ಕರುವನ್ನು ಸಾಯಿಸಿದ ಚಿರತೆ

Contributed bypuruapo@gmail.com|Vijaya Karnataka
Vijay Karnataka
ಕರುವನ್ನು ಸಾಯಿಸಿದ ಚಿರತೆ

ನರಸಿಂಹರಾಜಪುರ : ತಾಲೂಕಿನ ಕಡಹಿನಬೈಲು ಗ್ರಾಮದ ಸೂಸಲವಾನಿಯ ಸಿಬಿ ಅವರಿಗೆ ಸೇರಿದ ಎರಡು ವರ್ಷದ ಕರುವನ್ನು ಚಿರತೆಯೊಂದು ಸಾಯಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಸಿಬಿ ಅವರು ಕರುವನ್ನು ಮನೆಯ ಹಿತ್ತಲಿನಲ್ಲಿಮೇಯಲು ಬಿಟ್ಟಿದ್ದರು. ಸಂಜೆಯಾದರೂ ಅದು ಮನೆಗೆ ಹಿಂದಿರುಗಿರಲಿಲ್ಲ. ಮರುದಿನ ಬೆಳಗ್ಗೆ ಸುತ್ತಮುತ್ತಲಿನ ಕಾಡು ಹಾಗೂ ಅಕ್ಕಪಕ್ಕದ ತೋಟಗಳಲ್ಲಿಹುಡುಕಾಟ ನಡೆಸಿದಾಗ, ಸಮೀಪದ ವ್ಯಕ್ತಿಯೊಬ್ಬರ ಅಡಕೆ ತೋಟದಲ್ಲಿಕರುವಿನ ಶವ ಪತ್ತೆಯಾಗಿದೆ.

ಚಿರತೆ ಕರುವನ್ನು ಕಚ್ಚಿ ಕೊಂದು, ಅದರ ದೇಹದ ಸ್ವಲ್ಪ ಭಾಗವನ್ನು ತಿಂದುಹಾಕಿರುವುದು ಕಂಡುಬಂದಿದೆ. ಬಳಿಕ ಸಿಬಿ ಅವರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಪಶುವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಕರುವಿನ ಮರಣೋತ್ತರ ಪರೀಕ್ಷೆ ನಡೆಸಿದರು. ಸೂಸಲವಾನಿ ಭಾಗದಲ್ಲಿಚಿರತೆ ಕಾಣಿಸಿಕೊಂಡಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕರು ಮೃತಪಟ್ಟಿರುವ ಸ್ಥಳ ರಸ್ತೆ ಬದಿಯಲ್ಲಿದ್ದು, ಇದೇ ರಸ್ತೆಯಲ್ಲಿಶಾಲಾ ಮಕ್ಕಳು ಸೇರಿದಂತೆ ನೂರಾರು ಮಂದಿ ಸಂಚರಿಸುತ್ತಾರೆ. ಆದ್ದರಿಂದ ಅರಣ್ಯ ಇಲಾಖೆ ತಕ್ಷಣ ಗಮನಹರಿಸಿ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.