ಜ್ಞಾನ ಗಂಗೆ (ಕಾಲಂ)

Contributed by: srinatha.sv@timesgroup.com|Vijaya Karnataka•
Vijay Karnataka
ಅಲ್ಲಮನ ಅನನ್ಯ ವಚನಗಳು

--------
-ಶ್ರೀನಾಥ ಎಸ್ .ವಿ.

s್ಟಜ್ಞಿaಠಿha.svಃಠಿಜಿಞಛಿsಟ್ಛಜ್ಞಿdಜಿa.್ಚಟಞ

----

ಹನ್ನೆರಡನೇ ಶತಮಾನದ ವಚನಕಾರರಲ್ಲಿಅಲ್ಲಮಪ್ರಭುವಿನದು ವಿಶಿಷ್ಟ ದನಿ. ವಚನಕಾರರಲ್ಲೇ ಅಲ್ಲಮಪ್ರಭು ತೀರಾ ವಿಭಿನ್ನ. ಅನುಭಾವ ತುಂಬಿದ, ಬೆಡಗಿನಿಂದ ಕೂಡಿದ ಅವರ ವಚಗಳು ಮೇಲು ನೋಟಕ್ಕೆ ಸರಳವಾಗಿ ಕಂಡರೂ ಅದರ ಅರ್ಥ ವ್ಯಾಪ್ತಿ ತುಂಬಾ ವಿಶಾಲವಾದದ್ದು. ಗುಹೇಶ್ವರ ಎಂಬ ಅವರ ಅಂಕಿತದಂತೆ ಅವರ ವಚನಗಳೂ ಗುಹ್ಯ. ಒಂದೇ ಓದಿಗೆ ದಕ್ಕುವುದಲ್ಲ. ಅದನ್ನು ಮತ್ತೆ ಮತ್ತೆ ಓದಿ ಅದರೊಳಗಿನ ತಿರುಳನ್ನು ಹೆಕ್ಕಿ ತೆಗೆಯುವುದು ಸುಲಭಸಾಧ್ಯವಲ್ಲ. ಅದಕ್ಕೆ ಆಳವಾದ ಅಧ್ಯಯನ ಅತ್ಯವಶ್ಯಕ.

ಉಳಿದೆಲ್ಲವಚನಕಾರರಿಗಿಂತಲೂ ಅಲ್ಲಮಪ್ರಭುವಿನ ಪದ ಪ್ರಯೋಗಗಳು ತೀರಾ ವಿಭಿನ್ನ. ಒಂದೇ ಪದ ಹಲವು ಸಲ ಪ್ರಯೋಗವಾದರೂ ಅವು ಹೊರಡಿಸುವ ಅರ್ಥಗಳು ಭಿನ್ನ. ಅಲ್ಲದೆ ಆ ಪದಗಳು ಸಮಗ್ರವಾಗಿ ಕಟ್ಟಿಕೊಡುವ ಅರ್ಥವೂ ಅಪೂರ್ವವಾದದ್ದು. ‘ಮಾದುದು ಮಾದುದಲ್ಲ’, ‘ನೇತ್ರ ಮಹಿಮೆ’, ‘ಎರಡೊಂದಾದ ಬಳಿಕ’, ‘ಒಡಲು’, ‘ಬಯಲು’... ಹೀಗೆ ಹತ್ತಾರು ವಚನಗಳನ್ನು ಈ ನಿಟ್ಟಿನಲ್ಲಿಉದಾಹರಿಸುತ್ತಾ ಹೋಗಬಹುದು. ಅಲ್ಲಮಪ್ರಭುವಿನ ವಿಶಿಷ್ಟ ಪದ ಪ್ರಯೋಗವಿರುವ 75 ವಚನಗಳನ್ನು ಹುಡುಕಿ, ಕಲೆ ಹಾಕಿ ಅವುಗಳನ್ನು ಸರಳವಾಗಿ ಹಾಗೂ ಅಷ್ಟೇ ಅರ್ಥಗರ್ಭಿತವಾಗಿ ವಿವರಿಸುವ ಒಂದು ಅನನ್ಯವಾದ ಕೆಲಸವನ್ನು ಲೇಖಕ ಹರಿಹರ ಶಿವಕುಮಾರ ಅವರು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅವರು ಆರಿಸಿಕೊಂಡಿರುವ 75 ವಚನಗಳೂ ಒಂದೊಂದು ಮಾಣಿಕ್ಯದಂತೆ ಇದೆ. ಆ ವಚನಗಳು ಅಷ್ಟು ಬೆಲೆಬಾಳುವಂಥದ್ದು ಮತ್ತು ಅರ್ಥ ವಿಸ್ತಾರವನ್ನು ಹೊಂದಿರುವಂಥದ್ದು.

ಮೊದಲೇ ಹೇಳಿದಂತೆ ಅಲ್ಲಮನ ವಚನಗಳು ಒಂದೇ ಓದಿಗೆ ದಕ್ಕುವಂಥದಲ್ಲ. ಆದರೂ ಹರಿಹರ ಶಿವಕುಮಾರ ಅವರು ಅಲ್ಲಮನ ವಚನಗಳ ಕುರಿತು ಆಳವಾದ ಅಧ್ಯಯನವನ್ನು ನಡೆಸಿ, ಶ್ರೀ ಸಿದ್ದೇಶ್ವರ ಸ್ವಾಮಿಗಳ ‘ಅಲ್ಲಮಪ್ರಭುದೇವರ ವಚನ-ನಿರ್ವಚನ’ ಮತ್ತು ಬಸವ ಸಮಿತಿ ಪ್ರಕಟಿಸಿರುವ ಡಾ.ಎನ್ .ಜಿ. ಮಹಾದೇವಪ್ಪನವರ ‘ಅಲ್ಲಮ ವಜ್ರಗಳು’, ಡಾ.ಎಲ್ .ಬಸವರಾಜು ಅವರ ‘ಅಲ್ಲಮ ವಚನ ಚಂದ್ರಿಕೆ’ ಪುಸ್ತಕಗಳನ್ನು ಪರಾಮರ್ಶಿಸಿದ್ದಾರೆ. ಹೀಗೆ ವಿಸ್ತಾರವಾದ ಮಾಹಿತಿಯನ್ನು ಪಡೆದುಕೊಂಡು, ಅಲ್ಲಮನ ವಚನಗಳ ತಿರುಳನ್ನು ಓದುಗರಿಗೆ ಸರಳವಾಗಿ ಮುಟ್ಟಿಸುವ ಕೆಲಸವನ್ನು ಲೇಖಕರು ಮಾಡಿದ್ದಾರೆ.

ಮುನ್ನುಡಿಯಲ್ಲಿಕವಿ, ನಾಟಕಕಾರ, ಚಿಂತಕ ಎಚ್ .ಎಸ್ .ಶಿವಪ್ರಕಾಶ್ ಅವರು ಬರೆದಿರುವಂತೆ, ‘‘ಬಸವಣ್ಣ, ಅಕ್ಕ ಮಹಾದೇವಿಯವರಂತೆ ಅವನು (ಅಲ್ಲಮಪ್ರಭು) ಅರ್ಥವನ್ನು ಬಿಟ್ಟುಕೊಡುವುದಿಲ್ಲ. ನಮನ್ನೂ ಬಿಡುವುದಿಲ್ಲ. ನನ್ನ ಪ್ರಕಾರ ವಚನಗಳಿಗೆ ದಾರ್ಶನಿಕ, ಸಾಮಾಜಿಕ ಅಥವಾ ಸಾಹಿತ್ಯಕ ತಾತ್ಪರ್ಯ ಅಸಾಧ್ಯ ಮತ್ತು ಅಸಾಧು. ಆದರೆ ತಮ್ಮ ತಮ್ಮ ಮಜಲಿನಲ್ಲಿತಮ್ಮ ಅನುಭವದ ತಿಳಿವಳಿಕೆಯ ಸಂದರ್ಭದೊಳಗಿಟ್ಟು ಅಲ್ಲಮನನ್ನು ಅರ್ಥ ಮಾಡಿಕೊಳ್ಳುವ ಶಿವಕುಮಾರರ ಪ್ರಯತ್ನ ಸಾಗತಾರ್ಹ.’’ ಏಕೆಂದರೆ, ಅಲ್ಲಮನಂಥ ಬೆಡಗಿನ ವಚನಕಾರರನ್ನು ಇಂತಿಷ್ಟೇ ಎಂದು ಹಿಡಿದಿಡುವುದಕ್ಕೆ ಸಾಧ್ಯವಿಲ್ಲ. ಓದಿದಷ್ಟೂ ಅವರ ವಚನಗಳ ಅರ್ಥವೂ ವಿಸ್ತಾರವಾಗುತ್ತಾ ಹೋಗುತ್ತದೆ. ನೋಡುವುದಕ್ಕೆ ನಾಲ್ಕಾರು ಸಾಲುಗಳ ವಚನಗಳಂತೆ ಕಂಡರೂ ಅವುಗಳ ವ್ಯಾಖ್ಯಾನ ಹತ್ತಾರು ಪುಟಗಳಷ್ಟು ವಿಸ್ತರಿಸಿಕೊಂಡಿರುವುದನ್ನು ಗಮನಿಸಬಹುದಾಗಿದೆ.

ಅಲ್ಲಮಪ್ರಭುಗಳ ವಚನಗಳನ್ನು ಅಧ್ಯಯನ ಮಾಡುವವರಿಗೆ, ವಚನ ಸಾಹಿತ್ಯದಲ್ಲಿವಿಶೇಷ ಆಸಕ್ತಿಯನ್ನು ಹೊಂದಿರುವವರಿಗೆ ಇದೊಂದು ಸಂಗ್ರಹ ಯೋಗ್ಯ ಪುಸ್ತಕವಾಗಿದೆ. ಅಲ್ಲಮನನ್ನು ಮತ್ತೆ ಮತ್ತೆ ಓದುವಂತೆ ಈ ಪುಸ್ತಕ ಪ್ರೇರೇಪಣೆಯನ್ನು ನೀಡುತ್ತದೆ.

ಕೃತಿ: ಅನನ್ಯ ಅಲ್ಲಮ (ಅಲ್ಲಮನ ಅನನ್ಯ ಪದ ಪ್ರಯೋಗಗಳ 75 ವಚನಗಳು)

ಲೇಖಕರು: ಹರಿಹರ ಶಿವಕುಮಾರ

ಪ್ರಕಾಶಕರು: ಹರಿವು ಕ್ರಿಯೇಶನ್ಸ್ ಪ್ರೈವೇಟ್ ಲಿಮಿಟೆಡ್ (ಹರಿವು ಬುಕ್ಸ್ ), 67, ಮೊದಲನೇ ಮಹಡಿ, ಸೌತ್ ಅವೆನ್ಯೂ ಕಾಂಪ್ಲೆಕ್ಸ್ , ಬಸವನಗುಡಿ, ಬೆಂಗಳೂರು-560004

ಮೊದಲ ಮುದ್ರಣ: 2026

ಪುಟಗಳು: 167, ಬೆಲೆ ರೂ. 180/-