ನಾನು ಓದಿದ

Contributed byshubha.hegde@timesgroup.com|Vijaya Karnataka
balipada a reflection of the kunabi communitys nurturing
ಕುಣಬಿ ಸಮುದಾಯದ ಜೀವನದರ್ಶನ

ದೀಪಕ್ ಭಟ್ ದುಂಡಿ
ಶ್ರೀಧರ್ ಬಳಗಾರ ಅವರ ಕಾದಂಬರಿ ‘ಬಲಿಪಾದ’ದಲ್ಲಿಕುಣಬಿ ಜನಾಂಗದ ನಂಬಿಕೆ. ಪ್ರಕೃತಿ ಪ್ರೇಮದ ಮೇಲೆ ಬೆಳಕು ಚೆಲ್ಲುತ್ತದೆ.

ಪಂಡು, ಆ ಜನಾಂಗದ ನಂಬಿಕೆಗೆ ವಿರುದ್ಧವಾಗಿ ಹೊಟ್ಟೆ ತುಂಬುವ ಭತ್ತವನ್ನು ಬಿಟ್ಟು, ದುಡ್ಡು ತರುವ ಅಡಿಕೆಯನ್ನು ಬೆಳೆಯಲು ಶುರುಮಾಡುತ್ತಾನೆ. ಆ ಸಮುದಾಯದ ಹಿರಿಯರ ಪ್ರಕಾರ, ಭೂಮಿಯನ್ನು ಅನ್ನ ಬೆಳೆಯಲು ಬಳಸಬಹುದೇ ಹೊರತು ದುಡ್ಡು ಮಾಡಲು ಅಲ್ಲ. ಹಾಗೇನಾದರೂ ಮಾಡಿದರೆ ಅದು ಇಡೀ ಸಮುದಾಯಕ್ಕೆ ಅಪರಾಧವೆಸಗಿದಂತೆ. ಕೊನೆಯಲ್ಲಿಆನೆಗಳು ಹಿಂಡುಹಿಂಡಾಗಿ ಬಂದು ಪಂಡುವಿನ ತೋಟವನ್ನು ನಾಶಮಾಡಿ ಹೋಗುತ್ತವೆ. ಇಡೀ ಕಾದಂಬರಿ ಭೂಮಿ, ಕೃಷಿ ಹಾಗೂ ಪರಿಸರದ ಜೊತೆಗೆ ಮನುಷ್ಯನಿಗಿರುವ ಸಂಬಂಧದ ಬಗ್ಗೆ ಎರಡು ವಿಭಿನ್ನ ದೃಷ್ಟಿಕೋನಗಳ ಮುಖಾಮುಖಿಯನ್ನು ಕೂಲಂಕಷವಾಗಿ ನೋಡುವ ಪ್ರಯತ್ನದಂತೆ ಕಾಣುತ್ತದೆ.

ಕುಣಬಿ ಜನಾಂಗದ ಹಿರಿಯರಿಗೆ ಪ್ರಕೃತಿ ಬಗ್ಗೆ ಇರುವ ಜ್ಞಾನದ ತಿರುಳು ಅವರ ದಿನನಿತ್ಯದ ಬದುಕು, ಆಚರಣೆ ಮತ್ತು ನಂಬಿಕೆಗಳಲ್ಲಿಅಂತರ್ಗತವಾಗಿರುವುದನ್ನು ಕಾದಂಬರಿ ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಕಾದಂಬರಿಯ ವಿಶೇಷವೆಂದರೆ ಜ್ಞಾನ, ನಂಬಿಕೆ, ವಾಸ್ತವ, ಭ್ರಮೆ ಎನ್ನುವ ಸರಳ ವರ್ಗೀಕರಣಕ್ಕೆ ಇಳಿಯದೇ ಇರುವುದು. ಊರ ಹಿರಿಯರಾದ ಮಿರಾಶಿಯ ಅನುಮತಿಯನ್ನು ಪಡೆದು ಶಿಕಾರಿ ಮಾಡಬೇಕು, ಗಬ್ಬಕಟ್ಟಿದ, ಮರಿಹಾಕಿದ ಪ್ರಾಣಿಗಳನ್ನು ಬೇಟೆಯಾಡಬಾರದು ಎಂಬ ನಿಯಮಗಳು, ತಾವು ಬೆಳೆ ಬೆಳೆಯುವ ಜಮೀನು ಭೂಯನಾಸನಂಥ ಸ್ಥಳೀಯ ದೇವರಿಗೆ ಸೇರಿದ್ದೆಂಬ ಕಲ್ಪನೆಗಳು ಇವೆಲ್ಲಅವರ ಜ್ಞಾನದ ತಳಹದಿಯ ಮೇಲೆ ರೂಪುಗೊಂಡ ನಂಬಿಕೆಗಳು. ಪರಿಸರ ತತ್ವಶಾಸ್ತ್ರದ ಒಳನೋಟಗಳು ಕುಣಬಿ ಸಮುದಾಯದ ದೈನಂದಿನ ಆಚರಣೆಗಳಲ್ಲಿಹಾಸುಹೊಕ್ಕಾಗಿರುವುದು ಕಂಡುಬರುತ್ತದೆ.

ಸಿವತೆಯ ಮದುವೆæಯಂತೂ ಮನುಷ್ಯ ಮತ್ತು ಮರಗಳ ನಡುವಿನ ವ್ಯತ್ಯಾಸವನ್ನು ಪೂರ್ತಿಯಾಗಿ ಧಿಕ್ಕರಿಸುತ್ತದೆ. ಸಿವತೆ ವಯಸ್ಸಾದ ಮರ ಇಷ್ಟವಿಲ್ಲವೆಂದು ಎಳೆಯ ಪ್ರಾಯದ ಮರವನ್ನೇ ವರಿಸುತ್ತಾಳೆ. ಮುಂದೆ ಆ ಮರದ ಜೊತೆಯೇ ಸಂಸಾರ ನಡೆಸುತ್ತಾಳೆ. ಇಲ್ಲಿಅವಳ ಪ್ರಕಾರ ಮರಕ್ಕೆ ತನ್ನದೇ ಆದ ವ್ಯಕ್ತಿತ್ವವಿದೆ, ಮನಸ್ಸಿದೆ ಮತ್ತು ಭಾವನೆಗಳಿವೆ. ಆ ಮೂಲಕ, ಮಾನವತಾವಾದವು ಎತ್ತಿಹಿಡಿಯುವ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಶ್ರೇಣೀಕೃತ ಸಂಬಂಧಕ್ಕೆ ‘ಬಲಿಪಾದ’ ಕಾದಂಬರಿಯು ತಾತ್ವಿಕ ಪ್ರತಿರೋಧವನ್ನು ಒಡ್ಡುತ್ತದೆ. ‘ಬಲಿಪಾದ’ ಮಾನವಕೇಂದ್ರಿತ ದೃಷ್ಟಿಕೋನ ಮತ್ತು ಅದರಿಂದ ಹುಟ್ಟಿದ ಬಿಕ್ಕಟ್ಟುಗಳಿಗೆ ಪರ್ಯಾಯ ಹುಡುಕುವ ಕಾದಂಬರಿ.

ಬಲಿಪಾದ

ಲೇ: ದೀಪಕ್ ಭಟ್ ದುಂಡಿ