ನವರಾತ್ರಿ ಮಹೋತ್ಸವದ ನಿಮಿತ್ತ ಮಹಾರಾಷ್ಟ್ರದ ಐತಿಹಾಸಿಕ ತುಳಜಾಪುರಕ್ಕೆ ತೆರಳುತಿದ್ದ ಪಾದಯಾತ್ರಿಗಳ ಮೇಲೆ ಕಂಟೇನರ್ ಲಾರಿ ಹರಿದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟು, ಏಳು ಜನರಿಗೆ ಗಂಭೀರ ಗಾಯಗಳಾದ ಘಟನೆ ಮಹಾರಾಷ್ಟ್ರದ ನಳದುರ್ಗ ಸಮೀಪ ಶುಕ್ರವಾರ ಬೆಳಗ್ಗೆ ನಡೆದಿದೆ.
ಬಸವಕಲ್ಯಾಣ ನಗರದ ಸುಭಾಷ ಚೌಕ್ ನಿವಾಸಿ ಗುರುಸಿದ್ದ ಬಾಬುರಾವ ಕುಂಬಾರ (27) ಮೃತ ಯುವಕ. ದಸರಾ ಹಬ್ಬದ ನಿಮಿತ್ತ ಪಾದಯಾತ್ರೆ ಮೂಲಕ ರಾಷ್ಟಿ್ರೕಯ ಹೆದ್ದಾರಿ 65ರ ಮಾರ್ಗವಾಗಿ ತುಳಜಾಪುರಕ್ಕೆ ತೆರಳುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಂಟೇನರ್ ಲಾರಿ ಟಯರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ಕಳೆದುಕೊಂಡ ಲಾರಿ ರಸ್ತೆ ಬದಿಯಲ್ಲಿತೆರಳುತಿದ್ದ ಪಾದಯಾತ್ರಿಗಳ ಮೇಲೆ ಹರಿದು ಈ ಘಟನೆ ಸಂಭವಿಸಿದೆ.
ನಗರದ ಸುಭಾಷ್ ಚೌಕ್ ನಿವಾಸಿ ಗುರುಸಿದ್ಧ ಎಂಬಾತ ಸ್ಥಳದಲ್ಲಿಯೇ ಮೃತಪಟ್ಟರೆ, ಈತನ ಸಹೋದರ ವೀರೇಶ ಕುಂಬಾರ, ರೋಹನ ಹಂಚಾಟೆ, ಮಹಾದೇವ ಮಠಪತಿ, ವೀರೇಶ ಚೌದ್ರಿ, ಸಂಗಮೇಶ್ವರ ಬಸವರಾಜ ಬೇಲೂರೆ ಹಾಗೂ ತ್ರಿಪುರಾಂತ ನಿವಾಸಿ ಮಡಿವಾಳ ಚಂದ್ರಕಾಂತ ಜಮಾದಾರ ಮತ್ತು ಹೈದರಾಬಾದನ ನಿವಾಸಿ ಅನುಶ್ ರಮೇಶ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸೋಲಾಪುರದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಈ ಸುದ್ದಿ ತಿಳಿದ ನಳದುರ್ಗ ಠಾಣೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರಿಸಿದೆ. ಈ ಕುರಿತು ನಳದುರ್ಗ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.