ಲಕ್ಷಾಂತರ ಭಕ್ತರ ಕಣ್ಮನ ಸೆಳೆಯುವ ತಿರುಮಲದ ಶ್ರೀವಾರಿ ಬ್ರಹ್ಮೋತ್ಸವ ಈ ವರ್ಷ ಅಧಿಕ ಮಾಸದ ವಿಶೇಷತೆಯಿಂದಾಗಿ ಎರಡು ಬಾರಿ ನಡೆಯುತ್ತಿದೆ. ಸೆ. 15ರಿಂದ ಆರಂಭಗೊಂಡಿದ್ದು 23ರವರೆಗೆ ಮೊದಲ ಬ್ರಹ್ಮೋತ್ಸವ ನಡೆದರೆ, ಅ. 11ರಿಂದ 19ರವರೆಗೆ ಎರಡನೇ ಉತ್ಸವ ನಡೆಯಲಿದೆ. ಅಧಿಕ ಮಾಸ ಬರುವ ವರ್ಷದಲ್ಲಿಎರಡು ಬಾರಿ ಬ್ರಹ್ಮೋತ್ಸವ ನಡೆಯುವುದು ಅನೂಚಾನವಾಗಿ ನಡೆದುಕೊಂಡು ಬಂದಿರುವ ವಿಶೇಷ ಸಂಪ್ರದಾಯ.
----
- ಜಯತೀರ್ಥ ಛಪ್ಪರ ವಿಜಯಪುರ
--
ಭೂವೈಕುಂಠವೆಂದೇ ಪ್ರಸಿದ್ಧವಾಗಿರುವ ತಿರುಮಲ ಕ್ಷೇತ್ರ ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರ. ಪಾವನ ತೀರ್ಥಗಳ ಪುಣ್ಯಭೂಮಿಯಾಗಿರುವ ಇಲ್ಲಿನ ಆಚರಣೆಗಳು ಸನಾತನ ಸಂಪ್ರದಾಯದ ಶ್ರೀಮಂತಿಕೆಯನ್ನು ಸಾರುತ್ತವೆ. ಅಂತಹ ವಿಶಿಷ್ಟ ಆಚರಣೆಗಳಲ್ಲಿಶ್ರೀವಾರಿ ಬ್ರಹ್ಮೋತ್ಸವವೂ ಒಂದು. ವಿಶೇಷವಾಗಿ ಗರುಡವಾಹನ ಸೇವೆ ವಿಶ್ವವಿಖ್ಯಾತ.
ಪ್ರತಿವರ್ಷ ನಡೆಯುವ ಈ ಭವ್ಯ ಉತ್ಸವಕ್ಕೆ ಶತಮಾನಗಳ ಇತಿಹಾಸವಿದೆ. ಅಧಿಕ ಮಾಸವಿರುವ ವರ್ಷದಲ್ಲಿಎರಡು ಬಾರಿ ಬ್ರಹ್ಮೋತ್ಸವ ನಡೆಯುವುದು ಇದರ ವಿಶೇಷತೆ. ಪ್ರಸಕ್ತ ವರ್ಷವೂ ಈ ಅಪರೂಪದ ಸಂಪ್ರದಾಯಕ್ಕೆ ಸಾಕ್ಷಿಯಾಗಿದೆ.
ತೊಂಡಮಾನದ ರಾಜನು ಬೆಟ್ಟದ ಮೇಲೆ ವಿಶ್ವಕರ್ಮನಿಂದ ಭವ್ಯ ಮಂದಿರವನ್ನು ನಿರ್ಮಿಸಿದನೆಂದು ನಂಬಿಕೆ. ಆ ಮಂದಿರದಲ್ಲಿವಿಮಾನಾರೂಢನಾಗಿ ಬಂದು ನೆಲೆಸಿದ ಶ್ರೀನಿವಾಸನು ಶಂಖ-ಚಕ್ರಗಳನ್ನು ಧರಿಸಿ, ಒಂದು ಹಸ್ತವನ್ನು ಕಟಿಯ ಮೇಲಿರಿಸಿ, ಮತ್ತೊಂದು ಹಸ್ತದಿಂದ ಭೂವೈಕುಂಠವನ್ನು ಸೂಚಿಸುವಂತೆ ಚತುರ್ಭುಜನಾಗಿ ದರ್ಶನ ನೀಡಿದನು. ಈ ಮೂರ್ತಿಯೇ ಮುಂದೆ ಧ್ರುವಬೇರ ವಿಗ್ರಹವಾಗಿ ಪ್ರಸಿದ್ಧಿ ಪಡೆದಿತು.
ಭಕ್ತರ ಉದ್ಧಾರಕ್ಕಾಗಿ ಬೆಟ್ಟದಲ್ಲಿನೆಲೆಸಿದ ಶ್ರೀನಿವಾಸನ ಆರಾಧನೆಗೆ ದೇವತೆಗಳೆಲ್ಲರೂ ಭೂವೈಕುಂಠಕ್ಕೆ ಆಗಮಿಸಿದರೆಂಬುದು ಪುರಾಣಗಳ ನಂಬಿಕೆ. ಈ ಸಂದರ್ಭದಲ್ಲಿಬ್ರಹ್ಮದೇವರು ಮುಂದಾಳತ್ವ ವಹಿಸಿ, ಉತ್ಸವ ಶ್ರೀನಿವಾಸಮೂರ್ತಿಯನ್ನು ಅಲಂಕರಿಸಿ ವಿವಿಧ ವಾಹನಗಳಲ್ಲಿಮೆರವಣಿಗೆ ನಡೆಸಿದರೆಂದು ಹೇಳಲಾಗುತ್ತದೆ. ಇದೇ ಸಂಪ್ರದಾಯ ಮುಂದೆ ಶ್ರೀವಾರಿ ಬ್ರಹ್ಮೋತ್ಸವವಾಗಿ ಬೆಳೆದು ಬಂದಿದೆ.
ಅಧಿಕ ಮಾಸದಲ್ಲಿಎರಡು ಬಾರಿ ಏಕೆ?
ಸಾಮಾನ್ಯವಾಗಿ ತಿರುಮಲದಲ್ಲಿಬ್ರಹ್ಮೋತ್ಸವವು ಕನ್ಯಾ ಮಾಸ ಮತ್ತು ಆಶ್ವಯುಜ ಮಾಸದ ಅವಧಿಯಲ್ಲಿನಡೆಯುತ್ತದೆ. ಚಾಂದ್ರಮಾನ ಮತ್ತು ಸೌರಮಾನಗಳ ಗಣನೆಯಲ್ಲಿನ ವ್ಯತ್ಯಾಸದಿಂದಾಗಿ ಅಧಿಕ ಮಾಸ ಬಂದಾಗ ಒಂದೇ ವರ್ಷದಲ್ಲಿಎರಡು ಬ್ರಹ್ಮೋತ್ಸವಗಳು ನಡೆಯುವ ಸಂದರ್ಭ ಎದುರಾಗುತ್ತದೆ.
ಅಧಿಕ ಮಾಸದ ವರ್ಷದಲ್ಲಿಸೌರಮಾನ ಮತ್ತು ಚಾಂದ್ರಮಾನ ಗಣನೆಗಳಿಗೆ ಅನುಗುಣವಾಗಿ ಎರಡು ಬಾರಿ ಬ್ರಹ್ಮೋತ್ಸವ ನಡೆಯುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಹೀಗಾಗಿ ಒಂದೇ ವರ್ಷದಲ್ಲಿಎರಡು ಬಾರಿ ಬೆಟ್ಟದೊಡೆಯನ ವೈಭವವನ್ನು ಕಣ್ತುಂಬಿಕೊಳ್ಳುವ ಅವಕಾಶ ಭಕ್ತರಿಗೆ ದೊರೆಯುತ್ತದೆ.
ವಾಹನಗಳ ವೈಭವ
ಧ್ವಜಾರೋಹಣದೊಂದಿಗೆ ಆರಂಭವಾಗುವ ಬ್ರಹ್ಮೋತ್ಸವದಲ್ಲಿಶ್ರೀನಿವಾಸನು ವಿವಿಧ ವಾಹನಗಳಲ್ಲಿಭಕ್ತರಿಗೆ ದರ್ಶನ ನೀಡುತ್ತಾನೆ. ಪೆದ್ದಶೇಷ, ಚಿನ್ನಶೇಷ, ಹಂಸ, ಸಿಂಹ, ಮುತ್ತಿನ ಮಂಟಪ, ಕಲ್ಪವೃಕ್ಷ, ಮೋಹಿನಿ, ಗರುಡ, ಗಜ, ಸೂರ್ಯಪ್ರಭೆ, ಚಂದ್ರಪ್ರಭೆ ಹಾಗೂ ಅಶ್ವವಾಹನಗಳಲ್ಲಿಸ್ವಾಮಿಯ ಉತ್ಸವ ವೈಭವ ಕಂಗೊಳಿಸುತ್ತದೆ.
ಈ ಪೈಕಿ ಗರುಡವಾಹನ ಸೇವೆಗೆ ವಿಶೇಷ ಮಹತ್ವ. ಐದನೇ ದಿನ ವಜ್ರಖಚಿತ ಆಭರಣಗಳಿಂದ ಅಲಂಕರಿಸಲ್ಪಟ್ಟ ಶ್ರೀನಿವಾಸನು ಗರುಡವಾಹನದಲ್ಲಿವಿರಾಜಮಾನನಾಗುತ್ತಾನೆ. ಈ ದಿವ್ಯ ದರ್ಶನಕ್ಕಾಗಿ ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರು ತಿರುಮಲಕ್ಕೆ ಆಗಮಿಸುತ್ತಾರೆ. ‘ಗೋವಿಂದಾ... ಗೋವಿಂದಾ...’ ಎಂಬ ನಾಮಸ್ಮರಣೆಯಲ್ಲಿಭಕ್ತರು ಮೈಮರೆಯುತ್ತಾರೆ.
ಎಂಟನೇ ದಿನ ಶ್ರೀದೇವಿ-ಭೂದೇವಿಯರ ಸಮೇತ ಶ್ರೀನಿವಾಸನು ರಥಾರೂಢನಾಗಿ ಭಕ್ತರಿಗೆ ದರ್ಶನ ನೀಡುತ್ತಾನೆ. ರಥೋತ್ಸವದ ಮರುದಿನ ಶ್ರವಣ ನಕ್ಷತ್ರದ ಸಂದರ್ಭದಲ್ಲಿಸ್ವಾಮಿಪುಷ್ಕರಿಣಿಯಲ್ಲಿನಡೆಯುವ ಅವಭೃತ ಸ್ನಾನವನ್ನು ‘ಚಕ್ರಸ್ನಾನ’ ಎಂದು ಕರೆಯಲಾಗುತ್ತದೆ. ಈ ಮೂಲಕ ಒಂಬತ್ತು ದಿನಗಳ ಬ್ರಹ್ಮೋತ್ಸವಕ್ಕೆ ಮಂಗಳ ಸಮಾಪ್ತಿ ದೊರೆಯುತ್ತದೆ.
ಬ್ರಹ್ಮದೇವರ ನೇತೃತ್ವದಲ್ಲಿಯೇ ಈ ಉತ್ಸವ ಇಂದಿಗೂ ನಡೆಯುತ್ತದೆ ಎಂಬುದು ಭಕ್ತರ ನಂಬಿಕೆ. ದೇವತೆಗಳು, ಋುಷಿ-ಮುನಿಗಳು ತಿರುಮಲಕ್ಕೆ ಆಗಮಿಸಿ ಈ ಮಹೋತ್ಸವದಲ್ಲಿಪಾಲ್ಗೊಳ್ಳುತ್ತಾರೆ ಎಂಬ ಪೌರಾಣಿಕ ನಂಬಿಕೆಯೂ ಇದೆ.
ಎರಡು ಬಾರಿ ಸಂಭ್ರಮ
ಅಧಿಕ ಮಾಸದ ನಿಮಿತ್ತ ಪ್ರಸಕ್ತ ವರ್ಷದಲ್ಲಿಸೆ. 15ರಿಂದ 23ರವರೆಗೆ ಹಾಗೂ ಅ. 11ರಿಂದ 19ರವರೆಗೆ ಎರಡು ಬಾರಿ ಶ್ರೀವಾರಿ ಬ್ರಹ್ಮೋತ್ಸವ ನಡೆಯುತ್ತಿದೆ. ಹೀಗಾಗಿ ಭಕ್ತರಿಗೆ ಈ ವರ್ಷ ಬೆಟ್ಟದೊಡೆಯನ ಬ್ರಹ್ಮೋತ್ಸವ ವೈಭವವನ್ನು ಎರಡು ಬಾರಿ ಕಣ್ತುಂಬಿಕೊಳ್ಳುವ ಅಪೂರ್ವ ಅವಕಾಶ ದೊರೆತಿದೆ.
ಗರ್ಭಗುಡಿಯಲ್ಲಿರುವ ಪರಮಾತ್ಮನೇ ಭಕ್ತರ ಮೇಲಿನ ಅಪಾರ ಕರುಣೆಯಿಂದ ಹೊರಬಂದು ವಿವಿಧ ವಾಹನಗಳಲ್ಲಿವಿರಾಜಿಸಿ ದರ್ಶನ ನೀಡುವ ಈ ಉತ್ಸವದಲ್ಲಿಪಾಲ್ಗೊಳ್ಳುವುದೇ ಬದುಕಿನ ಮಹಾಭಾಗ್ಯ ಎಂಬ ಭಾವ ಭಕ್ತರಲ್ಲಿದೆ. ಭಕ್ತಿ, ಸಂಪ್ರದಾಯ ಮತ್ತು ಆಧ್ಯಾತ್ಮಿಕ ವೈಭವದ ಸಂಗಮವಾಗಿರುವ ಶ್ರೀವಾರಿ ಬ್ರಹ್ಮೋತ್ಸವ ತಿರುಮಲದ ಸನಾತನ ಪರಂಪರೆಯನ್ನು ಜೀವಂತವಾಗಿರಿಸುವ ಮಹೋತ್ಸವವೂ ಹೌದು.
ಬಾಕ್ಸ್
ಮಹಾತ್ಮರೇ ಸಾಕ್ಷಿಯಾದ ಉತ್ಸವ
ಶ್ರೀವಾರಿ ಬ್ರಹ್ಮೋತ್ಸವಕ್ಕೆ ಅನೇಕ ಮಹಾತ್ಮರು, ಯತಿಗಳು ಹಾಗೂ ಹರಿದಾಸರು ಸಾಕ್ಷಿಯಾಗಿ ದಿವ್ಯಾನುಭವ ಪಡೆದಿರುವ ಉಲ್ಲೇಖಗಳು ಇತಿಹಾಸದ ಪುಟಗಳಲ್ಲಿವೆ. ವಿಜಯದಾಸರು ಬ್ರಹ್ಮೋತ್ಸವದ ಸಂದರ್ಭದಲ್ಲಿಭಕ್ತರನ್ನು ಕಂಡು, ‘ನಿನ್ನ ದರುಶನಕೆ ಬಂದವನಲ್ಲವೋ, ಪುಣ್ಯವಂತರ ದಿವ್ಯಚರಣ ನೋಡಲಿ ಬಂದೆ’ ಎಂದು ಶ್ರೀನಿವಾಸನನ್ನು ಸ್ತುತಿಸಿದ್ದಾರೆ.
ಹೀಗೆ ನಾಡಿನ ವಿವಿಧ ಭಾಗಗಳಿಂದ ಅನೇಕ ಮಹಾತ್ಮರು, ದಾಸರು ಮತ್ತು ಭಕ್ತರು ಬ್ರಹ್ಮೋತ್ಸವಕ್ಕೆ ಸಾಕ್ಷಿಯಾಗಿದ್ದಾರೆ. ಇಂದಿಗೂ ದೇಶ-ವಿದೇಶಗಳಿಂದ ಭಕ್ತರು ತಿರುಮಲಕ್ಕೆ ಆಗಮಿಸುತ್ತಾರೆ. ಹಲವು ಕುಟುಂಬಗಳು ಬ್ರಹ್ಮೋತ್ಸವದ ಸಂದರ್ಭದಲ್ಲಿಬೆಟ್ಟದಲ್ಲೇ ನೆಲೆಸಿ ದೀಪಾರಾಧನೆ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸುವ ಸಂಪ್ರದಾಯವನ್ನೂ ಮುಂದುವರಿಸಿಕೊಂಡು ಬಂದಿವೆ