**(ಸ್ಟೋರಿ) ದಕ್ಷಿಣ ಕನ್ನಡವೋ? ಮಂಗಳೂರೋ? ಹಳತು, ಹೊಸತಕ್ಕೆ ಜನಾಭಿಪ್ರಾಯದ ಅಗ್ನಿಪರೀಕ್ಷೆ

Contributed bymambadynews@gmail.com|Vijaya Karnataka
Vijay Karnataka
ಹರೀಶ ಮಾಂಬಾಡಿ ಬಂಟ್ವಾಳ(ದ.ಕ.)

್ಛಛಿಛಿdಚಿa್ಚkvkಞ್ಞಜಃಜಞaಜ್ಝಿ.್ಚಟಞ
ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆಗೆ ಕೊನೆಗೂ ಆಡಳಿತಾತ್ಮಕ ಕಸರತ್ತು ಆರಂಭವಾಗಿದೆ. ಜಿಲ್ಲೆಯನ್ನು ಮಂಗಳೂರು ಜಿಲ್ಲೆಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿ, ಸಾರ್ವಜನಿಕರ ಸಲಹೆ-ಆಕ್ಷೇಪಣೆಗಾಗಿ 30 ದಿನಗಳ ಗಡುವು ನೀಡಿ ಕರಡು ಅಧಿಸೂಚನೆ ಹೊರಡಿಸಲು ನಿರ್ಧರಿಸಿದೆ. ಸರಕಾರದ ಈ ನಡೆ ಕರಾವಳಿಯ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿಜಿಜ್ಞಾಸೆಗೆ ನಾಂದಿ ಹಾಡಿದೆ.

ಒಂದೆಡೆ ಆರ್ಥಿಕ ಪ್ರಗತಿ, ಜಾಗತಿಕ ಹೂಡಿಕೆ ಹಾಗೂ ಶೈಕ್ಷಣಿಕ ಮಾರುಕಟ್ಟೆಗೆ ‘ಮಂಗಳೂರು’ ಬ್ರ್ಯಾಂಡ್ ಅಗತ್ಯ ಎಂಬ ವಾದ ಬಲವಾಗಿದ್ದರೆ, ಮತ್ತೊಂದೆಡೆ ಕರಾವಳಿಯ ಗ್ರಾಮೀಣ ತಾಲೂಕುಗಳ ಸ್ವಂತಿಕೆ ಹಾಗೂ ‘ದಕ್ಷಿಣ ಕನ್ನಡ’ ಎಂಬ ಐತಿಹಾಸಿಕ ಹೆಸರಿನಲ್ಲಿಅಡಗಿರುವ ಕನ್ನಡದ ಹೆಮ್ಮೆಯನ್ನು ಅಳಿಸಿ ಹಾಕಲಾಗುತ್ತಿದೆ ಎಂಬ ಮಾತೂ ಕೇಳಿಬರುತ್ತಿದೆ.

1997ರಲ್ಲಿದಕ್ಷಿಣ ಕನ್ನಡ ಉಳಿದಿತ್ತು: 1997ರಲ್ಲಿಜೆ.ಎಚ್ .ಪಟೇಲ್ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯನ್ನು ಇಬ್ಭಾಗ ಮಾಡಿದಾಗ, ನೂತನ ಜಿಲ್ಲೆ‘ಉಡುಪಿ’ ಎಂದೇ ನಾಮಕರಣಗೊಂಡಿತ್ತು. ಆದರೆ ದಕ್ಷಿಣ ಭಾಗದ ತಾಲೂಕುಗಳು ಮಾತ್ರ ಬ್ರಿಟಿಷರ ಕಾಲದ ‘ಸೌತ್ ಕೆನರಾ’ದ ಮುಂದುವರಿದ ಭಾಗವಾಗಿ ‘ದಕ್ಷಿಣ ಕನ್ನಡ’ ಹೆಸರನ್ನೇ ಉಳಿಸಿಕೊಂಡಿದ್ದವು.

ಹೂಡಿಕೆ-ವಿದೇಶಿ ಆಕರ್ಷಣೆಗೆ ‘ಬ್ರ್ಯಾಂಡ್ ಮಂಗಳೂರು’: ಮರುನಾಮಕರಣದ ಪರವಾಗಿ ನಿಂತಿರುವವರು ಇದನ್ನು ಆರ್ಥಿಕ ಮತ್ತು ಜಾಗತಿಕ ದೃಷ್ಟಿಕೋನದಿಂದ ನೋಡುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಕಾರ, ಹೊರ ಜಗತ್ತಿನಲ್ಲಿಜಿಲ್ಲೆಗೆ ನೈಜ ಮನ್ನಣೆ ಸಿಗಲು ಮಂಗಳೂರು ಹೆಸರೇ ಶ್ರೀರಕ್ಷೆ. ವಿದೇಶಗಳಲ್ಲಿಶಿಕ್ಷಣ, ಉದ್ಯೋಗಕ್ಕೆ ತೆರಳುವ ಯುವಪೀಳಿಗೆ ಗುರುತಿಸಿಕೊಳ್ಳುವುದು ‘ಮಂಗಳೂರು’ ಹೆಸರಿನಲ್ಲೇ ಹೊರತು ‘ದಕ್ಷಿಣ ಕನ್ನಡ’ ಎಂದಲ್ಲ. ಬಂಡವಾಳ ಆಕರ್ಷಿಸಲು ‘ಮಂಗಳೂರು’ ಎಂಬ ಹೆಸರೇ ದೊಡ್ಡ ಆಸ್ತಿ. ಹೀಗಾಗಿ ಜಿಲ್ಲಾಕೇಂದ್ರದ ಹೆಸರನ್ನೇ ಜಿಲ್ಲೆಗೆ ಇಡುವುದು ಸರ್ವತೋಮುಖ ಬೆಳವಣಿಗೆಗೆ ಪೂರಕ ಎನ್ನುವುದು ಮರುನಾಮಕರಣ ಪ್ರತಿಪಾದಕರ ನಿಲುವು.

‘ದಕ್ಷಿಣ ಕನ್ನಡ’ ಎಂಬ ಹೆಸರಿನಲ್ಲೇ ಉಳಿದುಕೊಂಡಿದ್ದ ‘ಕನ್ನಡ’ದ ಅಸ್ಮಿತೆಯನ್ನು ಕಳೆದುಕೊಳ್ಳುವ ಭೀತಿಯನ್ನು ಸಾಮಾಜಿಕ ಚಿಂತಕ ಐ.ಕೆ.ಬೋಳುವಾರು ವ್ಯಕ್ತಪಡಿಸಿದ್ದಾರೆ. ಮದ್ರಾಸ್ ಆಡಳಿತ ಕಾಲದಿಂದಲೂ ‘ಕೆನರಾ’ ಹೆಸರಿನಲ್ಲಿಭಾಷೆಯ ಗುರುತು ಉಳಿದಿತ್ತು. ಬಿ.ಸಿ.ರೋಡ್ ದಾಟಿದ ನಂತರದ ಗ್ರಾಮೀಣ ಜನರಿಗೆ ಮಂಗಳೂರಿನ ಹೆಸರಿನೊಂದಿಗೆ ಮಾನಸಿಕ ಸಂಪರ್ಕ ಅಷ್ಟಾಗಿಲ್ಲ. ದಶಕಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾರಂಗಮಂದಿರ ನಿರ್ಮಾಣ, ಕನ್ನಡ ಶಾಲೆಗಳ ಪುನಶ್ಚೇತನದಂತಹ ಮೂಲ ಸವಾಲು ಬಗೆಹರಿಸುವುದನ್ನು ಬಿಟ್ಟು, ಕೇವಲ ಹೆಸರು ಬದಲಾವಣೆಗೆ ಕೈಹಾಕಿರುವುದು ಆಡಳಿತದ ಇಬ್ಬಂದಿತನ ತೋರಿಸುತ್ತದೆ ಎಂದವರು ಹೇಳಿದ್ದಾರೆ.

ತಿಂಗಳ ಗಡುವಿನಲ್ಲಿನಿರ್ಧಾರ: ರಾಜ್ಯ ಸರಕಾರ ಸದ್ಯ ಕರಡು ಅಧಿಸೂಚನೆಗೆ ಸಮ್ಮತಿ ಸೂಚಿಸಿದ್ದು, ಗೆಜೆಟ್ ಪ್ರಕಟಣೆ ಬಳಿಕ 30 ದಿನಗಳ ಕಾಲ ಸಾರ್ವಜನಿಕರು ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.

ಅಂತಾರಾಷ್ಟ್ರೀಯ ಹೂಡಿಕೆಯ ‘ಕಾರ್ಪೊರೇಟ್ ಬ್ರ್ಯಾಂಡ್ ’ ಹೆಸರಿನ ಆಕರ್ಷಣೆಯೋ ಅಥವಾ ಶತಮಾನಗಳ ಪರಂಪರೆಯ ಗ್ರಾಮೀಣ-ಭಾಷಿಕ ಬೇರುಗಳ ಉಳಿವೋ ಎಂಬ ಪ್ರಶ್ನೆ ಈಗ ಜನರ ಮುಂದಿದೆ. ಸಾರ್ವಜನಿಕರ ಸಂವಾದ ಮತ್ತು ವಿರೋಧದ ಕಾವು ಯಾವ ತಿರುವು ಪಡೆಯಲಿದೆ ಎಂಬುದರ ಮೇಲೆ ‘ದಕ್ಷಿಣ ಕನ್ನಡ’ದ ಭವಿಷ್ಯ ಅಡಗಿದೆ.

ಫೊಟೋ: 19ಬಿಎಚ್ ಡಿಸಿ

ದ.ಕ. ಜಿಲ್ಲಾಧಿಕಾರಿ ಕಚೇರಿ