ವಿಕ ಸುದ್ದಿಲೋಕ ಕಲಬುರಗಿ ಕೆಪಿಎಸ್ ಸಿ ಹಗರಣದಲ್ಲಿಅಂಪೈರ್ ಯಾರೇ ಇದ್ದರೂ ವಿಕೆಟ್ ಬೀಳೋದು ಮಾತ್ರ ಬಿಜೆಪಿಯವರದ್ದೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು. ನಗರದಲ್ಲಿಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಕೆಪಿಎಸ್ ಸಿ ಹಗರಣದಲ್ಲಿಪ್ರಿಯಾಂಕ್ ವಿಕೆಟ್ ಬೀಳುತ್ತೆ’ ಎಂದು ಹೇಳಿಕೆ ನೀಡಿದ ಆರ್ .ಅಶೋಕ್ ಗೆ ಸಚಿವರು ಈ ರೀತಿ ಪ್ರತಿಕ್ರಿಯೆ ನೀಡಿದರು. ‘‘ಬಿಜೆಪಿ ಬೌಲರ್ ಗಳು ಹೇಗಿದ್ದಾರೆ ಎಂದರೆ ನಮಗೆ ಅವರು ಫುಲ್ ಟಾಸ್ ಹಾಕಿ ನೋಬಾಲ್ ಮಾಡುತ್ತಿದ್ದಾರೆ. ಆದ್ದರಿಂದ ಅಂಪೈರ್ ಯಾರೇ ಇದ್ದರೂ ವಿಕೆಟ್ ಮಾತ್ರ ಬೀಳೋದು ಬಿಜೆಪಿಗರದ್ದು,’’ ಎಂದರು. ‘‘ಕೆಪಿಎಸ್ ಸಿ ಮಧ್ಯವರ್ತಿ ಹೆಗಲ ಮೇಲೆ, ಬಿಜೆಪಿಯವರ ಹೆಗಲ ಮೇಲೆ ಹಾಗೂ ನರೇಂದ್ರ ಮೋದಿ ಅವರ ಹೆಗಲ ಮೇಲೆ ಬಿಜೆಪಿ ಶಲ್ಯಯಿದೆ. ಬಿಜೆಪಿ ನಾಯಕರೇ ಕೇಕ್ ಕಟ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ಪ್ರಿಯಾಂಕ್ ಖರ್ಗೆ ತಪ್ಪು ಮಾಡಿದ್ದರೆ ಸದನದಲ್ಲಿಏಕೆ ಚರ್ಚೆ ಮಾಡಲಿಲ್ಲ? ಶಿವಶಂಕರಪ್ಪ ಸಾಹುಕಾರ್ ಹೆಸರು ಯಾಕೆ ಹೇಳುತ್ತಿಲ್ಲ? ಸಾಹುಕಾರ್ ಗೆ ಅಧ್ಯಕ್ಷ ಮಾಡಿದ್ದು ಯಾರು?,’’ ಎಂದು ಪ್ರಶ್ನಿಸಿದ ಅವರು, ‘‘ಕುಮಾರಸ್ವಾಮಿಗೆ ಮಾಡೋಕೆ ಕೆಲಸ ಇಲ್ಲ. ಅದಕ್ಕಾಗಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ,’’ ಎಂದು ಹೇಳಿದರು. ಪುರಾವೆ ಕೊಡದೆ ಪಾದಯಾತ್ರೆ: ‘‘ಬಿಜೆಪಿಯವರು ಪಾದಯಾತ್ರೆ ಏಕೆ ಮಾಡುತ್ತಿದ್ದಾರೆ ಎಂಬುದು ಸ್ಟಷ್ಟವಾಗಿ ತಿಳಿಸುತ್ತಿಲ್ಲ. ಸದನದಲ್ಲಿಈ ಬಗ್ಗೆ ಚರ್ಚಿಸಲು ಅವಕಾಶವಿತ್ತು. ನಾವೂ ಉತ್ತರ ಕೊಡುತ್ತಿದ್ದೆವು. ಬಿಜೆಪಿಯವರು ಚರ್ಚೆಗೂ ಬರಲಿಲ್ಲ. ನಿಂತಲ್ಲೇ ನಿಂತು ಪ್ರತಿಭಟನೆ ಮಾಡಿದರು. ರಾಜ್ಯದಲ್ಲಿಸಾಕಷ್ಟು ಸಮಸ್ಯೆಗಳಿವೆ. ಸದನದ ಅಮೂಲ್ಯ ಸಮಯ ಹಾಳು ಮಾಡಬಾರದು ಎಂದು ಬಿ.ನಾಗೇಂದ್ರ ಸುದ್ದಿಗೋಷ್ಠಿ ಕರೆದರು. ಬಳಿಕ ದಾಖಲೆಗಳನ್ನೂ ಬಿಡುಗಡೆ ಮಾಡಿದರು. ಮಾಧ್ಯಮಗಳ ಮುಂದೆ ಬಿಜೆಪಿಗರು ನಾಗೇಂದ್ರ ವಿರುದ್ಧ ಯಾವ ದಾಖಲೆಗಳನ್ನು ನೀಡಿದರು? ಯಾವ ಬ್ಯಾಂಕ್ ನಿಂದ ಹೋಗಿತ್ತೋ ಆ ಹಣ ಅದೇ ಅಕೌಂಟ್ ಗೆ ವಾಪಸ್ ಬಂದಿದೆ. ಯಾವುದೇ ಪುರಾವೆ ಕೊಡದೆ ಪಾದಯಾತ್ರೆ ಮಾಡುತ್ತಿದ್ದಾರೋ? ಪಾದಯಾತ್ರೆ ಮೂಲಕ ಜನರ ಬಳಿಯಾದರೂ ದಾಖಲೆ ಇಡಲಿ. ಹಿಟ್ ಆ್ಯಂಡ್ ರನ್ ಮಾಡಬೇಡಿ. ನೂರು ಸಲ ಸುಳ್ಳು ಹೇಳಿದರೂ ಸತ್ಯವಾಗಲ್ಲ,’’ ಎಂದರು.