ವಿಕ ಸುದ್ದಿಲೋಕ ಸಿರುಗುಪ್ಪ‘‘ ಕಿತ್ತೂರು ರಾಣಿ ಚನ್ನಮ್ಮ ಕೇವಲ ಇತಿಹಾಸದ ನೆನಪಾಗಿ ಉಳಿಯಬೇಕಾದ ವೀರವನಿತೆಯಲ್ಲ. ನಮ್ಮ ವರ್ತಮಾನಕ್ಕೆ ದಾರಿ ದೀಪವಾಗಬೇಕಾದ ಧೈರ್ಯದ ಸಂಕೇತ. ಅವರ ಜಯಂತಿಯನ್ನು ಆಚರಿಸುವುದರ ಜತೆಗೆ, ಅವರಲ್ಲಿದ್ದ ಸ್ವಾಭಿಮಾನ, ನ್ಯಾಯನಿಷ್ಠೆ ಮತ್ತು ದೃಢಸಂಕಲ್ಪವನ್ನು ನಮ್ಮ ಬದುಕಿನಲ್ಲಿಯೂ ಅಳವಡಿಸಿಕೊಳ್ಳಬೇಕು,’’ ಎಂದು ತಹಸೀಲ್ದಾರ್ ಗೌಶಿಯಾ ಬೇಗಂ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿಶುಕ್ರವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿಮಾತನಾಡಿದರು.
‘‘ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ್ದು ಕೇವಲ ತಮ್ಮ ಸಂಸ್ಥಾನದ ಭೂಮಿಗಾಗಿ ಅಲ್ಲ. ತಮ್ಮ ನಾಡಿನ ಸ್ವಾಭಿಮಾನ, ಹಕ್ಕು ಮತ್ತು ಸ್ವಾತಂತ್ರ್ಯದ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿಯೂ ಆಗಿತ್ತು. ಬ್ರಿಟಿಷರ ಸಾಮ್ರಾಜ್ಯಶಾಹಿ ದರ್ಪದ ಎದುರು ತಲೆಬಾಗದ ಅವರ ಹೋರಾಟ, ಅನ್ಯಾಯದ ಮುಂದೆ ಯಾವ ಶಕ್ತಿಯೂ ನಮ್ಮ ಸ್ವಾಭಿಮಾನವನ್ನು ಮಣಿಸಲಾಗದು ಎಂಬ ಶಾಶ್ವತ ಸಂದೇಶವನ್ನು ಇತಿಹಾಸದ ಪುಟಗಳಲ್ಲಿಅಚ್ಚೊತ್ತಿದೆ,’’ ಎಂದರು.
‘‘ದೈಹಿಕ ಬಲಕ್ಕಿಂತ ಮಾನಸಿಕ ದೃಢತೆಯೇ ಶ್ರೇಷ್ಠ. ಅನ್ಯಾಯದ ಎದುರು ತಲೆಬಾಗದ ದೃಢಸಂಕಲ್ಪವು ಜನರಲ್ಲಿಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಚನ್ನಮ್ಮರ ಜೀವನ ನಮಗೆ ಕಲಿಸುವ ಪಾಠವೂ ಇದೆ. ಪರಿಸ್ಥಿತಿ ಎಷ್ಟೇ ಪ್ರತಿಕೂಲವಾಗಿದ್ದರೂ ನ್ಯಾಯದ ಪರವಾಗಿ ನಿಲ್ಲುವ ಧೈರ್ಯವನ್ನು ಕಳೆದುಕೊಳ್ಳಬಾರದು. ದೇಶದ ಗಡಿಯಲ್ಲಿಸೈನಿಕರು ರಾಷ್ಟ್ರವನ್ನು ರಕ್ಷಿಸುತ್ತಿದ್ದರೆ, ದೇಶದ ಒಳಗೆ ನ್ಯಾಯ, ಸಮಾನತೆ ಮತ್ತು ಮಾನವೀಯತೆಯನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಸ್ವಾತಂತ್ರ್ಯವೆಂದರೆ ಕೇವಲ ಪರಕೀಯರ ಆಡಳಿತದಿಂದ ಮುಕ್ತವಾಗುವುದಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಗೌರವದಿಂದ, ಸಮಾನತೆಯಿಂದ ಬದುಕುವ ಅವಕಾಶ ದೊರೆಯಬೇಕು. ಇಂದು ಭಾರತದ ಹೆಣ್ಣುಮಕ್ಕಳು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಮತ್ತು ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿಸಾಧನೆ ಮಾಡುತ್ತಿದ್ದಾರೆ. ಹೆಣ್ಣು ಮತ್ತು ಗಂಡು ಎಂಬ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕು, ಗೌರವ ಮತ್ತು ಅವಕಾಶಗಳು ದೊರೆಯಬೇಕು. ಮಹಿಳೆಯರ ಸ್ವಾತಂತ್ರ್ಯವನ್ನು ನಿಯಂತ್ರಿಸುವುದಕ್ಕಿಂತ, ಅವರ ಸ್ವಾತಂತ್ರ್ಯವನ್ನು ಗೌರವಿಸುವ ಮನೋಭಾವವನ್ನು ಸಮಾಜ ಬೆಳೆಸಿಕೊಳ್ಳಬೇಕು,’’ ಎಂದರು. ತಾಲೂಕು ಕಚೇರಿ ಸಿಬ್ಬಂದಿ ಇದ್ದರು.
.........
ಬಿಎಲ್ ವೈ23.ಟಿಕೆಟಿ.2:
ಸಿರುಗುಪ್ಪ ನಗರದ ತಾಲೂಕು ಕಚೇರಿಯಲ್ಲಿಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಿಸಲಾಯಿತು.