** (ಸಂಪುಟ ಸಭೆಗೆ ವಿಕ ಅಜೆಂಡ) ಕರಾವಳಿ ಪ್ರವಾಸೋದ್ಯಮ ಚಿನ್ನದ ಮೊಟ್ಟೆ ! ಪ್ರಕೃತಿದತ್ತ ಸೊಬಗಿನ ನಾಡಿಗೆ ಬೇಕಿದೆ ಹೂಡಿಕೆ * ಸಚಿವ ಸಂಪುಟದಲ್ಲಿಬಹುನಿರೀಕ್ಷೆ

Contributed byvijaya.poojary@timesgroup.com|Vijaya Karnataka
coastal tourism new policy and investment attractiveness by government
ವಿಕ ಸುದ್ದಿಲೋಕ ಮಂಗಳೂರು

ಪೂರ್ವದುದ್ದಕ್ಕೂ ಹಾಸಿರುವ ಹಚ್ಚ ಹಸಿರಿನ ಪಶ್ಚಿಮಘಟ್ಟ, ಪಶ್ಚಿಮಕ್ಕೆ ವಿಶಾಲವಾಗಿ ವ್ಯಾಪ್ತಿಸುವ ಕಡಲತೀರ. ಈ ಮಧ್ಯೆ ಪ್ರಾಕೃತಿಕ ಸೊಬಗಿನ ಕರಾವಳಿ ಜಿಲ್ಲೆಗಳಲ್ಲಿಪ್ರವಾಸೋದ್ಯಮ ನಿರೀಕ್ಷಿತ ಪ್ರಮಾಣದಲ್ಲಿವೇಗ ಕಂಡರೆ ಮುಂದೊಂದು ದಿನ ರಾಜ್ಯದ ಆದಾಯಕ್ಕೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಬಹದು..!
ನೆರೆಯ ಕೇರಳ, ಗೋವಾಗಳು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಅಭಿವೃದ್ಧಿಯಾಗಿದ್ದು, ದೇಶ- ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿವೆ. ಸಾಗರದಾಚೆಯ ನಾಡು ದುಬೈ ಸೇರಿದಂತೆ ಅರಬ್ ರಾಷ್ಟ್ರಗಳು ಕರಾವಳಿ ತೀರವನ್ನೇ ಪ್ರವಾಸೋದ್ಯಮವಾಗಿ ಬೆಳೆಸಿಕೊಂಡು ಜಗತ್ತಿನ ಆಕರ್ಷಣೆ ಪಡೆದುಕೊಂಡಿದೆ. ಇದಕ್ಕಿಂತಲೂ ಸೊಬಗು ಮಾತ್ರವಲ್ಲದೆ ಜಾನಪದ ಕಲೆಗಳು, ಸಾಂಸ್ಕೃತಿಕ ಸೊಬಗು, ಪಾರಂಪಾರಿಕ ತಾಣ, ಗ್ರಾಮೀಣ ಕ್ರೀಡೆಗಳು ಸೇರಿದಂತೆ ವೈವಿಧ್ಯತೆಯನ್ನೊಳಗೊಂಡ ಕರಾವಳಿ ಜಿಲ್ಲೆಗಳು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿನಿರೀಕ್ಷಿತ ವೇಗ ಕಂಡಿಲ್ಲ. ಕರಾವಳಿ ತೀರಗಳನ್ನೊಳಗೊಂಡ ರಾಜ್ಯಗಳು ಪ್ರವಾಸೋದ್ಯಮವನ್ನು ಬೆಳೆಸಿದಷ್ಟು, ಪ್ರಚುರಪಡಿಸಿದಷ್ಟು ರಾಜ್ಯದ ಪ್ರಯತ್ನವಾಗಿಲ್ಲ.

ಸುಮಾರು 30ಕ್ಕೂ ಅಧಿಕ ಪ್ರಸಿದ್ಧ ಬೀಚ್ ಗಳು, ಹಿನ್ನೀರಿನ ಸೊಬಗು, ನದಿಗಳು, ಪಶ್ಚಿಮ ಘಟ್ಟಗಳು, ಜಲಪಾತಗಳು, ದ್ವೀಪಗಳು, ಧಾರ್ಮಿಕ ಕೇಂದ್ರಗಳು, ಪಾರಂಪಾರಿಕ ಐತಿಹಾಸಿಕ ತಾಣಗಳು ಸೇರಿದಂತೆ ಅನೇಕ ಪ್ರವಾಸಿ ತಾಣಗಳಿವೆ. ಕರಾವಳಿ ಜಿಲ್ಲೆಗಳು ಧಾರ್ಮಿಕ ಟೂರಿಸಂ, ಮೆಡಿಕಲ್ ಟೂರಿಸಂ, ಬೀಚ್ ಟೂರಿಸಂ, ಚಾರಣ ಟೂರಿಸಂಗೆ ಪ್ರಸಿದ್ಧಿಯಾಗಿದೆ. ರಾಜ್ಯ ಸರಕಾರ ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಕೋನವಿಟ್ಟುಕೊಂಡು ಕರಾವಳಿ- ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ- 2026 ರೂಪಿಸಲಾಗಿದ್ದು, ಪ್ರವಾಸೋದ್ಯಮ ಹೂಡಿಕೆಗೆ ಇರುವ ಅವಕಾಶಗಳು, ಆರ್ಥಿಕತೆ, ಹೂಡಿಕೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.

ಕರಾವಳಿ ಭಾಗದಲ್ಲಿನವೆಂಬರ್ ನಿಂದ- ಏಪ್ರಿಲ್ ತಿಂಗಳ ವರೆಗೆ ಈ ನೆಲದ ಸಾಂಸ್ಕೃತಿಕ ವೈಭವಗಳು ಅನಾವರಣಗೊಳ್ಳುತ್ತಿದೆ. ಕಂಬಳ, ಯಕ್ಷಗಾನ, ನಾಗಮಂಡಲ, ಕೋಲ, ನೇಮ, ಜಾತ್ರೋತ್ಸವ, ಲಕ್ಷದ್ವೀಪೋತ್ಸವ ವೈಭವ ನೋಡಬೇಕಾದರೆ ಈ ಸಮಯದಲ್ಲಿಕರಾವಳಿಗೆ ಬರಬೇಕು. ಕೇವಲ 6 ತಿಂಗಳಿನಲ್ಲಿಈ ಉತ್ಸವಗಳಿಂದ 1500ಕೋಟಿ ರೂ. ಅಧಿಕ ವ್ಯವಹಾರವಾಗುತ್ತಿದೆ. ಆದರೆ ಇದನ್ನು ಪ್ರವಾಸೋದ್ಯಮ, ಪ್ರಗತಿಯಾಗಿ ಪ್ರಚುರಪಡಿಸುವಲ್ಲಿ ಹಿಂದೆ ಬಿದ್ದಿದ್ದೇವೆ.

ಹೂಡಿಕೆಗೆ ಹರಿದು ಬರಬೇಕಿದೆ: 10 ವರ್ಷಗಳಿಂದೀಚೆಗೆ ಕರಾವಳಿ ತೀರದುದ್ದಕ್ಕೂ ಪ್ರವಾಸಿಗರಿಗೆ ರೆಸಾರ್ಟ್ ಗಳು, ಅಮ್ಯೂಸ್ ಮೆಂಟ್ ಪಾರ್ಕ್, ಹೋಂ ಸ್ಟೇಗಳು ಹೆಚ್ಚಳವಾಗಿದೆ. ಆದರೂ ಪ್ರವಾಸಿಗರ ನಿರೀಕ್ಷೆಯನ್ನು ಪೂರೈಕೆ ಮಾಡುವಷ್ಟು ಮೂಲಸೌಕರ್ಯಗಳು ಅಭಿವೃದ್ಧಿಯಾಗಿಲ್ಲ. ಕಡಲ ತೀರದುದ್ದಕ್ಕೂ ರಸ್ತೆಗಳನ್ನು ಕಾರಿಡಾರ್ ಮಾದರಿಯಲ್ಲಿಅಭಿವೃದ್ಧಿಪಡಿಸಬೇಕು. ಹೂಡಿಕೆದಾರರಿಗೆ ಅನುಕೂಲವಾಗುವಂತೆ ಸಿಂಗಲ್ ವಿಂಡೋ (ಏಕಗವಾಕ್ಷಿ) ವ್ಯವಸ್ಥೆ ಮಾಡಬೇಕಿದೆ. ಸೆ.18ರಂದು ಮಂಗಳೂರಿನಲ್ಲಿನಡೆಯಲಿರುವ ಸಚಿವ ಸಂಪುಟ ಸಭೆಯು ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ ನೀಡುವ ನಿಟ್ಟಿನಲ್ಲಿಬಹುನಿರೀಕ್ಷೆಯನ್ನು ಹುಟ್ಟುಹಾಕಿದೆ.

ಪ್ರವಾಸಿಗರ ನಿರೀಕ್ಷೆಗಳು ನೂರಾರು

*ಕರಾವಳಿಯ ಅದೆಷ್ಟೋ ಮಂದಿ ಮುಂಬಯಿ, ದುಬೈಯಂತಹ ಮಹಾನಗರದಲ್ಲಿಸ್ಟಾರ್ ಹೋಟೆಲ್ ಸ್ಥಾಪಿಸಿ ಯಶಸ್ವಿ ಉದ್ಯಮಿಯಾಗಿದ್ದಾರೆ. ಅವರನ್ನು ಕರಾವಳಿಯಲ್ಲಿಹೂಡಿಕೆ ಮಾಡಲು ಸೆಳೆಯಬೇಕು.

*ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಟೂರಿಸಂ ಪ್ಯಾಕೇಜ್ , ಸಾರಿಗೆ ವ್ಯವಸ್ಥೆಗಳನ್ನು ಜೋಡಿಸಬೇಕು.

*ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರಿಂಗ್ ರೋಡ್ ವ್ಯವಸ್ಥೆ.

*ಹಿನ್ನೀರಿನಲ್ಲಿನಗರ ಜೋಡಿಸುವ ಸೇತುವೆಗಳು.

*ಕಡಲತೀರದುದ್ದಕ್ಕೂ ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿಮಾಸ್ಟರ್ ಪ್ಲ್ಯಾನ್ .

*ಇಂಟರ್ ಸಿಟಿ ರೈಲುಗಳ ಅನಿವಾರ್ಯತೆ.

*ಮಂಗಳೂರು ಮತ್ತು ಬೆಂಗಳೂರು ಮಧ್ಯೆ ವಂದೇ ಭಾರತ್ .

*ಮಂಗಳೂರು ಮತ್ತು ಬೆಂಗಳೂರು ಕಾರಿಡಾರ್ ರಸ್ತೆ.

*ಸ್ಕೂಬಾ ಡೈವಿಂಗ್ , ಸರ್ಫಿಂಗ್ ಮತ್ತು ಪ್ಯಾರಾಸೈಕ್ಲಿಂಗ್ ಗೆ ಅವಕಾಶ.

*ಕ್ರೂಸ್ ಮೂಲಕ ಆಗಮಿಸುವ ವಿದೇಶಿಯರ ಆಕರ್ಷಣೆಗೆ ಮತ್ತಷ್ಟು ಉತ್ತೇಜನ.

*ಬೋಟ್ ಹೌಸ್ ಹೆಚ್ಚಳಕ್ಕೆ ಅನುಮತಿ ಮತ್ತು ಆದ್ಯತೆ ನೀಡುವುದು.

*ಪ್ರವಾಸಿ ಮಾರ್ಗದರ್ಶಿ, ಕರಕುಶಲ ವಸ್ತುಗಳ ಮಾರಾಟಕ್ಕೆ ಉತ್ತೇಜನ.

ಕೋಟ್

ಕರಾವಳಿ ತೀರದುದ್ದಕ್ಕೂ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ವಿಪುಲ ಅವಕಾಶವಿದ್ದು, ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ವಿಶೇಷ ಆಸಕ್ತಿ ವಹಿಸಿದ್ದಾರೆ. ಕರಾವಳಿಯ ಪ್ರವಾಸೋದ್ಯಮದ ನಾಡಿಮಿಡಿತ ಸರಕಾರಕ್ಕೆ ಸಂಪೂರ್ಣ ಮನವರಿಕೆಯಾಗಿದೆ. ಈ ಕಾರಣದಿಂದ ಸಚಿವ ಸಂಪುಟದಲ್ಲಿಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ವಿಸ್ತೃತ ಚರ್ಚೆಯಾಗುವ ಸಾಧ್ಯತೆಯಿದೆ.

-ದರ್ಶನ್ ಎಚ್ .ವಿ., ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ.

(ಸೂಕ್ತ ಫೋಟೋ ಬಳಸೋಣ)