ಕೇಂದ್ರ ಭೂ ವಿಜ್ಞಾನ ಸಚಿವಾಲಯದ ರಾಜ್ಯ ಸಚಿವರು ಒಡಿಶಾದ ಸಂಬಲ್ಪುರದಲ್ಲಿಭಾರತದ 51ನೇ ಅತ್ಯಾಧುನಿಕ ಡಾಪ್ಲರ್ ಹವಾಮಾನ ರಾಡಾರ್ ಅನ್ನು ಇತ್ತೀಚೆಗೆ ವರ್ಚುವಲ್ ಮೂಲಕ ಉದ್ಘಾಟಿಸಿದ್ದಾರೆ. ಹವಾಮಾನ ಮುನ್ಸೂಚನೆ ಮತ್ತು ವಿಪತ್ತು ನಿರ್ವಹಣೆಯಲ್ಲಿಈ ರಾಡಾರ್ ಪ್ರಮುಖ ಪಾತ್ರ ವಹಿಸಲಿದೆ.ಡಾಪ್ಲರ್ ಹವಾಮಾನ ರಾಡಾರ್ ಎಂದರೇನು?
ಇದು ಡಾಪ್ಲರ್ ಪರಿಣಾಮವನ್ನು ಬಳಸಿ ದೂರದಲ್ಲಿರುವ ವಸ್ತುಗಳ ವೇಗ ಮತ್ತು ಚಲನೆಯ ಕುರಿತು ನಿಖರವಾದ ಮಾಹಿತಿ ನೀಡುವ ವಿಶೇಷ ರಾಡಾರ್ ವ್ಯವಸ್ಥೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಯುಎಸ್ -ಬ್ಯಾಂಡ್ , ಸಿ-ಬ್ಯಾಂಡ್ ಮತ್ತು ಎಕ್ಸ್ -ಬ್ಯಾಂಡ್ ಮುಂತಾದ ವಿವಿಧ ಆವರ್ತನಗಳನ್ನು ಇದಕ್ಕಾಗಿ ಬಳಸುತ್ತದೆ.
ಕಾರ್ಯವೈಖರಿ
ರಾಡಾರ್ ಆಂಟೆನಾದಿಂದ ರೇಡಿಯೋ ತರಂಗಗಳ ರೂಪದಲ್ಲಿಶಕ್ತಿಯ ಕಿರಣವನ್ನು ಹೊರಸೂಸಲಾಗುತ್ತದೆ. ಈ ಕಿರಣವು ವಾತಾವರಣದಲ್ಲಿರುವ ವಸ್ತುಗಳಿಗೆ ಅಪ್ಪಳಿಸಿದಾಗ ಶಕ್ತಿಯು ನಾನಾ ದಿಕ್ಕುಗಳಿಗೆ ಚದುರಿ, ಕೆಲ ಭಾಗವು ನೇರವಾಗಿ ರಾಡಾರ್ ಗೆ ವಾಪಸಾಗುತ್ತದೆ. ಕಿರಣವು ವಸ್ತುವಿಗೆ ತಗುಲಿ ಮರಳಲು ತೆಗೆದುಕೊಳ್ಳುವ ಸಮಯವನ್ನು ಅಳೆಯುವ ಮೂಲಕ, ಹವಾಮಾನ ಇಲಾಖೆಯು ಮಳೆಯ ಹನಿಗಳನ್ನು ಗುರುತಿಸಿ ಅವುಗಳ ದೂರವನ್ನು ಅಂದಾಜಿಸುತ್ತದೆ.
ಪ್ರಮುಖ ಉಪಯೋಗಗಳು
ಮಳೆ ಮತ್ತು ಮೋಡಗಳ ಪತ್ತೆ: ಇದು ಸುಮಾರು 500 ಕಿ.ಮೀ ವ್ಯಾಪ್ತಿಯಲ್ಲಿಮೋಡಗಳ ಚಲನೆಯನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ಮಳೆಯ ಪ್ರಮಾಣವನ್ನು ಅಳೆಯುತ್ತದೆ.
ಚಂಡಮಾರುತ ಮತ್ತು ಸಿಡಿಲು ನಿಗಾ: ಎಕ್ಸ್ -ಬ್ಯಾಂಡ್ ರಾಡಾರ್ ಗುಡುಗು ಮತ್ತು ಸಿಡಿಲನ್ನು ಪತ್ತೆಹಚ್ಚಿದರೆ, ಸಿ-ಬ್ಯಾಂಡ್ ರಾಡಾರ್ ಚಂಡಮಾರುತಗಳ ಜಾಡು ಹಿಡಿಯಲು ನೆರವಾಗುತ್ತದೆ. ಈ ಅತ್ಯಾಧುನಿಕ ರಾಡಾರ್ ವ್ಯವಸ್ಥೆಯಿಂದ ಹವಾಮಾನ ವೈಪರೀತ್ಯಗಳನ್ನು ಮುಂಚಿತವಾಗಿ ಗ್ರಹಿಸಲು ಮತ್ತು ಸಕಾಲದಲ್ಲಿಎಚ್ಚರಿಕೆ ನೀಡಲು ಸಾಧ್ಯವಾಗಲಿದೆ.