ವಿಕ ಸುದ್ದಿಲೋಕ ಕಾರವಾರ ಜಿಲ್ಲೆಯ ವಿವಿಧೆಡೆ ಶುಕ್ರವಾರ ಗಾಳಿಯೊಂದಿಗೆ ಗುಡುಗು, ಮಿಂಚು ಸಹಿತ ಮಳೆಯಾಗಿದೆ.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಗಾಳಿ ಬೀಸಲು ಆರಂಭಿಸಿ, ಬಳಿಕ ಹಲವು ಪ್ರದೇಶಗಳಲ್ಲಿಮಳೆ ಸುರಿದಿದೆ. ಕೆಲವೆಡೆ ಜೋರಾಗಿ ಮಳೆಯಾದರೆ, ಇನ್ನೂ ಕೆಲವು ಭಾಗಗಳಲ್ಲಿಸಾಧಾರಣ ಹಾಗೂ ಹಗುರ ಮಳೆಯಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಜೋಯಿಡಾ ಭಾಗದಲ್ಲಿಉತ್ತಮ ಮಳೆಯಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿಮಳೆ ಮಾಪನಗಳಲ್ಲಿಮಧ್ಯಾಹ್ನದ ವರೆಗೆ ಎರಡರಿಂದ ಆರು ಮಿಲಿ ಮೀಟರ್ ವರೆಗೆ ಮಳೆ ದಾಖಲಾಗಿದೆ. ಸಂಜೆಯಾಗುತ್ತಿದ್ದಂತೆಯೇ ಗುಡುಗು ಕಡಿಮೆಯಾಗಿ ಮಳೆ ಮುಂದುವರಿದಿತ್ತು. ಮಳೆಯಿಂದಾಗಿ ಭತ್ತದ ಕಟಾವು ಕಾರ್ಯದಲ್ಲಿತೊಡಗಿದ್ದ ರೈತರು ಸಮಸ್ಯೆ ಅನುಭವಿಸಿದರು.
ಕೆಲ ದಿನಗಳಿಂದ ಬಿಸಿಲು ಇದ್ದರಿಂದ ಜಿಲ್ಲೆಯ ಹಲವು ಭಾಗಗಳಲ್ಲಿಭತ್ತದ ಕಟಾವು ಕಾರ್ಯ ಚುರುಕುಗೊಂಡಿದೆ. ಹವಾಮಾನ ಅನುಕೂಲಕರವಾಗಿದ್ದ ಹಿನ್ನೆಲೆಯಲ್ಲಿಶುಕ್ರವಾರವೂ ರೈತರು ಭತ್ತ ಕಟಾವು ಆರಂಭಿಸಿದ್ದರು. ಗುರುವಾರ ಕಟಾವು ಮಾಡಿದ್ದ ಭತ್ತವನ್ನು ಶುಕ್ರವಾರ ಬಣವೆ ಮಾಡಲು ಸಿದ್ಧತೆ ನಡೆಸಿದ್ದರು. ಮಧ್ಯಾಹ್ನದ ವೇಳೆಗೆ ಗಾಳಿ, ಗುಡುಗು ಸಹಿತ ಮಳೆ ಸುರಿದ ಪರಿಣಾಮ ಕಟಾವು ಮಾಡಿದ ಭತ್ತವನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವುದು ರೈತರಿಗೆ ಸವಾಲಾಯಿತು.
ಮಳೆಯ ಪರಿಣಾಮವಾಗಿ ಜಿಲ್ಲೆಯ ಹಲವೆಡೆ ತಂಪಾದ ವಾತಾವರಣ ಆವರಿಸಿದೆ. ಇನ್ನೂ ಎರಡು ದಿನ ಜಿಲ್ಲೆಯ ಅಲ್ಲಲ್ಲಿಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.