* ಪಿಡಬ್ಲ್ಯುಡಿಯಿಂದ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ ವಿಕ ಸುದ್ದಿಲೋಕ ಬಳ್ಳಾರಿ
ದೂರದ ಜಿಲ್ಲೆಗಳಿಂದ ಬಳ್ಳಾರಿಗೆ ಬಂದು ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ ನೌಕರರ ಬಹುದಿನಗಳ ವಸತಿ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ.
ಕೇಂದ್ರ ಸ್ಥಾನದಲ್ಲಿಯೇ ಕಡ್ಡಾಯವಾಗಿ ವಾಸವಿರಬೇಕೆಂಬ ಸರಕಾರದ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿನಗರದಲ್ಲಿಸುಸಜ್ಜಿತ ಸರಕಾರಿ ನೌಕರರ ವಸತಿ ಸಮುಚ್ಛಯ ನಿರ್ಮಿಸುವಂತೆ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ಜಿಲ್ಲಾಧಿಕಾರಿಗೆ ಮನವಿಸಲ್ಲಿಸಿರುವುದಕ್ಕೆ ಈ ಸಂಬಂಧ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಸರಕಾರಿ ನೌಕರರು ಕರ್ತವ್ಯ ನಿರ್ವಹಿಸುವ ಕೇಂದ್ರ ಸ್ಥಾನದಲ್ಲೇ ವಾಸವಿರಬೇಕೆಂದು ಪ್ರಜಾ ಸೇವಾ ಇಲಾಖೆ ಇತ್ತೀಚೆಗೆ ಕಡ್ಡಾಯ ಆದೇಶ ಹೊರಡಿಸಿದೆ. ಆದರೆ ಮಂಗಳೂರು, ಕಾರವಾರ, ಬೀದರ್ ಹಾಗೂ ಇತರೆ ದೂರದ ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ಬಳ್ಳಾರಿಗೆ ಆಗಮಿಸುವ ನೌಕರರಿಗೆ ಸೂಕ್ತ ವಸತಿ ಗೃಹಗಳ ಕೊರತೆ ತೀವ್ರವಾಗಿದೆ. ಈ ಸಮಸ್ಯೆ ಮನಗಂಡ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ನೆಲ್ಕುದ್ರಿ ಸದಾನಂದ ಅವರ ನೇತೃತ್ವದ ನಿಯೋಗ ‘ನಗರದಲ್ಲಿನೌಕರರಿಗಾಗಿ ಸುಸಜ್ಜಿತ ವಸತಿ ಸಮುಚ್ಛಯ ನಿರ್ಮಿಸಿ, ನಿಯಮಾನುಸಾರ ಹಂಚಿಕೆ ಮಾಡಬೇಕು, ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ .ಕೆ ಅವರಿಗೆ ಮನವಿ ಸಲ್ಲಿಸಿತ್ತು.
ಸಂಘದ ಮನವಿಗೆ ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ .ಕೆ ಅವರು, ಬಳ್ಳಾರಿಯಲ್ಲಿಸರಕಾರಿ ನೌಕರರ ವಸತಿಗೃಹಗಳನ್ನು ನಿರ್ಮಿಸಲು ಅಗತ್ಯವಿರುವ ಸಮಗ್ರ ಪ್ರಸ್ತಾವನೆ ಕೂಡಲೇ ತಯಾರಿಸಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಈ ತಕ್ಷಣದ ಮತ್ತು ಮಹತ್ವದ ನಿರ್ಣಯದಿಂದಾಗಿ ದೂರದ ಜಿಲ್ಲೆಗಳಿಂದ ಬಂದು ಬಾಡಿಗೆ ಮನೆಗಳ ಅಲೆದಾಟದಲ್ಲಿದ್ದ ನೌಕರರಲ್ಲಿಸ್ವಂತ ವಸತಿ ಗೃಹಗಳ ನಿರ್ಮಾಣದ ಕನಸು ಚಿಗುರೊಡೆದಂತಾಗಿದೆ. ನೌಕರರ ಪರವಾದ ಈ ಮನವಿಗೆ ಸ್ಪಂದಿಸಿ, ಸಕಾರಾತ್ಮಕ ಹೆಜ್ಜೆ ಇಟ್ಟಿರುವ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ಧನ್ಯವಾದ ಅರ್ಪಿಸಲಾಗಿದೆ.