ಕೊಡಿಗೇನಹಳ್ಳಿ: ದಾರಿ ಕೇಳುವ ನೆಪದಲ್ಲಿವೃದ್ಧೆಯಿಂದ ಚಿನ್ನದ ಕರಿಮಣಿ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಧುಗಿರಿ ತಾಲೂಕಿನ ಪುರವರ ಹೋಬಳಿಯ ಬ್ಯಾಲ್ಯ ಗ್ರಾಮದ ಲಕ್ಷಮ್ಮ ಚಿನ್ನದ ಸರ ಕಳೆದುಕೊಂಡವರು. ಅ.15ರಂದು ಮಧ್ಯಾಹ್ನ ಸುಮಾರು 1.30ರ ಸಮಯದಲ್ಲಿಬ್ಯಾಲ್ಯ-ಹುಡುಗನಹಟ್ಟಿ ಪಾಳ್ಯ ರಸ್ತೆಯ ನಾಗರಕಟ್ಟೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿಬಂದ ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಲ್ಯ ಗ್ರಾಮಕ್ಕೆ ಹೋಗುವ ದಾರಿ ಕೇಳಿದ್ದಾನೆ. ಲಕ್ಷಮ್ಮ ಅವರು ದಾರಿ ತಿಳಿಸುತ್ತಿದ್ದಂತೆ ಏಕಾಏಕಿ ಅವರ ಬಳಿಯಿದ್ದ ಚಿನ್ನದ 40 ಗುಂಡುಗಳು ಹಾಗೂ ಚಿನ್ನದ ಮಾಂಗಲ್ಯವಿದ್ದ ಕರಿಮಣಿ ಸರ ಕಿತ್ತುಕೊಂಡು ಬ್ಯಾಲ್ಯ ಗ್ರಾಮದ ಕಡೆಗೆ ಪರಾರಿಯಾಗಿದ್ದ. ಸುಮಾರು 75 ಸಾವಿರ ರೂ. ಮೌಲ್ಯದ 10 ಗ್ರಾಂ ತೂಕದ ಚಿನ್ನಾಭರಣದ ಕಳವಾಗಿದೆ ಎಂದು ಲಕ್ಷಮ್ಮ ಎಂದು ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಪೊಲೀಸರು ತನಿಖೆ ಕೈಗೊಂಡು, ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಮಡಕಶಿರಾ ತಾಲೂಕಿನ ಕ್ಯಾಮ್ ಪುರ ಗ್ರಾಮದ 30 ವರ್ಷದ ನಾಗರಾಜು ಎಂದು ಗುರುತಿಸಲಾಗಿದೆ. ಈತ ಈ ಹಿಂದೆ ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೆರೆ ಬಳಿ ನಡೆದ ಸರಗಳ್ಳತನ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ ಎಂದು ತಿಳಿದುಬಂದಿದೆ.