ವಾಹನ ಹರಿದು ಇಬ್ಬರು ಕಾವಲುಗಾರರ ಸಾವು

Contributed by: dmpatilp18@gmail.com|Vijaya Karnataka•
guards fate driver flees after tragic incident
ವಿಕ ಸುದ್ದಿಲೋಕ ಆಳಂದ ತಾಲೂಕಿನ ನಾಗಲೇಗಾಂವ ಗ್ರಾಮದ ಹೊರವಲಯದ ಮಹಾದೇವ ದೇವಸ್ಥಾನ ಬೆಟ್ಟದ ಹತ್ತಿರ ಮಲಗಿದ್ದ ಇಬ್ಬರು ಕಾವಲುಗಾರರ ಮೇಲೆ ಸೋಲಾರ್ ಕಂಪನಿಯ ವಾಹನ ಹರಿದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಕಾವಲುಗಾರರು ಮೃತಪಟ್ಟಿದ್ದಾರೆ. ನಾಗಲೇಗಾಂವ ಗ್ರಾಮದ ಸಂಗಯ್ಯ ಬಸವಣ್ಣಯ್ಯ ಮಠಪತಿ (49), ಸಂತೋಷ ಶಿವಪಾದಪ್ಪ ಕಲಬುರಗಿ(43) ಮೃತರು. ವಿಂಡ್ ಗಾರ್ಡ್ ಗಳಾಗಿ 3 ಜನರು ಕಂಪನಿಯಲ್ಲಿಕೆಲಸ ಮಾಡುತ್ತಿದ್ದರು. ಹಗಲು ಒಬ್ಬರು, ರಾತ್ರಿ ಇಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದರು. ಜಿಟಿಜಿಟಿ ಮಳೆ ಬರುತ್ತಿದ್ದಾಗ ಇಬ್ಬರು ಗಾರ್ಡ್ ಗಳು ತಾಡಪತ್ರಿ ಹೊದ್ದು ಮಲಗಿದ್ದರು. ಅದೇ ಸಮಯದಲ್ಲಿಯೇ ಐಶರ ಗೂಡ್ಸ್ ವಾಹನ ಬಂದು ಸಂಗಯ್ಯನ ತಲೆ ಮೇಲೆ ಹಾಗೂ ಸಂತೋಷನ ಬೆನ್ನು ಮೇಲೆ ಹಾದು ಹೋಗಿ ಈ ಅವಘಡ ಸಂಭವಿಸಿದೆ. ಚಾಲಕ ಉತ್ತರಪ್ರದೇಶ ಮೂಲದ ಕುಲದೀಪಸಿಂಗ್ ರಾಮಸರ ಆಗಿದ್ದು, ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಸುದ್ದಿ ಅರಿತು ಕುಂಟುಂಬಸ್ಥರು ಧಾವಿಸಿದರು. ಆದರೆ ಅವರು ಬರುವಷ್ಟರಲ್ಲಿಯೇ ಇಬ್ಬರ ಜೀವ ಹಾರಿಹೋಗಿತ್ತು. ಸಂಗಯ್ಯಗೆ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಸಂತೋಷಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ. ಇಬ್ಬರ ಕುಟುಂಬದ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಡಿವೈಎಸ್ಪಿ ತಮ್ಮರಾಯ ಪಾಟೀಲ್ , ಸಿಪಿಐ ಜಗದೀಶ ಕೆ.ಜಿ, ಪಿಎಸ್ ಐ ರೇಣುಕಾ ಉಡಗಿ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸೋಲಾರ ಕಂಪನಿಯ ಮುಖ್ಯಸ್ಥರು ಭೇಟಿ ನೀಡಿ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಕಲಬುರಗಿ-ಬೀದರ್ -ಯಾದಗಿರಿ ಕೆಎಂಎಫ್ ಅಧ್ಯಕ್ಷ ಆರ್ .ಕೆ.ಪಾಟೀಲ್ , ತಾಪಂ ಮಾಜಿ ಸದಸ್ಯ ಸಾತಲಿಂಗಪ್ಪ ಪಾಟೀಲ್ , ಸರಸಂಬಾ ಗ್ರಾಪಂ ಮಾಜಿ ಅಧ್ಯಕ್ಷೆ ಸುರೇಖಾ ಸುತಾರ ಅವರು ಮನೆಗೆ ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಮೃತರ ಕುಟುಂಬದವರು ಚಾಲಕನ ವಿರುದ್ಧ ದೂರು ನೀಡಿದ್ದು, ಈ ಕುರಿತು ಮಾದನಹಿಪ್ಪರಗಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.