ಕೆಪಿಎಸ್ ಸಿ ಅಕ್ರಮ: ಭಾಲ್ಕಿ ಬ್ಯಾಂಕ್ ಮೇಲೆ ಸಿಐಡಿ ದಾಳಿ

Contributed byk.suresh1258@gmail.com|Vijaya Karnataka
kpsc scam cid raids bhalki bank uncovers cash transfer allegations
ವಿಕ ಸುದ್ದಿಲೋಕ ಭಾಲ್ಕಿ ಕೆಪಿಎಸ್ ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನಗರದ ಲೆಕ್ಚರ್ ಕಾಲೋನಿಯ ಓಂಲಕ್ಷ್ಮೇ ಸೌಹಾರ್ದ ಸಹಕಾರಿ ಸಂಘದ ಮೇಲೆ ಸಿಐಡಿ ಅಧಿಕಾರಿಗಳು ಬುಧವಾರ ದಿಢೀರ್ ದಾಳಿ ನಡೆಸಿದ್ದಾರೆ. ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಈ ಬ್ಯಾಂಕ್ ನಿಂದ ಹಣದ ವ್ಯವಹಾರ ನಡೆದಿರುವ ಶಂಕೆಯ ಮೇರೆಗೆ ಸಿಐಡಿ ಡಿವೈಎಸ್ಪಿ ಅಸ್ಲಂ ಬಾಶಾ ನೇತೃತ್ವದಲ್ಲಿ10 ರಿಂದ 15 ಜನ ಪೊಲೀಸರ ತಂಡ ಬುಧವಾರ ಬೆಳಗ್ಗೆ ಬ್ಯಾಂಕ್ ಗೆ ಭೇಟಿ ನೀಡಿ ಸಂಜೆ 5ರವರೆಗೂ ವಿವಿಧ ಖಾತೆ ಪರಿಶೀಲಿಸಿದರು. ಹಣ ಯಾರಿಗೆಲ್ಲವರ್ಗಾವಣೆ ಆಗಿದೆ ಎನ್ನುವ ಮಾಹಿತಿ ಜತೆಗೆ ವಿವಿಧ ದಾಖಲೆ ಪರಿಶೀಲನೆ ನಡೆಸಿ ಮರಳಿದ್ದಾರೆ. ಕೆಪಿಎಸ್ ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ಪ್ರಮುಖ ಆರೋಪಿಗಳಾದ ಭಾಲ್ಕಿ ತಾಲೂಕಿನ ಡೋಣಗಾಪುರ ಗ್ರಾಮದ ಬಸವರಾಜ ಕನ್ನಾಳೆ ಮತ್ತು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗವಾರ್ ವಿಚಾರಣೆ ಬೆನ್ನಲ್ಲೇ ಈ ದಾಳಿ ನಡೆದಿದೆ. ಪಶುವೈದ್ಯಾಧಿಕಾರಿಗಳ ನೇಮಕಾತಿ ಸಂಬಂಧ ಕೆಲ ಅಭ್ಯರ್ಥಿಗಳಿಂದ ಈ ಬ್ಯಾಂಕ್ ನ ಮೂಲಕ ಆರೋಪಿ ಬಸವರಾಜ ಕನ್ನಾಳೆ ಅವರಿಗೆ ಹಣ ವರ್ಗಾವಣೆ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.