೇಕು. ಸಂಬಂಧಿಸಿದ ಅಧಿಕಾರಿ, ಸಚಿವರೊಂದಿಗೆ ಮಾತನಾಡಿರುವೆ. ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ನಿರ್ಲಕ್ಷ್ಯ ತೋರಿದರೆ ಮತ್ತೆ ಹೋರಾಟ ನಡೆಸಲಾಗುವುದು.
-ಡಾ. ರವಿ ಜಮಖಂಡಿ ಅಧ್ಯಕ್ಷರು, ಹೋರಾಟ ಸಮಿತಿ, ರಬಕವಿ-ಬನಹಟ್ಟಿ
ಬಿಎನ್ ಟಿ 11-1
ಫೋಟೊ ವಿವರ-ಮೂರು ಫೋಟೊಗಳಿವೆ
ಬೆಳಗಾವಿ-ಬಾಗಲಕೋಟೆ ಜಿಲ್ಲೆಗೆ ಪ್ರಮುಖ ಸಂಪರ್ಕದ ಕೊಂಡಿಯಾಗಿರುವ ಮಹಿಷವಾಡಗಿ ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವುದು.

