Congress Holds Massive Rally Countering Bjps Foot March As Resignations Continue
ಬಿಜೆಪಿ ಪಾದಯಾತ್ರೆಗೆ ಕೌಂಟರ್ ಯಾತ್ರೆ ಕೈಬಿಟ್ಟ ಕಾಂಗ್ರೆಸ್ ಬಳ್ಳಾರಿ ಅಥವಾ ರಾಯಚೂರಿನಲ್ಲಿಬೃಹತ್ ಸಮಾವೇಶ
Contributed by: KENCHE GOWDA|Vijaya Karnataka•
ವಿಕ ಸುದ್ದಿಲೋಕ ಬೆಂಗಳೂರು
ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಬಳಿಕವೂ ಲಿಂಗಸುಗೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆ ಹೊರಟಿರುವ ಪ್ರತಿಪಕ್ಷ ಬಿಜೆಪಿಗೆ ಕೌಂಟರ್ ನೀಡಲು ಪ್ರತಿಯಾತ್ರೆ ನಡೆಸುವ ಪ್ರಸ್ತಾಪವನ್ನು ಕಾಂಗ್ರೆಸ್ ಕೈಬಿಟ್ಟಿದೆ. ಬದಲಿಗೆ ಕೆಲದಿನಗಳ ಬಳಿಕ ರಾಯಚೂರು ಅಥವಾ ಬಳ್ಳಾರಿಯಲ್ಲಿಬೃಹತ್ ಸಮಾವೇಶ ಸಂಘಟಿಸಲು ಆಡಳಿತ ಪಕ್ಷ ತೀರ್ಮಾನಿಸಿದೆ.ಪಾದಯಾತ್ರೆಗೆ ಕೌಂಟರ್ ನೀಡುವ ಪ್ರಯತ್ನದಿಂದ ಜನಸ್ಪಂದನೆ ಮತ್ತು ಉತ್ತಮ ಪ್ರತಿಕ್ರಿಯೆಯೇ ಇಲ್ಲದ ಬಿಜೆಪಿ ಹೋರಾಟಕ್ಕೆ ಮಹತ್ವ ತಂದುಕೊಟ್ಟಂತಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಈ ತೀರ್ಮಾನ ಮಾಡಿದೆ. ಬರಗಾಲದಲ್ಲಿರಾಜಕೀಯ ರಂಪಾಟದಿಂದ ಜನಾಕ್ರೋಶಕ್ಕೆ ಗುರಿಯಾಗುವ ಆತಂಕವೂ ಈ ನಿರ್ಧಾರಕ್ಕೆ ಕಾರಣವಾಗಿದೆ.
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅಧ್ಯಕ್ಷತೆಯಲ್ಲಿಬುಧವಾರ ಪಕ್ಷದ ಕಚೇರಿಯಲ್ಲಿನಡೆದ ಕಲ್ಯಾಣ ಕರ್ನಾಟಕ ಭಾಗದ ಶಾಸಕರು, ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಮುಖಂಡರ ಸಭೆ ಈ ನಿರ್ಧಾರಕ್ಕೆ ಬರಲಾಗಿದೆ.
ಲಿಂಗಸುಗೂರಿನಿಂದ ಶುರುವಾದ ಯಾತ್ರೆಗೆ ಜನರಿಂದ ನಿರೀಕ್ಷಿತ ಮಟ್ಟದಲ್ಲಿಸ್ಪಂದನೆ ಸಿಗುತ್ತಿಲ್ಲ. ಸ್ಪಷ್ಟ ಗುರಿ ಮತ್ತು ಉದ್ದೇಶವೇ ಇಲ್ಲದ ಯಾತ್ರೆಗೆ ಪ್ರತಿಯಾಗಿ ನಾವು ಹೋರಾಟ ರೂಪಿಸಿದರೆ, ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಅಭಿಪ್ರಾಯಕ್ಕೆ ಸಭೆ ಬಂದಿದೆ.
ಬಿಜೆಪಿ ಪಾದಯಾತ್ರೆ ಮುಗಿದ ಬಳಿಕ ಸೂಕ್ತ ದಿನಾಂಕ ಆಯ್ಕೆ ಮಾಡಿ ಬಳ್ಳಾರಿ ಭಾಗದಲ್ಲಿಬೃಹತ್ ಸಮಾವೇಶವೊಂದನ್ನು ಸಂಘಟಿಸುವುದು. ಪರಿಶಿಷ್ಟ ಪಂಗಡದ ಜನರನ್ನು ಗುರಿಯಾಗಿಸಿಕೊಂಡ ಈ ಸಮಾವೇಶದ ಮೂಲಕ ಬಿಜೆಪಿಗೆ ತಿರುಗೇಟು ನೀಡಬಹುದು. ಮುಖ್ಯವಾಗಿ, ಬರಗಾಲ ಪರಿಸ್ಥಿತಿಯಲ್ಲಿಕೇಂದ್ರ ಸರಕಾರ ರಾಜ್ಯದ ನೆರವಿಗೆ ಬಂದಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಮತ್ತು ಯುಕೆಪಿಗೆ ಅನುದಾನ ಕೊಡುತ್ತಿಲ್ಲ. ಕೇಂದ್ರ ಸಂಪುಟದಲ್ಲಿರಾಜ್ಯವನ್ನು ಪ್ರತಿನಿಧಿಸುವ ಸಚಿವರು ಹಾಗೂ ಬಿಜೆಪಿ ಸಂಸದರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ತುಟಿಬಿಚ್ಚುತ್ತಿಲ್ಲ. ಈ ಎಲ್ಲವಿಚಾರಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಬಿಜೆಪಿಗೆ ಕೌಂಟರ್ ಕೊಡಲು ಸಭೆ ನಿರ್ಧರಿಸಿದೆ.
ಎಐಸಿಸಿ ಕಾರ್ಯದರ್ಶಿ ಗೋಪಿನಾಥನ್ ಪಳನಿಯಪ್ಪನ್ , ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ್ ಕುಮಾರ್ , ಮಾಜಿ ಸಂಸದ ವಿ.ಎಸ್ ಉಗ್ರಪ್ಪ. ಶಾಸಕರಾದ ಹಂಪನಗೌಡ ಬಾದರ್ಲಿ, ಶಾಸಕಿ ಅನ್ನಪೂರ್ಣ ತುಕಾರಾಂ, ಬಸವನಗೌಡ ದದ್ದಲ್ , ಹಂಪಯ್ಯ ನಾಯಕ್ , ಬಸವನಗೌಡ ತುರುವಿಹಾಳ್ , ವಿಧಾನ ಪರಿಷತ್ ಸದಸ್ಯ ಎನ್ .ಎಸ್ .ಬೋಸರಾಜು, ಬಸವನಗೌಡ ಬಾದರ್ಲಿ, ಮಾಜಿ ಶಾಸಕರಾದ ಡಿ.ಎಸ್ ಹೂಲಗೇರಿ, ಡಿಸಿಸಿ ಅಧ್ಯಕ್ಷರಾದ ಶಿವಯೋಗಿ, ಅಲ್ಲಂ ಪ್ರಶಾಂತ್ , ಸಿರಾಜ್ ಶೇಖ್ , ಅಮರೇಗೌಡ ಬಯ್ಯಾಪುರ ಸೇರಿದಂತೆ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತಿತರ ಎಸ್ ಟಿ ಸಮುದಾಯದ ಪ್ರಭಾವವಿರುವ ಭಾಗಗಳ ಕಾಂಗ್ರೆಸ್ ಮುಖಂಡರು ಸಭೆಯಲ್ಲಿಭಾಗವಹಿಸಿದ್ದರು.