ತ್ಯಾಜದಿಂದ ಕಪಿಲೆಗೆ ಕಂಟಕ-ಜಲಚರಗಳಿಗೂ ಸಂಕಷ್ಟ | ಪಟ್ಟಣ, ಗ್ರಾಮ ಆಡಳಿತ ನಿರ್ಲಕ್ಷ್ಯ
ರಂಗರಾಜು ಸರಗೂರು
ಮೇಲ್ ............
ಕರ್ನಾಟಕದ ಹೆಮ್ಮೆಯ ನದಿಗಳಲ್ಲಿಒಂದಾದ ಕಪಿಲಾ (ಕಪಿಲೆ) ನದಿಯೊಂದಿಗೆ ಸ್ಥಳೀಯ ಆಡಳಿತ ಚೆಲ್ಲಾಟವಾಡುತ್ತಿದೆ. ಸರಗೂರು ಸೇರಿದಂತೆ ನದಿಯ ದಡದಂಚಿನ ಗ್ರಾಮಗಳ ತ್ಯಾಜ್ಯ, ಚರಂಡಿ ನೀರು ನದಿಗೆ ನೇರವಾಗಿ ಸೇರುತ್ತಿರುವುದರಿಂದ ನದಿಯ ನೀರು ತೀವ್ರವಾಗಿ ಕಲುಷಿತಗೊಳ್ಳುತ್ತಿದೆ.
ನದಿ ದಡದಲ್ಲಿರುವ ತಾಲೂಕಿನ ಹತ್ತಾರು ಗ್ರಾಮಗಳ ಕೊಳಚೆ ನೀರು ಜೀವಜಲದೊಂದಿಗೆ ಬೆರೆತು ಕಪಿಲೆ ಮಲಿನವಾಗುತ್ತಿದ್ದಾಳೆ. ನದಿ ದಡದಲ್ಲಿಬೆಳೆದಿರುವ ಗಿಡಗಂಟಿಗಳು ಮತ್ತು ಕಸದ ನಿರ್ವಹಣೆ ಕೊರತೆ ಪರಿಣಾಮ ಕುಡಿಯಲು ಹಾಗೂ ದೈನಂದಿನ ಬಳಕೆಗೆ ನೀರು ಸಿಗುತ್ತಿಲ್ಲ. ಕಲುಷಿತ ನೀರು ಸೇವನೆಯಿಂದಾಗಿ ಚರ್ಮದ ಕಾಯಿಲೆಗಳಂಥ ಗಂಭೀರ ಸಮಸ್ಯೆಗಳೂ ಎದುರಾಗುತ್ತಿವೆ.
ನದಿಗೆ ಕೊಳಚೆ ನೀರು:
ಪಟ್ಟಣದ ಸುತ್ತಲೂ ಹರಿಯುವ ಕಪಿಲಾ ನದಿಯ ಒಡಲನ್ನು ಕೊಳಚೆ ನೀರು ಸೇರುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಸ್ಥಳೀಯ ಆಡಳಿತವಾಗಲಿ ಗಮನಹರಿಸದೆ ಇರುವುದು ವಿಪರ್ಯಾಸ. ಸರಗೂರು ಪಟ್ಟಣದಲ್ಲಿ12 ವಾರ್ಡ್ ಗಳಿದ್ದು, 12 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಯುಜಿಡಿ ಇಲ್ಲದ ಕಾರಣ ಪಟ್ಟಣ ಪಂಚಾಯಿತಿಯು ಚರಂಡಿ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ. ಮಳೆ ಬಂದರಂತೂ ಸಮಸ್ಯೆ ಹೇಳತೀರದು. ‘‘ನದಿಗೆ ಹರಿದು ಬರುವ ಚರಂಡಿ ನೀರಿಗೆ ಅಡ್ಡಲಾಗಿ ಪಟ್ಟಣ ಪಂಚಾಯಿತಿಯಿಂದ ತ್ಯಾಜ್ಯ ವಸ್ತುಗಳನ್ನು ತಡೆಯಲು ತೊಟ್ಟಿ ನಿರ್ಮಿಸಲಾಗಿದ್ದು, ನಿರ್ವಹಣೆ ಇಲ್ಲದೆ ಹದಗೆಟ್ಟಿದೆ. ಮಳೆ ಬಂದರಂತೂ ತೊಟ್ಟಿಯಲ್ಲಿನೀರು ತುಂಬಿ ರಸ್ತೆಯಲ್ಲಿಹರಿಯುತ್ತದೆ. ಇದರಿಂದ ನಿವಾಸಿಗಳ ಕಷ್ಟ ಅಷ್ಟಿಷ್ಟಲ್ಲ’’ ಎನ್ನುತ್ತಾರೆ ಮಹದೇವಶೆಟ್ಟಿ.
ಗ್ರಾಮಾಂತರದಲ್ಲೂಸಮಸ್ಯೆ:
ಕಬಿನಿ ಜಲಾಶಯದ ಪಕ್ಕದಲ್ಲೆಇರುವ ಬಿದರಹಳ್ಳಿ, ಆಗತ್ತೂರು, ಸಾಗರೆ, ಕೊತ್ತೇಗಾಲ, ಕುನ್ನಪಟ್ಟಣ, ಶಾಂತಿಪುರ, ಇಟ್ನ, ತುಂಬಸೋಗೆ ಮಾಗುಡಿಲು, ಕಾಳಿಹುಂಡಿ, ಕೆ.ಬೆಳ್ತೂರು, ಹೆಬ್ಬಲಗುಪ್ಪೆ... ನದಿ ದಡದಲ್ಲಿರುವ ಗ್ರಾಮಗಳ ತ್ಯಾಜ್ಯ, ಚರಂಡಿ ನೀರು ಮಳೆ ನೀರಿನೊಂದಿಗೆ ಬೆರೆತು ನದಿ ಪಾಲಾಗುತ್ತಿವೆ.
ಜಲಚರ ಜೀವಿಗಳಿಗೂ ಕಂಟಕ:
ನದಿಯಲ್ಲಿತ್ಯಾಜ್ಯ, ಚರಂಡಿ ನೀರು ಬೆರೆತು ನದಿ ಕಲುಷಿತಗೊಂಡು ನದಿಯ ಆಮ್ಲಜನಕ ಮಟ್ಟ ಕಡಿಮೆಯಾಗಿ ಮೀನು ಮತ್ತು ಇತರೆ ಜಲಚರಗಳಿಗೆ ತೊಂದರೆಯಾಗುತ್ತಿದೆ. ಪಟ್ಟಣದ ಕೆಲ ವಾರ್ಡ್ ಗಳ ಕಕ್ಕಸು ನೀರು ಕೂಡ ನದಿ ಪಾಲಾಗುತ್ತಿದೆ. ಚರಂಡಿಯಲ್ಲಿತ್ಯಾಜ್ಯ ವಸ್ತುಗಳು ಸಿಲುಕಿ ಕಟ್ಟಿಕೊಂಡರೆ ತೆರವು ಮಾಡುವ ಸಂದರ್ಭದಲ್ಲಿಶೌಚ ನೀರು ಕೂಡ ಸೇರುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೌರಕಾರ್ಮಿಕರು ಹೇಳುತ್ತಾರೆ.
ಇದಲ್ಲದೆ ಸರಗೂರು ಪಟ್ಟಣದ ಕೂಗಳತೆ ದೂರದಲ್ಲಿರುವ ಚಿಕ್ಕದೇವಮ್ಮನ ಬೆಟ್ಟಕ್ಕೆ ಬರುವ ಭಕ್ತಾಧಿಗಳು ಕಪಿಲೆ ನೀರನ್ನು ಊಟ, ಸ್ಥಾನ, ನೈವೇದ್ಯ ಮತ್ತು ಕುಡಿಯಲೂ ಬಳಸುವುದುಂಟು. ಸ್ನಾನ ಮಾಡುವುದರಿಂದ ತಮಗೆ ಅರಿವಿಲ್ಲದಂತೆ ಭಕ್ತರಿಗೆ ಚರ್ಮ ಕಾಯಿಲೆಗಳಿಗೆ ಹಾಗೂ ರೋಗ ರುಜಿನಗಳಿಗೂ ತುತ್ತಾಗುತ್ತಿದ್ದಾರೆ. ಇದಲ್ಲದೆ ಪಟ್ಟಣದ ದಕ್ಷಿಣ ದಿಕ್ಕಿನಲ್ಲಿಕಬಿನಿ ಬಲದಂಡೆ ನಾಲೆ ಹಾದು ಹೋಗಿದ್ದು, ನೀರಾವರಿ ಉದ್ದೇಶದ ನಾಲೆಗೆ ಚರಂಡಿ ನೀರು ನಿತ್ಯ ಸೇರುತ್ತಿದೆ. ನಾಳೆಯ ನೀರು ಅಂತಿಮವಾಗಿ ಕಪಿಲೆ ನದಿಯನ್ನು ಸೇರಲಿದೆ. ನಾಲೆಯಲ್ಲಿನೀರು ಸ್ಥಗಿತ ಅವಧಿಯಲ್ಲಿಕೊಳಚೆ ನೀರು ಸೊಳ್ಳೆಗಳ ಆವಾಸ ತಾಣವಾಗುತ್ತಿದೆ. ನಾಲೆಗಳ ಸಮೀಪದ ಮನೆಗಳಲ್ಲಿಸಂಜೆ ಆಗುತ್ತಿದ್ದಂತೆ ರಾತ್ರಿಯಿಡಿ ಸೊಳ್ಳೆಗಳು ನೀಡುವ ಉಪಟಳ ಹೇಳತೀರದು. ಜನರ, ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಕಪಿಲಾ ನದಿಗೆ ಮತ್ತು ನಾಲೆಗೆ ಕೊಳಚೆ ನೀರು ಸೇರುತ್ತಿರುವುದನ್ನು ತಪ್ಪಿಸಲು ಸ್ಥಳೀಯ ಶಾಸಕರು ಸಂಸದರು, ಪರಿಸರ ಇಲಾಖೆ ಮತ್ತು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೋಟ್ಸ್
ಕೊಳಚೆ ನೀರು ನದಿ ಪಾಲಾಗಿ ತುಂಬಾ ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು ನದಿಗೆ ನೀರು ಸೇರದಂತೆ ಕ್ರಮವಹಿಸಬೇಕು. ಇದರಿಂದ ಜನರಿಗೆ ಆಗುವ ಅನಾಹುತಗಳನ್ನು ತಡೆಗಟ್ಟಬೇಕು. ಜನರು ಆರೋಗ್ಯಕ್ಕೆ ತುಂಬಾ ಕಾಳಜಿವಹಿಸಬೇಕು.
- ರವಿಕುಮಾರ್ , ವಕೀಲರು, ಮೈಸೂರು.
ಎಂವೈಎಸ್ ಎಸ್ ಆರ್ ಜಿ ನ್ಯೂಸ್ 25-8-2026(1) 1
ಸರಗೂರು ಪಟ್ಟಣದ ಅಪ್ಪು ಸರ್ಕಲ್ ಹತ್ತಿರ ಚರಂಡಿ ನೀರು ನದಿ ಸೇರುತ್ತಿರುವುದು.
ಎಂವೈಎಸ್ ಎಸ್ ಆರ್ ಜಿ ನ್ಯೂಸ್ 25-8-2026(1) 1
ಸರಗೂರು ಪಟ್ಟಣದಲ್ಲಿಚರಂಡಿ ನೀರಿಗೆ ಅಡ್ಡಲಾಗಿ ನಿರ್ಮಿಸಿರುವ ತ್ಯಾಜ್ಯ ವಸ್ತುಗಳ ಶುದ್ಧೀಕರಣದ ನೀರಿನ ತೊಟ್ಟಿ.
ಎಂವೈಎಸ್ ಎಸ್ ಆರ್ ಜಿ ನ್ಯೂಸ್ 25-8-2026(1) 1
ಸರಗೂರು ಪಟ್ಟಣದ 1ನೇ ವಾರ್ಡ್ ನಲ್ಲಿಕಬಿನಿ ನಾಲೆಗೆ ನೇರವಾಗಿ ಚರಂಡಿ ನೀರು ಸೇರುತ್ತಿರುವುದು.