ಮೀಸಲು ರದ್ದಿನಿಂದ ಶೇ.66ರಷ್ಟು ಜನರಿಗೆ ಅನ್ಯಾಯ

Contributed by: ragh.pkn@gmail.com|Vijaya Karnataka•
reservation cancellation denies justice to 66 percent people vs ugrappa expresses severe grievance
ವಾಲ್ಮೀಕಿ ಜಯಂತಿಯಂದು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕವಾಗಿ ನೋವು ವ್ಯಕ್ತಪಡಿಸಲು ವಿ.ಎಸ್ .ಉಗ್ರಪ್ಪ ಕರೆ

ವಿಕ ಸುದ್ದಿಲೋಕ ಕೋಲಾರ
ಮೀಸಲು ರದ್ದು ವಿಚಾರ ವಾಲ್ಮೀಕಿ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರ ಬದುಕಿನ ಮೇಲೆ ಪರಿಣಾಮ ಬೀರುವ ಗಂಭೀರ ಸಮಸ್ಯೆಯಾಗಿದೆ ಎಂದು ಮಾಜಿ ಸಂಸದ ಹಾಗೂ ವಾಲ್ಮೀಕಿ ಸಮುದಾಯದ ಹಿರಿಯ ನಾಯಕ ವಿ.ಎಸ್ .ಉಗ್ರಪ್ಪ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿಮೀಸಲು ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಿಸಿದ್ದ ಕ್ರಮವನ್ನು ರಾಜ್ಯ ಉಚ್ಚ ನ್ಯಾಯಾಲಯ ರದ್ದುಪಡಿಸಿರುವುದರಿಂದ ಶೋಷಿತ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

2022ರಲ್ಲಿಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಮೀಸಲು ಹೆಚ್ಚಳ ಮಾಡಿದ್ದು, ಈ ನಿರ್ಧಾರಕ್ಕೆ ಎಲ್ಲಪಕ್ಷಗಳು ಅವಿರೋಧವಾಗಿ ಬೆಂಬಲ ಸೂಚಿಸಿದ್ದವು. ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ವರದಿಯ ಬಳಿಕ ಮತ್ತೊಂದು ಸಮಿತಿಯಿಂದಲೂ ಪರಿಶೀಲನೆ ನಡೆಸಲಾಗಿತ್ತು. ಆದರೂ ಕೆಲವರ ಆಕ್ಷೇಪಣೆಗಳ ಹಿನ್ನೆಲೆಯಲ್ಲಿಮೀಸಲು ರದ್ದಾಗಿರುವುದು ದುರದೃಷ್ಟಕರ ಎಂದು ಹೇಳಿದರು.

ರಾಜ್ಯದಲ್ಲಿಪರಿಶಿಷ್ಟ ಜಾತಿಗಳಲ್ಲಿ101 ಹಾಗೂ ಪರಿಶಿಷ್ಟ ಪಂಗಡಗಳಲ್ಲಿ61 ಜಾತಿಗಳಿದ್ದು, ಹಿಂದುಳಿದ ವರ್ಗಗಳ ಜನರೂ ಸೇರಿದಂತೆ ದೊಡ್ಡ ಜನಸಮುದಾಯದ ಹಕ್ಕುಗಳ ಮೇಲೆ ಪರಿಣಾಮ ಬೀರಿದೆ. ಶೇ.7ರಷ್ಟು ಜನಸಂಖ್ಯೆ ಹೊಂದಿರುವ ವರ್ಗಕ್ಕೆ ಶೇ.10ರಷ್ಟು ಮೀಸಲು ನೀಡುವಾಗ, ಹೆಚ್ಚಿನ ಜನಸಂಖ್ಯೆ ಹೊಂದಿರುವ ಶೋಷಿತ ವರ್ಗಗಳ ಮೀಸಲು ರದ್ದುಗೊಳಿಸುವುದು ಯಾವ ನ್ಯಾಯ? ನಾವೇನು ಎರಡನೇ ದರ್ಜೆಯ ಪ್ರಜೆಗಳೇ ಎಂದು ಪ್ರಶ್ನಿಸಿದರು.

ತಾಳ್ಮೆ ಪರೀಕ್ಷಿಸಬೇಡಿ: ಶೋಷಿತ ಸಮುದಾಯಗಳ ತಾಳ್ಮೆಯನ್ನು ಪರೀಕ್ಷಿಸಬಾರದು. ಇಂದು ಕಡಿಮೆ ಸಂಖ್ಯೆಯ ಜನರು ಕಾಣಿಸಿಕೊಂಡರೂ, ಸಮುದಾಯದ ಬೇರುಮಟ್ಟದ ಬಲವನ್ನು ಮರೆಯಬಾರದು. ಮೀಸಲು ಭಿಕ್ಷೆಯಲ್ಲ, ಅದು ನಮ್ಮ ಹಕ್ಕು. ಜನಪ್ರತಿನಿಧಿಗಳು ನಮ್ಮ ನೋವನ್ನು ಅರ್ಥಮಾಡಿಕೊಂಡು ನ್ಯಾಯ ದೊರಕಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರು ಈ ವಿಚಾರದಲ್ಲಿಧ್ವನಿ ಎತ್ತಬೇಕು. ಚುನಾವಣೆ ವೇಳೆ ಮತ ಕೇಳಲು ಬರುವ ನಾಯಕರು, ಜನರ ಸಮಸ್ಯೆ ಎದುರಾದಾಗಲೂ ಸ್ಪಂದಿಸಬೇಕು. ಮೀಸಲು ಬಿಜೆಪಿ ಸರಕಾರದ ಕೂಸಾಗಿದ್ದರೂ ಈಗಿನ ಅನ್ಯಾಯವನ್ನು ಪ್ರಶ್ನಿಸದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ , ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜೆಪಿ ನಾಯಕರು ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು.

ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಮ್ಮ ಸರಕಾರ ರೂಪಿಸಿದ್ದ ಕಾನೂನಿನ ಬಗ್ಗೆ ಬದ್ಧತೆ ಹೊಂದಿದ್ದರೆ, ಮೀಸಲು ವಿಚಾರವನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವಂತೆ ಪ್ರಧಾನಮಂತ್ರಿ ಮೇಲೆ ಒತ್ತಡ ತರಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿಜನರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುಪ್ರೀಂಗೆ ಮೇಲ್ಮನವಿ ಸ್ವಾಗತಾರ್ಹ: ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ನಲ್ಲಿಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿರುವುದು ಶ್ಲಾಘನೀಯ. ಆದರೆ, ಈ ಪ್ರಕ್ರಿಯೆ ವಿಳಂಬವಾಗಬಾರದು. ರಾಜ್ಯ ಮತ್ತು ಕೇಂದ್ರ ಸರಕಾರಗಳ ಮೇಲೆ ಒತ್ತಡ ತಂದು ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಹೋರಾಟಕ್ಕೆ ಕೆಲ ನಾಯಕರು ಕೈಜೋಡಿಸದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಗ್ರಪ್ಪ, ಕೆಲವರು ತಮ್ಮದೇ ಕೆಲಸಗಳಲ್ಲಿನಿರತರಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿಬರುವವರಿಗೆ ಆಗ ಜನರು ತಕ್ಕ ಉತ್ತರ ನೀಡಲಿದ್ದಾರೆ. ಜನಪ್ರತಿನಿಧಿಗಳು ಸಮುದಾಯದ ತಾಳ್ಮೆಯನ್ನು ಪರೀಕ್ಷಿಸದೆ, ನಮ್ಮ ಹಕ್ಕು ಮತ್ತು ನೋವನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಅ.26ರಂದು ನಡೆಯಲಿರುವ ವಾಲ್ಮೀಕಿ ಜಯಂತಿಯಲ್ಲಿಸಮುದಾಯದವರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪಾಲ್ಗೊಳ್ಳಬೇಕು. ಯಾವುದೇ ಘೋಷಣೆ ಕೂಗದೆ, ಪ್ರತಿಭಟನೆ ನಡೆಸದೆ, ಸಾಂಕೇತಿಕವಾಗಿ ತಮ್ಮ ನೋವನ್ನು ವ್ಯಕ್ತಪಡಿಸಬೇಕು ಎಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿರಾಜ್ಯ ವಾಲ್ಮೀಕಿ ನಾಯಕ ಒಕ್ಕೂಟದ ಸಮಾನ ಮನಸ್ಕರ ವೇದಿಕೆಯ ರಾಜ್ಯಾಧ್ಯಕ್ಷ ನರಸಿಂಹಯ್ಯ, ಮಾದೇಶ್ , ನರಸಿಂಹಪ್ಪ, ಚಲಪತಿ, ನಾಗರಾಜ್ , ಆನಂದ್ , ನರಸಾಪುರ ನಾಗರಾಜ್ , ರಮೇಶ್ , ವೆಂಕಟೇಶ್ , ಮಾಸ್ತಿ ಅರುಣ್ , ನವೀನ್ , ತಿಮ್ಮಪ್ಪ, ಮುನಿರತ್ನಮ್ಮ ಹಾಗೂ ಭೋವಿ ಸಮಾಜದ ಮುಖಂಡ ಹನುಮಂತರಾಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

=

ಫೋಟೋ ಶೀರ್ಷಿಕೆ: ಕೋಲಾರದ ಪತ್ರಕರ್ತರ ಭವನದಲ್ಲಿಶುಕ್ರವಾರ ಮಾಜಿ ಸಂಸದ ಹಾಗೂ ವಾಲ್ಮೀಕಿ ಸಮುದಾಯದ ಹಿರಿಯ ನಾಯಕ ವಿ.ಎಸ್ .ಉಗ್ರಪ್ಪ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. (23ಕೆಪಿಎಚ್ 1)