* ಪರಿಷತ್ ಚುನಾವಣೆ : ಪದವೀಧರ, ಶಿಕ್ಷಕರ ಕ್ಷೇತ್ರಗಳಲ್ಲಿಮತದಾನವಿಕ ಸುದ್ದಿಲೋಕ ಬೆಂಗಳೂರು
ಬೆಂಗಳೂರು ಶಿಕ್ಷಕರ ಕ್ಷೇತ್ರ ಸೇರಿದಂತೆ ವಿಧಾನ ಪರಿಷತ್ ನ ನಾಲ್ಕು ಕ್ಷೇತ್ರಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದು, ಹಲವು ಕ್ಷೇತ್ರಗಳಲ್ಲಿಕಳೆದ ಚುನಾವಣೆಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ಮತದಾನ ದಾಖಲಾಗಿದೆ. ಬಹುತೇಕ ಕಡೆ ಮತದಾನ ಶಾಂತಿಯುತವಾಗಿದ್ದರೂ, ಬೆಂಗಳೂರಿನಲ್ಲಿಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ. ಹುಬ್ಬಳ್ಳಿಯಲ್ಲಿಮತಗಳ್ಳತನ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿಶೇ.81.98 ಮತದಾನ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಮತ್ತು ಎನ್ ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದರಿಂದ ಮತಗಟ್ಟೆಗಳ ಬಳಿ ಎರಡೂ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿಜಮಾಯಿಸಿದ್ದರು. ನಾಗರಬಾವಿಯ ಮಲ್ಲತ್ತಹಳ್ಳಿಯಲ್ಲಿಮತಗಟ್ಟೆ ಸಮೀಪ ಬಿಜೆಪಿ ಶಾಸಕ ಮುನಿರತ್ನ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡರು. ಬಿಜೆಪಿ ಮುಖಂಡ ಗೋವಿಂದರಾಜು ತಲೆಗೆ ಗಾಯವಾಗಿ ರಕ್ತ ಸೋರುವಂತೆ ಹಲ್ಲೆನಡೆಸಿರುವ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆನಡೆಸಿದ್ದಾರೆ ಎಂದು ಶಾಸಕ ಮುನಿರತ್ನ ಆರೋಪಿಸಿದ್ದಾರೆ. ಘಟನೆಯ ಬಳಿಕ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಪಶ್ಚಿಮ ಪದವೀಧರ ಕ್ಷೇತ್ರ: ಗದಗ, ಹಾವೇರಿ, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳನ್ನು ಒಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿಶೇ.75.62ರಷ್ಟು ಮತದಾನವಾಗಿದೆ. 2020ರ ಚುನಾವಣೆಯಲ್ಲಿಶೇ.70.11ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ.5.51ರಷ್ಟು ಹೆಚ್ಚಳ ಕಂಡುಬಂದಿದೆ.
ಈಶಾನ್ಯ ಶಿಕ್ಷಕರ ಕ್ಷೇತ್ರ: ಕಲಬುರಗಿ, ಬೀದರ್ , ಯಾದಗಿರಿ, ರಾಯಚೂರು, ಕೊಪ್ಪಳ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿಶೇ.86.97ರಷ್ಟು ದಾಖಲೆಯ ಮತದಾನವಾಗಿದೆ. ಒಟ್ಟು 34,784 ಮತದಾರರ ಪೈಕಿ 30,250 ಮಂದಿ ಮತ ಚಲಾಯಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿಬಿಜೆಪಿ ಅಭ್ಯರ್ಥಿಯ ಬ್ಯಾನರ್ ಅಳವಡಿಸಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಪೊಲೀಸರು ಬ್ಯಾನರ್ ತೆರವುಗೊಳಿಸಿ ಪರಿಸ್ಥಿತಿ ಬಿಗಡಾಯಿಸದಂತೆ ಕ್ರಮ ಕೈಗೊಂಡರು. ಕಲಬುರಗಿ ನಗರದ ಐಟಿಐ ಕಾಲೇಜಿನ ಮತಗಟ್ಟೆಯಲ್ಲಿಮತದಾನ ಪ್ರಕ್ರಿಯೆ ನಿಧಾನವಾಗಿದ್ದರಿಂದ ಕೆಲವರು ಮತ ಚಲಾಯಿಸದೆ ಹಿಂದಿರುಗಿದರು.
ದಾವಣಗೆರೆ, ತುಮಕೂರು ಭಾಗದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಶುಕ್ರವಾರ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು.
ಬಾಕ್ಸ್ ...
ಪದವೀಧರರ
ಮತಗಳ್ಳತನ
ಹುಬ್ಬಳ್ಳಿಯ ಫಾತೀಮಾ ಸ್ಕೂಲ್ ನ ಮತಗಟ್ಟೆಯಲ್ಲಿಪಶ್ಚಿಮ ಪದವೀಧರ ಕ್ಷೇತ್ರದ ಮತದಾರರು ಬರುವ ಮುನ್ನವೇ ಬೇರೊಬ್ಬರು ಮತ ಚಲಾಯಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಶ್ವಾಪುರದ ಸರ್ವೋದಯ ಸರ್ಕಲ್ ನಲ್ಲಿಪ್ರತಿಭಟನೆ ನಡೆಸಿದರು.
ಧಾರವಾಡ ಜಿಲ್ಲಾಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿನಡೆದ ಪ್ರತಿಭಟನೆಯಲ್ಲಿ, ಅಲ್ಪಸಂಖ್ಯಾತ ಮತದಾರರನ್ನು ಗುರಿಯಾಗಿಸಿ ವ್ಯವಸ್ಥಿತವಾಗಿ ಮತಗಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಯಿತು. ಮರುಮತದಾನ ನಡೆಸಬೇಕು ಎಂದು ಒತ್ತಾಯಿಸಿ ರಸ್ತೆ ತಡೆಗೆ ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.