ಕೆ.ಆರ್ .ಪುರ ಹೋಬಳಿಯ ಪಟ್ಟಂದೂರು ಅಗ್ರಹಾರದ ಸರ್ವೆ ನಂಬರ್ 142ರಲ್ಲಿ ಮುಂದಿನ ವಿಚಾರಣೆವರೆಗೆ ಯಾವುದೇ ನಿರ್ಮಾಣ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಹೈಕೋರ್ಟ್ , ಜಿಬಿಎ ಮುಖ್ಯ ಆಯುಕ್ತರಿಗೆ ನಿರ್ದೇಶಿಸಿದೆ.ವಿವಾದಿತ ಜಾಗದಲ್ಲಿನಿರ್ಮಾಣ ಚಟುವಟಿಕೆ ನಡೆಸಲು ಸ್ಕೈಲೈನ್ ಡೆವೆಲಪರ್ಸ್ ಗೆ ಅನುಮತಿ ನೀಡಲಾಗಿದೆ ಎಂದು ಆಕ್ಷೇಪಿಸಿ ‘ನಮ್ಮ ವೈಟ್ ಫೀಲ್ಡ್ ’ ಆರ್ ಡಬ್ಲ್ಯುಎ ಫೆಡರೇಷನ್ ಟ್ರಸ್ಟ್ ನ ಪ್ರತಿನಿಧಿ ಸಂದೀಪ್ ಅನಿರುದ್ಧನ್ ಸಲ್ಲಿಸಿರುವ ತಕರಾರು ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್ .ನಟರಾಜ್ ಅವರಿದ್ದ ಏಕಸದಸ್ಯ ಪೀಠ ಈ ಮಧ್ಯಂತರ ಆದೇಶ ನೀಡಿದೆ.
ಅರ್ಜಿದಾರರ ಪರ ವಕೀಲರು, ‘‘ಪಟ್ಟಂದೂರು ಅಗ್ರಹಾರದ ಸರ್ವೆ ನಂ. 139 ಮತ್ತು 142ರಲ್ಲಿತಲೆಯೆತ್ತಿರುವ ಕಟ್ಟಡಗಳನ್ನು ನೆಲಸಮಗೊಳಿಸಲು ಬಿಡಿಎ ಆದೇಶ ಮಾಡಿದ ಹೊರತಾಗಿಯೂ ನಿರ್ಮಾಣ ಕಾಮಗಾರಿ ನಡೆಸಲು ಸ್ಕೈಲೈನ್ ಡೆವೆಲಪರ್ಸ್ ಗೆ ಅನುಮತಿ ನೀಡಲಾಗಿದೆ,’’ ಎಂದು ಆಕ್ಷೇಪಿಸಿದರು.
ಇಡೀ ಜಾಗವು ಜಿಬಿಎಗೆ ಹಸ್ತಾಂತರವಾಗಿರುವ ವಿಚಾರ ಪರಿಗಣಿಸಿದ ನ್ಯಾಯಪೀಠ, ‘‘ಅರ್ಜಿ ಕುರಿತ ಮುಂದಿನ ವಿಚಾರಣೆವರೆಗೆ ಪಟ್ಟಂದೂರು ಅಗ್ರಹಾರದ ಸರ್ವೆ ನಂಬರ್ 142ರಲ್ಲಿನ ಜಾಗದಲ್ಲಿಯಾವುದೇ ನಿರ್ಮಾಣ ಚಟುವಟಿಕೆ ನಡೆಯದಂತೆ ಜಿಬಿಎ ಮುಖ್ಯ ಆಯುಕ್ತರು ನೋಡಿಕೊಳ್ಳಬೇಕು. ಹಾಗೆಯೇ, ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸಿರುವ ಸಂಬಂಧ ಜಿಬಿಎ ಮುಖ್ಯ ಆಯುಕ್ತರ ಕಚೇರಿಯ ಸಂಬಂಧಪಟ್ಟ ಅಧಿಕಾರಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು,’’ ಎಂದು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.
ಸ್ಕೈಲೈನ್ ಡೆವಲಪರ್ಸ್ ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೆ ನಂ.142/1ಬಿ ರಲ್ಲಿನ 2 ಎಕರೆ 7 ಗುಂಟೆ ಜಾಗ ಪರಿವರ್ತನೆ ಮಾಡಿ ಅನಧಿಕೃತವಾಗಿ ಬಡಾವಣೆ ನಿರ್ಮಿಸಿದೆ. ನಕ್ಷೆ ಮಂಜೂರಾತಿ ಪಡೆಯದೇ ಹಲವು ನಿವೇಶನ ರಚನೆ ಮಾಡಿ, ಹಲವರಿಗೆ ಮಾರಾಟ ಮಾಡಿದೆ. ನಿವೇಶನ ಖರೀದಿದಾರರು ಅನಧಿಕೃತವಾಗಿ ಖಾತೆ ಹಾಗೂ ಕಟ್ಟಡ ಪರವಾನಗಿ ಪಡೆದು ನಿರ್ಮಾಣ ಚಟುವಟಿಕೆ ನಡೆಸಿದ್ದಾರೆ. ಈ ಅಕ್ರಮ ಬಡಾವಣೆ ವಿರುದ್ಧ ಕ್ರಮ ಜರುಗಿಸಲು ಸರಕಾರ, ಜಿಬಿಎ (ಹಿಂದಿನ ಬಿಬಿಎಂಪಿ) ಮತ್ತು ಬಿಡಿಎಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಅಲ್ಲದೆ, ಅರ್ಜಿದಾರರು ತಮ್ಮ ಮನವಿ ಆಧರಿಸಿ ಯಾವುದೇ ಕ್ರಮ ಕೈಗೊಂಡಿಲ್ಲ. ಅನಧಿಕೃತ ನಿರ್ಮಾಣ ತೆರವುಗೊಳಿಸಿಲ್ಲ. ಇದು ಪಟ್ಟಂದೂರು ಗ್ರಾಮದ ಪ್ರತಿಯೊಬ್ಬ ನಿವಾಸಿಯ ಮೇಲೆ ಪರಿಣಾಮ ಬೀರಲಿದೆ. ಪಟ್ಟಂದೂರು ಅಗ್ರಹಾರದ ಸರ್ವೆ 142ರಲ್ಲಿನ ಜಾಗದಲ್ಲಿಯಾವುದೇ ನಿರ್ಮಾಣ ಚಟುವಟಿಕೆ ನಡೆಸುವುದನ್ನು ನಿರ್ಬಂಧಿಸುವಂತೆ ರಾಜ್ಯ ಸರಕಾರ, ಬಿಡಿಎ ಮತ್ತು ಜಿಬಿಎ ಸೇರಿದಂತೆ ಸಂಬಂಧಪಟ್ಟ ಇನ್ನಿತರ ಪ್ರಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.