ಬಿಜಿಎಸ್ ಕಾಲೇಜಲ್ಲಿ‘ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ವಿಶೇಷ ಅಭಿಯಾನ’ ಜಾಗೃತಿ
ವಿಕ ಸುದ್ದಿಲೋಕ ಶಿಡ್ಲಘಟ್ಟವಿದ್ಯಾರ್ಥಿಗಳು ಮತ್ತು ಯುವಕರು ಈ ದೇಶದ ಭವಿಷ್ಯ ರೂಪಿಸುವ ರೂವಾರಿಗಳು. ಚುನಾವಣಾ ಪ್ರಕ್ರಿಯೆಯಲ್ಲಿಸಕ್ರಿಯವಾಗಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ ಎಂದು ಜಿಪಂ ಸಿಇಒ ಡಾ. ವೈ. ನವೀನ್ ಭಟ್ ತಿಳಿಸಿದರು.
ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ಹನುಮಂತಪುರ ಗೇಟ್ ನ ಬಿಜಿಎಸ್ ಕಾಲೇಜಿನ ಸಭಾಂಗಣದಲ್ಲಿಜಿಲ್ಲಾಹಾಗೂ ತಾಲೂಕು ಸ್ವೀಪ್ ಸಮಿತಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಹಮ್ಮಿಕೊಂಡಿದ್ದ ‘ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ವಿಶೇಷ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಒಂದೇ ಒಂದು ಮತದಿಂದ ಏನು ಬದಲಾವಣೆ ಸಾಧ್ಯ ಎಂಬ ನಿರುತ್ಸಾಹ ಧೋರಣೆ ಯಾರಲ್ಲೂಬೇಡ. ಹಲವು ಚುನಾವಣೆಗಳಲ್ಲಿಕೇವಲ ಒಂದೇ ಒಂದು ಮತದ ಅಂತರದಿಂದ ಸೋಲು ಗೆಲುವಿನ ಫಲಿತಾಂಶ ನಿರ್ಧಾರ ಆಗಿರುವುದನ್ನು ನಾವು ಕಂಡಿದ್ದೇವೆ. ಸಮಾಜದಲ್ಲಿನಾವು ಬಯಸುವ ಬದಲಾವಣೆ ಮೊದಲು ನಮ್ಮಿಂದಲೇ ಆರಂಭವಾಗಬೇಕು.
ಮತದಾನ ಮಾಡುವುದು ನಮಗೆ ಕೇವಲ ಹಕ್ಕಲ್ಲ, ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. 18 ವರ್ಷ ತುಂಬಿದ ಪ್ರತಿಯೊಬ್ಬ ಅರ್ಹ ಯುವಕ, ಯುವತಿಯರು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಂಡು ಮತದಾನದಲ್ಲಿಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ವಿದ್ಯಾರ್ಥಿಗಳು ಕೇವಲ ತಮ್ಮ ಹೆಸರು ನೋಂದಾಯಿಸಿಕೊಳ್ಳುವುದಷ್ಟೇ ಅಲ್ಲದೆ, ತಮ್ಮ ಕುಟುಂಬದವರು ಮತ್ತು ಅಕ್ಕಪಕ್ಕದವರಿಗೂ ಮತದಾರರ ಪಟ್ಟಿಯ ಪರಿಷ್ಕರಣೆ, ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಪ್ರಕ್ರಿಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಕೋರಿದರು.
2026 ಅಕ್ಟೋಬರ್ 1ಕ್ಕೆ 18 ವರ್ಷ ತುಂಬಲಿರುವ ಕಾಲೇಜಿನ 152 ವಿದ್ಯಾರ್ಥಿಗಳಿಗೆ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ‘ನಮೂನೆ-6’ ವಿತರಿಸಲಾಯಿತು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್ .ಎಸ್ . ಅಬೀದ್ , ತಹಸೀಲ್ದಾರ್ ಎನ್ . ಗಗನ ಸಿಂಧು, ತಾಪಂ ಇಒ ಆರ್ . ಹೇಮಾವತಿ, ಬಿಜಿಎಸ್ ಕಾಲೇಜು ಪ್ರಿನ್ಸಿಪಾಲ್ ಕೆ. ಮಹದೇವ್ , ಜಿಲ್ಲಾಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಬಿಜಿಎಸ್ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
20ಎಸ್ ಡಿಎಲ್ 2
ಶಿಡ್ಲಘಟ್ಟ ತಾಲೂಕು ಹನುಮಂತಪುರ ಗೇಟ್ ನ ಬಿಜಿಎಸ್ ಕಾಲೇಜಿನಲ್ಲಿಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ವಿಶೇಷ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವ ನಮೂನೆ-6 ವಿತರಿಸಲಾಯಿತು.