ಉಳುಮೆ ಸಿಕ್ಕರೆ ಸಾಲದು, ನೀರೂ ಬೇಕು: ಪಾಳುಬಿದ್ದ ಭೂಮಿಗೆ ಮರುಜೀವ ನೀಡಲಿ ಯೋಜನೆ

Contributed byKeerthi Kolgar|Vijaya Karnataka
Vijay Karnataka
ಆರಗ ರವಿ ಶಿವಮೊಗ್ಗ ್ಟavಜಿ.p್ಠಠಿಠಿappaಃಠಿಜಿಞಛಿsಟ್ಛಜ್ಞಿdಜಿa.್ಚಟಞ ಅದು 2026ರ ಮುಂಗಾರು ಹಂಗಾಮು. ರಾಣೆಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡಾದ ಶಂಕರಪ್ಪ ಲಮಾಣಿ ಬಳಿ ಎತ್ತು ಗಳಾಗಲಿ, ಟ್ರ್ಯಾಕ್ಟರ್ ಆಗಲಿ ಇರಲಿಲ್ಲ. ತನ್ನಲ್ಲಿದ್ದ 3.16 ಎಕರೆ ಜಮೀನಿನಲ್ಲಿಕಳೆ ತೆಗೆಯಲು ತನ್ನಿಬ್ಬರು ಮಕ್ಕಳಿಂದಲೇ ಎಡೆಕುಂಟೆ ಎಳೆಸಿದ ದೃಶ್ಯ, ಬಡ ರೈತರ ಸಂಕಷ್ಟದ ದಾರುಣ ಸ್ಥಿತಿಯನ್ನು ಜಗಜ್ಜಾಹೀರುಗೊಳಿಸಿತು. ಸಣ್ಣ ರೈತರು ಎದುರಿಸುತ್ತಿರುವ ಯಾಂತ್ರೀಕರಣದ ಕೊರತೆ ಮತ್ತು ಗಗನಕ್ಕೇರುತ್ತಿರುವ ಕೃಷಿ ವೆಚ್ಚದ ಸಂಕಷ್ಟಕ್ಕೆ ಇದು ನಿಜಕ್ಕೂ ಕನ್ನಡಿಯಾಗಿತ್ತು. ಕೇಂದ್ರ ಕೃಷಿ ಸಚಿವಾಲಯದ 2023-24ರ ಅಧಿಕೃತ ಭೂ ಬಳಕೆ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿಸುಮಾರು 16 ಲಕ್ಷ ಹೆಕ್ಟೇರ್ ಕೃಷಿ ಯೋಗ್ಯ ಭೂಮಿ ಬಿತ್ತನೆಯಾಗದೆ ಪಾಳುಬಿದ್ದಿತ್ತು. 2026ರಲ್ಲಿಇದು 11.2 ಲಕ್ಷ ಹೆಕ್ಟೇರ್ ಗೆ ಇಳಿಕೆ ಯಾಗಿದ್ದರೂ, ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಳಕೆಯಾಗದೆ ಪಾಳುಬಿದ್ದಿರುವ ಕೃಷಿಭೂಮಿ ಬರೋಬ್ಬರಿ 4.8 ಲಕ್ಷ ಹೆಕ್ಟೇರ್ ಇದೆ. 3 ಎಕರೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಭೂಮಿಯೇ ಹೆಚ್ಚಿನ ಪ್ರಮಾಣದಲ್ಲಿಪಾಳುಬೀಳುತ್ತಿದ್ದು, ಇದಕ್ಕೆ ಸಣ್ಣ ರೈತರ ಆರ್ಥಿಕ ಅಸಹಾಯಕತೆಯೇ ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ‘ಮುಖ್ಯಮಂತ್ರಿ ನೇಗಿಲ ಯೋಗಿ’ ಯೋಜನೆ ಇಂತಹ ಸಂಕಷ್ಟದ ರೈತರ ಪಾಲಿಗೆ ಸಂಜೀವಿನಿಯಾಗಬಲ್ಲದು. ಯೋಜನೆಯ ಲಾಭಗಳೇನು? ಮಲೆನಾಡು, ಅರೆಮಲೆನಾಡು, ಕರಾವಳಿ ಹಾಗೂ ಬಯಲುಸೀಮೆ ಹೀಗೆ ವಿಭಿನ್ನ ವಾತಾವರಣ ಹೊಂದಿರುವ ಕರ್ನಾಟಕದಲ್ಲಿಕೃಷಿಯೂ ಅಷ್ಟೇ ವೈವಿಧ್ಯತೆಯಿಂದ ಕೂಡಿದೆ. ‘ಮುಖ್ಯಮಂತ್ರಿ ನೇಗಿಲ ಯೋಗಿ’ ಯೋಜನೆಯು ಸಣ್ಣ ರೈತರ ಉಳುಮೆಯ ಆರಂಭಿಕ ವೆಚ್ಚವನ್ನು ಗಣನೀಯ ವಾಗಿ ತಗ್ಗಿಸಲಿದೆ. ಟ್ರ್ಯಾಕ್ಟರ್ ಬಾಡಿಗೆ, ಡೀಸೆಲ್ ಹಾಗೂ ಕಾರ್ಮಿಕರ ವೆಚ್ಚ ಭರಿಸಲಾಗದ ರೈತರಿಗೆ ಇದು ತಕ್ಷಣದ ಆಸರೆಯಾಗಲಿದ್ದು, ಮಳೆ ಬರುವ ಸರಿಯಾದ ಸಮಯಕ್ಕೆ ಭೂಮಿ ಹದಗೊಳಿಸಲು ಅನುವು ಮಾಡಿಕೊಡುತ್ತದೆ. ಲಾಭಕ್ಕಿಂತ ವೆಚ್ಚವೇ ಹೆಚ್ಚಿರುವ ಕಾರಣಕ್ಕೆ ಭತ್ತ, ರಾಗಿ, ಸಿರಿಧಾನ್ಯ ಬೆಳೆಯಲು ಹಿಂಜರಿಯುವ ರೈತರಿಗೆ ಸರಕಾರವೇ ಭೂಮಿ ಉಳುಮೆ ಮಾಡಿಕೊಟ್ಟರೆ, ಇದು ಆಹಾರ ಧಾನ್ಯಗಳ ಉತ್ಪಾದನೆಗೂ ದೊಡ್ಡ ಪ್ರೋತ್ಸಾಹವಾಗಲಿದೆ. ನೀರಾವರಿಗೂ ಆದ್ಯತೆ ಇರಲಿ ಸರಕಾರ ಸಣ್ಣ ರೈತರ ಭೂಮಿಯನ್ನು ಉಳುಮೆ ಮಾಡಿ ಕೊಟ್ಟ ತಕ್ಷಣ ಸಮಸ್ಯೆಗಳೆಲ್ಲವೂ ಪರಿಹಾರ ಆಗುತ್ತವೆ ಎಂದೇನಿಲ್ಲ. ಕರ್ನಾಟಕದಲ್ಲಿಬಹುತೇಕ ಮಳೆಯಾಧಾರಿತ ಕೃಷಿ ಮಾಡುತ್ತಿದ್ದು, ಮಳೆಯ ಅನಿಶ್ಚಿತತೆ ರೈತರ ಬದುಕನ್ನೇ ಅತಂತ್ರವಾಗಿಸಿದೆ. ಬರ, ಅತಿವೃಷ್ಟಿ, ಕಾಡುಪ್ರಾಣಿಗಳ ಹಾವಳಿ, ಬೆಳೆಗಳಿಗೆ ತಗಲುವ ವಿಚಿತ್ರ ರೋಗ ರುಜಿನಗಳು ಬೆಳೆ ಬೆಳೆಯುವುದಕ್ಕಿಂತ ಕೂಲಿ ಮಾಡಿಕೊಂಡು ಸುಮ್ಮನಿರುವುದೇ ಲೇಸು ಎಂಬಂತೆ ಮಾಡಿವೆ. ಉಚಿತ ಮಣ್ಣು ಪರೀಕ್ಷೆ, ಯಾವ ಮಣ್ಣಿನಲ್ಲಿಯಾವ ಬೆಳೆಗಳನ್ನು ಬೆಳೆಯಬೇಕು ಎಂಬುದನ್ನು ಕಡ್ಡಾಯ ಮಾಡುವುದು, ಬಿತ್ತನೆ ವಿಫಲವಾದರೆ ಸೂಕ್ತ ಪರಿಹಾರ, ಬರಪೀಡಿತ ತಾಲೂಕುಗಳಲ್ಲಿಸಿರಿಧಾನ್ಯ, ತೊಗರಿ, ಹೆಸರು, ಕಡಲೆ ಮತ್ತಿತರ ಕಡಿಮೆ ನೀರಿನ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು, ಕೃಷಿಗೆ ಅಗತ್ಯ ನೀರಾವರಿ ಸೌಲಭ್ಯ ಕಲ್ಪಿಸುವುದು ಮತ್ತು ರೈತರು ಬೆಳೆದ ಬೆಳೆಗೆ ಲಾಭದಾಯಕ ದರ ಸಿಗುವಂತೆ ಯೋಜನೆ ರೂಪಿಸಿದರೆ ಮಾತ್ರ ರೈತರ ಕೃಷಿ ಭೂಮಿಯಲ್ಲಿಸರಕಾರ ಉಳುಮೆ ಮಾಡಿಕೊಟ್ಟಿದ್ದು ಸಾರ್ಥಕವಾಗುತ್ತದೆ. ನೀರು ಕೊಟ್ಟು ಉಳುಮೆ ಮಾಡಿ! ರೈತರು ಕೃಷಿ ಜಮೀನು ಹಾಳುಬಿಡಲು ಪ್ರಮುಖ ಕಾರಣ ನೀರಿನ ಕೊರತೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿರೈತರ ಬಳಿ ಹತ್ತಾರು ಎಕರೆ ಜಮೀನಿದ್ದರೂ ನೀರಿನ ಕೊರತೆಯಿಂದ ಕೃಷಿಗೆ ತೀವ್ರ ಹಿನ್ನಡೆಯಾಗಿದೆ. ಇಂತಹ ಕೃಷಿ ಭೂಮಿಯನ್ನು ಸರಕಾರ ಉಳುಮೆ ಮಾಡಿಕೊಟ್ಟರೂ ಪ್ರಯೋಜನ ಏನು? ಮಳೆಯ ವಿಳಂಬ, ಕಡಿಮೆ ಮಳೆ, ಅಕಾಲಿಕ ಮಳೆ, ಅಂತರ್ಜಲ ಕುಸಿತ, ಕೆರೆ, ಕಾಲುವೆಗಳಲ್ಲಿನೀರಿಲ್ಲದಿರುವುದು ಕೃಷಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ತುಮಕೂರು ಕೇಂದ್ರ ಒಣವಲಯದ ಅಧ್ಯಯನದಲ್ಲಿರೈತರು ಜಮೀನು ಪಾಳುಬಿಡಲು ಮಳೆ ಮತ್ತು ನೀರಾವರಿ ಕೊರತೆಯೇ ಮುಖ್ಯ ಕಾರಣ ಎಂದು ಹೇಳಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಡೀಸೆಲ್ , ವಿದ್ಯುತ್ , ಕೂಲಿ, ಯಂತ್ರೋಪಕರಣಗಳ ಬಾಡಿಗೆ ವೆಚ್ಚ ಮುಗಿಲೆತ್ತರಕ್ಕೆ ಚಿಮ್ಮುತ್ತಿದ್ದರೆ ಇತ್ತ ಕೃಷಿಗೆ ಬೇಕಾದ ನೀರು ಪಾತಾಳ ಕಾಣುತ್ತಿದೆ. ಎಲ್ಲಸವಾಲುಗಳನ್ನು ಎದುರಿಸಿ ಬೆಳೆಯನ್ನು ಮಾರುಕಟ್ಟೆಗೆ ತಂದರೆ ಉತ್ತಮ ಧಾರಣೆಯೂ ಸಿಗದೆ ಎಷ್ಟೋ ಬಾರಿ ರಸ್ತೆ ಬದಿ ಸುರಿದು ಹೋಗುವ ಸ್ಥಿತಿ ರೈತರದ್ದು. ಸರಕಾರ ಇಂತಹ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದರೆ ಮಾತ್ರ ‘ಮುಖ್ಯಮಂತ್ರಿ ನೇಗಿಲ ಯೋಗಿ’ ಯೋಜನೆಗೆ ಅರ್ಥ ಬರುತ್ತದೆ. ‘ನೀರಿನ ಅನಿಶ್ಚಿತತೆ-ಬೆಳೆ ವಿಫಲವಾಗುವ ಭಯ-ಹೆಚ್ಚುತ್ತಿರುವ ಕೃಷಿ ವೆಚ್ಚ-ಕಾರ್ಮಿಕರು, ಯಂತ್ರಗಳ ಕೊರತೆ-ಕಡಿಮೆ ಲಾಭ’ ಇದಕ್ಕೆ ಪರಿಹಾರ ಕಂಡುಕೊಂಡರೆ ನೇಗಿಲ ಯೋಗಿ ರಾಜಕೀಯ ಲಾಭದ ಘೋಷಣೆಯಾಗದೆ ನಿಜವಾಗಿಯೂ ಪಾಳುಬಿದ್ದ ಜಮೀನನ್ನು ಕೃಷಿಗೆ ಮರಳಿಸುವ ಯಶಸ್ವಿ ಯೋಜನೆಯಾಗುತ್ತದೆ.