‘‘ಪಟ್ಟಣದ ಎಪಿಎಂಸಿಯಲ್ಲಿರೈತರಿಂದ ಸೂರ್ಯಕಾಂತಿ ಖರೀದಿಸುವ ವೇಳೆ ಪ್ರತಿ ಕ್ವಿಂಟಾಲ್ ಗೆ 5 ಕೆ.ಜಿ. ಹೆಚ್ಚುವರಿ ಕಡಿತ ಮಾಡಲಾಗುತ್ತಿದ್ದು, ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು,’’ ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಜಾಗೀರನಂದಿಹಾಳ ನೇತೃತ್ವದಲ್ಲಿರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿ ಸಂಚಾರ ತಡೆದು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
‘‘ಈ ವರ್ಷ ಬರ ಆವರಿಸಿದ್ದರಿಂದ ಅಲ್ಪಸ್ವಲ್ಪ ಮಳೆಗೆ ರೈತರು ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಆದರೆ, ದಲ್ಲಾಳಿಗಳ ಕೈಗೆ ಸಿಲುಕಿ ರೈತರು ನಲುಗುವಂತಾಗಿದೆ. ಇಳುವರಿ ಕಡಿಮೆ ಬಂದರೂ ದರ ಹೆಚ್ಚಾಗಿದೆ ಎಂದು ಖುಷಿಯಲ್ಲಿದ್ದ ರೈತರಿಗೆ ದಲ್ಲಾಳಿಗಳು ಸೂಟ್ ಹೆಸರಿನಲ್ಲಿಕಡಿತ ಮಾಡುತ್ತಿರುವುದು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ,’’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಕಾರ್ಯದರ್ಶಿ ನೀಲಪ್ಪ ಶೆಟ್ಟಿ ಹಾಗೂ ಪಿಎಸೈ ವೆಂಕಟೇಶ ಸ್ಥಳಕ್ಕೆ ಆಗಮಿಸಿ, ರೈತರ ಹಾಗೂ ದಲ್ಲಾಳಿಗಳ ನಡುವೆ ಸಮನ್ವಯ ಕಾಪಾಡಲು ಪ್ರತಿ ಕ್ವಿಂಟಾಲ್ ಗೆ 2 ಕೆ.ಜಿ. ಕಡಿತ ಮಾಡುವಂತೆ ಮನವಿ ಮಾಡಿದಾಗ ದಲ್ಲಾಳಿಗಳು ದರದಲ್ಲಿಕಡಿಮೆ ಮಾಡಲು ಮುಂದಾದರು. ಇದಕ್ಕೆ ಒಪ್ಪದ ರೈತರು ಸತ್ಯಾಗ್ರಹ ಮುಂದುವರಿಸಿದರು. ಇದರಿಂದ ಕಾರ್ಯದರ್ಶಿ ಮನೆ ಕಡೆ ತೆರಳಿದರು.
‘‘ಮಾರುಕಟ್ಟೆ ದರದ ಮಾಹಿತಿ ಕೊರತೆ ಹಾಗೂ ತುರ್ತು ಹಣದ ಅಗತ್ಯ ಬಳಸಿಕೊಂಡು ಕೆಲವರು ರೈತರಿಂದ ಹೆಚ್ಚುವರಿ ತೂಕ ಕಡಿತ ಮಾಡುತ್ತಿದ್ದಾರೆ. ಇದರಿಂದ ರೈತರು ತಮ್ಮ ಉತ್ಪನ್ನಕ್ಕೆ ಸಿಗಬೇಕಾದ ಸಂಪೂರ್ಣ ಹಣದಿಂದ ವಂಚಿತರಾಗುತ್ತಿದ್ದಾರೆ,’’ ಎಂದು ರೈತರಾದ ಮಲ್ಲಪ್ಪ ಬೊಮ್ಮನಾಳ, ಅಮ್ಮಣ್ಣ, ಬಸವರಾಜ ಗೋಡಿಹಾಳ, ವಿಜಯಕುಮಾರ, ವೆಂಕಟೇಶ, ಬೀರಪ್ಪ ಮರಳಿ, ಗೌಡಪ್ಪ ಇತರರಿದ್ದರು.
ಕ್ರಮಕ್ಕೆ ಆಗ್ರಹ:
‘‘ಎಪಿಎಂಸಿ ಆಡಳಿತ ಮಂಡಳಿಯವರು ಸೂರ್ಯಕಾಂತಿ ಖರೀದಿ ವೇಳೆ ತೂಕ ಮತ್ತು ಗುಣಮಟ್ಟ ಪರಿಶೀಲನೆಯನ್ನು ಪಾರದರ್ಶಕವಾಗಿ ನಡೆಸಬೇಕು. ಪ್ರತಿ ಕ್ವಿಂಟಾಲ್ ಗೆ 5 ಕೆ.ಜಿ. ಕಡಿತ ಮಾಡುತ್ತಿರುವ ಆರೋಪದ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ, ರೈತರಿಗೆ ನ್ಯಾಯ ಒದಗಿಸಬೇಕು,’’ ಎಂದು ರೈತರು ಒತ್ತಾಯಿಸಿದ್ದಾರೆ.
---
ಆರ್ ಸಿಎಚ್ 18ಮುದಗಲ್ 01/02:
ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮುದಗಲ್ ಎಪಿಎಂಸಿ ಆವರಣದಲ್ಲಿರೈತರು ಪ್ರತಿಭಟನೆ ನಡೆಸಿದರು.