ಜೆಡಿಎಸ್ ಐಟಿ ತಂಡದ ಯುವಕರಿಗೆ ಪೊಲೀಸರಿಂದ ಕಿರುಕುಳ ಆರೋಪ

Contributed by: suresha.yg@timesgroup.com|Vijaya Karnataka•
police harass jds it youth
ಬೆಂಗಳೂರು : ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿಕೆಲಸ ಮಾಡುವ ಯುವಕರಿಗೆ ಪೊಲೀಸರು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಜೆಡಿಎಸ್ ದೂರಿದೆ.

ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿಮಾತನಾಡಿದ ಜೆಡಿಎಸ್ ಕಾನೂನು ಘಟಕದ ಸದಸ್ಯ ಹಾಗೂ ರಾಜ್ಯ ವಕ್ತಾರ ಪ್ರದೀಪ್ ಗೌಡ ‘‘ಪಕ್ಷದ ಸಾಮಾಜಿಕ ಜಾಲತಾಣದ ವಿಭಾಗದಲ್ಲಿಕಾರ್ಯನಿರ್ವಹಿಸುವ ಮೋಹನ್ ಗೌಡ ಅವರು ಮನೆಯಲ್ಲಿಇಲ್ಲದ ಸಂದರ್ಭದಲ್ಲಿವಾರೆಂಟ್ ಇಲ್ಲದೆ ತೆರಳಿರುವ ಪೊಲೀಸರು, ಅವರ ಪತ್ನಿ ಮತ್ತು ಅವರ ವೃದ್ಧ ತಾಯಿಗೆ ಮಾನಸಿಕ ಕಿರುಕುಳ ಕೊಟ್ಟಿದ್ದಾರೆ ,’’ ಎಂದು ಆರೋಪಿಸಿದರು.
‘‘ಶನಿವಾರ, ಭಾನುವಾರ ನ್ಯಾಯಾಲಯಕ್ಕೆ ರಜೆ ಇರುತ್ತದೆ. ವಾಲ್ಮೀಕಿ ಜಯಂತಿ ಪ್ರಯುಕ್ತ ಸೋಮವಾರವೂ ಕೂಡ ಕೋರ್ಟುಗಳು ಕಾರ್ಯನಿರ್ವಹಿಸುವುದಿಲ್ಲ. ಇದನ್ನೇ ಅವಕಾಶ ಎಂದು ಭಾವಿಸಿರುವ ಪೊಲೀಸರು ಶುಕ್ರವಾರ ಮೋಹನ್ ಗೌಡ ಅವರ ಮನೆಗೆ ತೆರಳಿದ್ದರು. ಈ ವೇಳೆ ಮೋಹನ್ ಗೌಡ ಅವರ ತಾಯಿ ಮತ್ತು ಪತ್ನಿ ಪವಿತ್ರಾ ಮನೆಯಲ್ಲಿದ್ದರು. ಈ ವೇಳೆ ಪೊಲೀಸರು ಪರಿಶೀಲನೆಗಾಗಿ ಮೊಬೈಲ್ ಹಸ್ತಾಂತರಿಸುವಂತೆ ಪವಿತ್ರಾ ಅವರಲ್ಲಿಕೇಳಿದ್ದಾರೆ. ಮೊಬೈಲ್ ಕೊಡಲು ನಿರಾಕರಿಸಿದ್ದಕ್ಕೆ ಮಹಿಳಾ ಪೊಲೀಸರು ಹಲ್ಲೆನಡೆಸಿದ್ದಾರೆ,’’ ಎಂದು ದೂರಿದರು.

‘‘ಪೊಲೀಸರ ವರ್ತನೆ ಕಾನೂನಿಗೆ ವಿರುದ್ಧವಾಗಿದೆ. ಮೊದಲೇ ವಾರೆಂಟ್ ತೆಗೆದುಕೊಂಡು ಹೋಗುವ ಬದಲು, ಮನೆಗೆ ತೆರಳಿ ಹೊರಡುವ ಹೊತ್ತಿನಲ್ಲಿನೋಟಿಸ್ ಕೊಟ್ಟಿದ್ದಾರೆ. ನೋಟಿಸ್ ಕೊಡಲು ಕಂಪ್ಯೂಟರ್ ಮತ್ತು ಪ್ರಿಂಟರನ್ನು ಪೊಲೀಸರೇ ತಂದಿದ್ದಾರೆ. ಇದು ಈ ಸರಕಾರದ ಕಾರ್ಯ ವೈಖರಿ,’’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘‘ಯಾರನ್ನೋ ಖುಷಿಪಡಿಸುವುದಕ್ಕೆ, ಅಸಲಿ ಆರೋಪಿಗಳನ್ನು ರಕ್ಷಿಸಲಿಕ್ಕೆ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಮೋಹನ್ ಅವರ ವೃದ್ಧ ತಾಯಿಯನ್ನು ಕೂಡ ಎಳೆದಾಡಿದ್ದಾರೆ,’’ ಎಂದು ದೂರಿದರು.