ವೇಶ್ಯಾವಾಟಿಕೆ ಭೀತಿ, ಈ ಗ್ರಾಮದಲ್ಲಿಬಾಲ್ಯದಲ್ಲೇ ನಿಶ್ಚಿತಾರ್ಥ!

Contributed byvijay.cheelange@timesgroup.com|Vijaya Karnataka
opposition to prostitution new developments in child engagement
* ‘ವೇಶ್ಯೆಯರ ಗ್ರಾಮ’ ಎಂಬ ಕಳಂಕ ತೊಡೆದುಹಾಕಲು ಹೆಣ್ಣುಮಕ್ಕಳನ್ನು ದಿಟ್ಟ ಹೆಜ್ಜೆ

ಸೂರತ್ : ರಾಜಸ್ಥಾನ ಗಡಿ ಬಳಿಯಿರುವ ಗುಜರಾತ್ ನ ಬನಸ್ಕಾಂತಾ ಜಿಲ್ಲೆಯ ವಾಡಿಯಾ ಗ್ರಾಮದಲ್ಲಿತಲೆಮಾರುಗಳಿಂದ ಮುಂದುವರಿದಿದ್ದ ವೇಶ್ಯಾವಾಟಿಕೆ ಪದ್ಧತಿಯಿಂದ ಹೆಣ್ಣುಮಕ್ಕಳನ್ನು ದೂರವಿಡಲು ಕುಟುಂಬಗಳು ಬಾಲ್ಯದಲ್ಲೇ ನಿಶ್ಚಿತಾರ್ಥ ಮಾಡುವ ಆತಂಕಕಾರಿ ಪದ್ಧತಿಗೆ ಮೊರೆ ಹೋಗಿರುವ ವಿಚಾರ ಬೆಳಕಿಗೆ ಬಂದಿದೆ.
ಅಹಮದಾಬಾದ್ ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ವಾಡಿಯಾ ಗ್ರಾಮದ ಜನಸಂಖ್ಯೆ 750 ಇದ್ದು, ಈ ಗ್ರಾಮದಲ್ಲಿಸರಣಿಯಾ ಸಮುದಾಯದ ಕುಟುಂಬಗಳು ವಾಸಿಸುತ್ತಿವೆ. ಹಲವು ತಲೆಮಾರುಗಳಿಂದ ಈ ಸಮುದಾಯದ ಮಹಿಳೆಯರನ್ನು ಲೈಂಗಿಕ ವೃತ್ತಿಗೆ ತಳ್ಳಲಾಗುತ್ತಿದ್ದು, ಪುರುಷರು ಗ್ರಾಹಕರನ್ನು ಹುಡುಕುವ ಕೆಲಸ ಮಾಡುತ್ತಿದ್ದರು. ಇಂದಿಗೂ ಗ್ರಾಮದ ಕೆಲವು ಪುರುಷರು ಪ್ರತಿದಿನ ಬೆಳಗ್ಗೆ ಪಾಲನ್ ಪುರ-ಥರಾಡ್ ಹೆದ್ದಾರಿ ಬಳಿ ತೆರಳಿ, ಲಾರಿ ಚಾಲಕರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪುರುಷರನ್ನು ಸಂಪರ್ಕಿಸಿ ಗ್ರಾಹಕರನ್ನು ಹುಡುಕುತ್ತಾರೆ.

ಬಾಲ್ಯದಲ್ಲೇ ನಿಶ್ಚಿತಾರ್ಥ:

ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳುವ ಪದ್ಧತಿಯಿಂದ ತಮ್ಮ ಹೆಣ್ಣುಮಕ್ಕಳನ್ನು ರಕ್ಷಿಸಲು ಕೆಲವು ಕುಟುಂಬಗಳು ಬಾಲ್ಯದಲ್ಲೇ ನಿಶ್ಚಿತಾರ್ಥ ಮಾಡುತ್ತಿದ್ದಾರೆ. ಏಳು ವರ್ಷದಿಂದ 12 ವರ್ಷದೊಳಗಿನ ಬಾಲಕಿಯರ ನಿಶ್ಚಿತಾರ್ಥವನ್ನು ಸಂಬಂಧಿಕರು ಅಥವಾ ಇತರ ಗ್ರಾಮಗಳ ಕುಟುಂಬಗಳ ಹುಡುಗರೊಂದಿಗೆ ನಡೆಸಲಾಗುತ್ತಿದೆ. ನಿಶ್ಚಿತಾರ್ಥ ಅಥವಾ ವಿವಾಹವಾದ ಹೆಣ್ಣುಮಕ್ಕಳನ್ನು ಲೈಂಗಿಕ ವೃತ್ತಿಗೆ ತಳ್ಳಬಾರದು ಎಂಬ ಅಲಿಖಿತ ನಿಯಮವನ್ನೂ ಗ್ರಾಮಸ್ಥರು ರೂಪಿಸಿಕೊಂಡಿದ್ದಾರೆ.

ವಾಡಿಯಾದ 19 ವರ್ಷದ ಯುವತಿಯೊಬ್ಬರು ತಮ್ಮ ತಾಯಿ ಮತ್ತು ಅಜ್ಜಿಯೂ ಲೈಂಗಿಕ ವೃತ್ತಿಯಲ್ಲಿದ್ದರೂ, ತಾವು ಆ ಬದುಕಿಗೆ ಹೋಗದಂತೆ ತಾಯಿ ನೋಡಿಕೊಂಡರು. 11ನೇ ವಯಸ್ಸಿನಲ್ಲೇ ತಮ್ಮ ನಿಶ್ಚಿತಾರ್ಥ ನಡೆದಿದ್ದು, 18ನೇ ವಯಸ್ಸಿನಲ್ಲಿವಿವಾಹವಾಗಿರುವುದಾಗಿ ಅವರು ಹೇಳಿದ್ದಾರೆ. ಸದ್ಯ ಅವರು ದೂರದ ಕಾಲೇಜಿನಲ್ಲಿನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.

ಸಾಮೂಹಿಕ ವಿವಾಹಕ್ಕೆ ಚಾಲನೆ:

2012 ರಲ್ಲಿಸರ್ಕಾರೇತರ ಸಂಸ್ಥೆಗಳು ಮುಂದಾಗಿ ಕೆಲವು ಕುಟುಂಬಗಳಿಗೆ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳದಂತೆ ಮನವೊಲಿಸಿದಾಗ, ಈ ಪದ್ಧತಿಯನ್ನು ಬದಲಾಯಿಸುವ ಪ್ರಯತ್ನಗಳು ಪ್ರಾರಂಭವಾದವು. ನಂತರ ಮೊದಲ ಸಾಮೂಹಿಕ ವಿವಾಹವನ್ನು ಗ್ರಾಮದಲ್ಲಿಆಯೋಜಿಸಲಾಯಿತು. ಅಂದಿನಿಂದ, ವಾಡಿಯಾ ಪ್ರತಿ ವರ್ಷ ಸಾಮೂಹಿಕ ವಿವಾಹ ಅಥವಾ ನಿಶ್ಚಿತಾರ್ಥ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಬಳಿಕ ಪ್ರತಿವರ್ಷ ಸಾಮೂಹಿಕ ವಿವಾಹ ಅಥವಾ ನಿಶ್ಚಿತಾರ್ಥ ಕಾರ್ಯಕ್ರಮಗಳು ನಡೆಯುತ್ತಿವೆ.