ಇಂಟ್ರೊ: ಬರ, ಬಿಸಿಲು ಮತ್ತು ಕುಸಿಯುತ್ತಿರುವ ಅಂತರ್ಜಲದಿಂದ ಕಂಗೆಟ್ಟ ಮಳೆಯಾಶ್ರಿತ ಕೃಷಿಗೆ ಕರ್ನಾಟಕದ ಜಲಾನಯನ ಯೋಜನೆಗಳು ಹೊಸ ಭರವಸೆ ಮೂಡಿಸಿವೆ. ಮಣ್ಣು-ನೀರು ಸಂರಕ್ಷಣೆ, ಸಮಗ್ರ ಕೃಷಿ, ಹಸಿರು ವಿಸ್ತರಣೆ ಹಾಗೂ ರೈತ ಆದಾಯ ಅಭಿವೃದ್ಧಿಗೆ ರಾಜ್ಯ ವೈಜ್ಞಾನಿಕ ದಿಕ್ಕು ನೀಡುತ್ತಿದೆ.-----
ವೈಜ್ಞಾನಿಕ ಜಲಾನಯನ ಯೋಜನೆಗಳ ಅನುಷ್ಠಾನದ ಮೂಲಕ ಮಣ್ಣು ಮತ್ತು ನೀರು ಸಂರಕ್ಷಣೆ , ಅಂತರ್ಜಲ ಮರುಪೂರಣ ಹಾಗೂ ಬರ ನಿರ್ವಹಣೆಯಲ್ಲಿಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಜಲಾನಯನ ಅಭಿವೃದ್ಧಿ ಇಲಾಖೆ ತಿಳಿಸಿದೆ.
ರಾಜ್ಯದ ಕೃಷಿ ವ್ಯವಸ್ಥೆ ಮಳೆಯ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದೆ. ಮಳೆಯ ಅಸ್ಥಿರತೆ, ಮಣ್ಣಿನ ತೇವಾಂಶದ ಕೊರತೆ, ಅಂತರ್ಜಲ ಕುಸಿತ ಹಾಗೂ ಮಣ್ಣಿನ ಸವಕಳಿ ರೈತರ ಬದುಕಿನ ಮೇಲೆ ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆಯಲ್ಲಿಮಣ್ಣು ಮತ್ತು ನೀರು ಸಂರಕ್ಷಣೆ ಮೂಲಕ ಕೃಷಿಯನ್ನು ಸುಸ್ಥಿರಗೊಳಿಸುವ ಉದ್ದೇಶದಿಂದ ಇಲಾಖೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣ 190.50 ಲಕ್ಷ ಹೆಕ್ಟೇರ್ . ಈ ಪೈಕಿ 129.70 ಲಕ್ಷ ಹೆಕ್ಟೇರ್ ಪ್ರದೇಶ ಜಲಾನಯನ ಉಪಚಾರಕ್ಕೆ ಲಭ್ಯವಿದೆ. ವಿವಿಧ ಯೋಜನೆಗಳಡಿ ಈಗಾಗಲೇ 75.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿಜಲಾನಯನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಪ್ರಸ್ತುತ 3.92 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿಕಾಮಗಾರಿ ನಡೆಯುತ್ತಿದ್ದು, ಉಳಿದ 50.22 ಲಕ್ಷ ಹೆಕ್ಟೇರ್ ಪ್ರದೇಶವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
ಐದು ವರ್ಷದಲ್ಲಿ2,117.93 ಕೋಟಿ ರೂ. ವೆಚ್ಚ:
ಕಳೆದ ಐದು ವರ್ಷಗಳಲ್ಲಿರಾಜ್ಯ, ಕೇಂದ್ರ ಹಾಗೂ ವಿಶ್ವಬ್ಯಾಂಕ್ ನೆರವಿನ ಯೋಜನೆಗಳಡಿ ಮಣ್ಣು ಮತ್ತು ನೀರು ಸಂರಕ್ಷಣೆಗೆ 2,117.93 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸುಮಾರು 3.97 ಲಕ್ಷ ಹೆಕ್ಟೇರ್ ಜಲಾನಯನ ಪ್ರದೇಶವನ್ನು ವೈಜ್ಞಾನಿಕವಾಗಿ ಉಪಚರಿಸಲಾಗಿದೆ.
ಈ ಅವಧಿಯಲ್ಲಿಸಮುದಾಯ ಹಾಗೂ ವೈಯಕ್ತಿಕ ಪ್ರದೇಶಗಳಲ್ಲಿ19,851ಕ್ಕೂ ಹೆಚ್ಚು ನೀರು ಸಂಗ್ರಹಣಾ ವಿನ್ಯಾಸಗಳನ್ನು ನಿರ್ಮಿಸಲಾಗಿದೆ. 1.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿಬದು ನಿರ್ಮಾಣ ಕೈಗೊಳ್ಳಲಾಗಿದೆ. ಕೃಷಿ ಹೊಂಡ, ನಾಲಾ ಬದು, ಗೋಕಟ್ಟೆ, ತಡೆ ಅಣೆಕಟ್ಟು, ಕಿಂಡಿ ಅಣೆಕಟ್ಟು ಮತ್ತಿತರ ಕಾಮಗಾರಿಗಳ ಮೂಲಕ ಸುಮಾರು 3,500 ಕೋಟಿ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಸೃಷ್ಟಿಸಲಾಗಿದೆ.
ಸುಮಾರು 39,702 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿಬೆಳೆಗಳ ನಿರ್ಣಾಯಕ ಹಂತದಲ್ಲಿರಕ್ಷಣಾತ್ಮಕ ನೀರಾವರಿ ಒದಗಿಸಲಾಗಿದೆ. 27,133 ಹೆಕ್ಟೇರ್ ನಲ್ಲಿಖುಷ್ಕಿ ತೋಟಗಾರಿಕೆ ಹಾಗೂ 33,122 ಹೆಕ್ಟೇರ್ ನಲ್ಲಿಕೃಷಿ ಅರಣ್ಯ ಅಭಿವೃದ್ಧಿಪಡಿಸಲಾಗಿದೆ. ಸುಮಾರು 3,928 ಸ್ವಸಹಾಯ ಸಂಘಗಳಿಗೆ ಜೀವನೋಪಾಯ ಚಟುವಟಿಕೆಗಳಿಗಾಗಿ 24.80 ಕೋಟಿ ರೂ. ಸುತ್ತು ನಿಧಿ ವಿತರಿಸಲಾಗಿದೆ.
43.29 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿಭೂ ಸಂಪನ್ಮೂಲ ಸಮೀಕ್ಷೆ (ಎಲ್ ಆರ್ ಐ) ಹಾಗೂ ಜಲವಿಜ್ಞಾನ ಅಧ್ಯಯನ ನಡೆಸಲಾಗಿದೆ. 22 ಲಕ್ಷ ರೈತರಿಗೆ ಭೂ ಸಂಪನ್ಮೂಲ ಸಮೀಕ್ಷೆ ಕಾರ್ಡ್ ಗಳನ್ನು ವಿತರಿಸಲಾಗಿದೆ. ಇಲಾಖೆಯಿಂದ ರಚನೆಯಾದ 392 ರೈತ ಉತ್ಪಾದಕ ಸಂಸ್ಥೆಗಳ ಬಲವರ್ಧನೆಗೆ 95.09 ಕೋಟಿ ರೂ. ವೆಚ್ಚ ಮಾಡಲಾಗಿದೆ.
78 ತಾಲೂಕುಗಳಲ್ಲಿಪಿಎಂ ಕೃಷಿ ಸಿಂಚಾಯಿ ಯೋಜನೆ:
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ 2.0 ಅಡಿ ರಾಜ್ಯದ 78 ತಾಲೂಕುಗಳಲ್ಲಿ3.29 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿಜಲಾನಯನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದುವರೆಗೆ 735.45 ಕೋಟಿ ರೂ. ವೆಚ್ಚ ಮಾಡಲಾಗಿದ್ದು, 3.15 ಲಕ್ಷ ಹೆಕ್ಟೇರ್ ಪ್ರದೇಶವನ್ನು ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳ ಮೂಲಕ ಉಪಚರಿಸಲಾಗಿದೆ.
ಯೋಜನೆಯಡಿ 4,747 ಕೃಷಿ ಹೊಂಡ, ನಾಲಾ ಬದು, ಗೋಕಟ್ಟೆ, ತಡೆ ಅಣೆಕಟ್ಟು, ಕಿಂಡಿ ಅಣೆಕಟ್ಟು ಹಾಗೂ ಇತರ ನೀರು ಸಂಗ್ರಹಣಾ ವಿನ್ಯಾಸಗಳನ್ನು ನಿರ್ಮಿಸಲಾಗಿದೆ. 2026-27ನೇ ಸಾಲಿನಲ್ಲಿ57.89 ಕೋಟಿ ರೂ. ವೆಚ್ಚದಲ್ಲಿ24,824 ಹೆಕ್ಟೇರ್ ಪ್ರದೇಶವನ್ನು ಉಪಚರಿಸುವ ಗುರಿ ಹೊಂದಲಾಗಿದೆ. ಈಗಾಗಲೇ 23.97 ಕೋಟಿ ರೂ. ವೆಚ್ಚದಲ್ಲಿ10,278 ಹೆಕ್ಟೇರ್ ಪ್ರದೇಶದಲ್ಲಿಕಾಮಗಾರಿ ಕೈಗೊಳ್ಳಲಾಗಿದೆ. 247 ಕೃಷಿ ಹೊಂಡ ಹಾಗೂ ಇತರ ನೀರು ಸಂಗ್ರಹಣಾ ವಿನ್ಯಾಸಗಳ ನಿರ್ಮಾಣವೂ ನಡೆದಿದೆ.
ಗ್ರಾಮ ಪಂಚಾಯಿತಿಗಳು ಹಾಗೂ ಸ್ಥಳೀಯ ಸಮುದಾಯಗಳಿಗೆ ಯೋಜನೆ ಅನುಷ್ಠಾನದಲ್ಲಿಪ್ರಮುಖ ಪಾತ್ರ ನೀಡಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿರಚನೆಯಾಗುವ ಜಲಾನಯನ ಸಮಿತಿಗಳ ಮೂಲಕ ಸ್ಥಳೀಯ ಸಮಸ್ಯೆ, ಭೂಪ್ರದೇಶದ ಸ್ವರೂಪ ಹಾಗೂ ರೈತರ ಅಗತ್ಯಗಳನ್ನು ಆಧರಿಸಿ ಕಾಮಗಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ.
ರಿವಾರ್ಡ್ ಯೋಜನೆಯಡಿ 25 ಜಿಲ್ಲೆಗಳಲ್ಲಿಎಲ್ ಆರ್ ಐ
ವಿಶ್ವಬ್ಯಾಂಕ್ ನೆರವಿನ ರಿವಾರ್ಡ್ (್ಕಛ್ಜ್ಠಿvಛ್ಞಿaಠಿಜ್ಞಿಜ Waಠಿಛ್ಟಿshಛಿds ್ಛಟ್ಟ ಅಜ್ಟಜ್ಚಿ್ಠ್ಝಠ್ಠಿ್ಟa್ಝ ್ಕಛಿsಜ್ಝಿಜಿಛ್ಞ್ಚಿಛಿ ಠಿh್ಟಟ್ಠಜh ಐ್ಞ್ಞಟvaಠಿಜಿvಛಿ ಈಛಿvಛ್ಝಿಟpಞಛ್ಞಿಠಿ) ಯೋಜನೆಯು ರಾಜ್ಯದ ಜಲಾನಯನ ಅಭಿವೃದ್ಧಿಯಲ್ಲಿಪ್ರಮುಖ ಹೆಜ್ಜೆಯಾಗಿದೆ. ಕೃಷಿಗೆ ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಕಲ್ಪಿಸುವುದು ಯೋಜನೆಯ ಉದ್ದೇಶ.
ರಾಜ್ಯದ 25 ಜಿಲ್ಲೆಗಳ 25 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿಭೂ ಸಂಪನ್ಮೂಲ ಸಮೀಕ್ಷೆ ನಡೆಸಲಾಗುತ್ತಿದೆ. ಭೂಮಿಯ ಗುಣಲಕ್ಷಣ, ಮಣ್ಣಿನ ಸ್ವರೂಪ, ನೀರಿನ ಲಭ್ಯತೆ ಹಾಗೂ ಬೆಳೆಗಳ ಹೊಂದಾಣಿಕೆ ಕುರಿತು ವೈಜ್ಞಾನಿಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಮಾಹಿತಿಯ ಆಧಾರದ ಮೇಲೆ ಸೂಕ್ತ ಬೆಳೆ ಆಯ್ಕೆ ಹಾಗೂ ಜಲಾನಯನ ಅಭಿವೃದ್ಧಿ ಕ್ರಮಗಳನ್ನು ರೂಪಿಸಲಾಗುತ್ತದೆ.
20 ಉಪಜಲಾನಯನಗಳ 1.03 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿರಿವಾರ್ಡ್ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಇದುವರೆಗೆ 200.48 ಕೋಟಿ ರೂ. ವೆಚ್ಚ ಮಾಡಿ 0.82 ಲಕ್ಷ ಹೆಕ್ಟೇರ್ ಪ್ರದೇಶವನ್ನು ಉಪಚರಿಸಲಾಗಿದೆ. 98 ನಾಲಾ ಬದು, 123 ಗೋಕಟ್ಟೆ, 667 ತಡೆ ಮತ್ತು ಕಿಂಡಿ ಅಣೆಕಟ್ಟು, 21 ಜಿನುಗು ಕೆರೆ ಹಾಗೂ 1,237 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ.
2026-27ನೇ ಸಾಲಿನಲ್ಲಿ75 ಕೋಟಿ ರೂ. ವೆಚ್ಚದಲ್ಲಿ0.21 ಲಕ್ಷ ಹೆಕ್ಟೇರ್ ಪ್ರದೇಶವನ್ನು ಉಪಚರಿಸುವ ಗುರಿ ಇದೆ. ಈಗಾಗಲೇ 16.46 ಕೋಟಿ ರೂ. ವೆಚ್ಚ ಮಾಡಲಾಗಿದೆ. ರೈತ ಉತ್ಪಾದಕ ಸಂಸ್ಥೆಗಳ ಉತ್ತೇಜನ, ಮೌಲ್ಯ ಸರಪಳಿ ಅಭಿವೃದ್ಧಿ ಹಾಗೂ ಕೃಷಿ-ಹವಾಮಾನ ಸಲಹಾ ಸೇವೆಗಳಿಗೆ ಆದ್ಯತೆ ನೀಡಲಾಗಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿಸ್ಥಾಪಿಸಿರುವ ಜಲಾನಯನ ಅಭಿವೃದ್ಧಿ ಉತ್ಕೃಷ್ಟತಾ ಕೇಂದ್ರದ ಮೂಲಕ ರಾಜ್ಯ ಹಾಗೂ ಹೊರರಾಜ್ಯಗಳ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ.
ಗಣಿಗಾರಿಕೆ ಪ್ರದೇಶಗಳಲ್ಲಿಪರಿಸರ ಪುನಶ್ಚೇತನ:
ಗಣಿಗಾರಿಕೆಯ ಪರಿಣಾಮಕ್ಕೆ ಒಳಗಾದ ಬಳ್ಳಾರಿ, ಚಿತ್ರದುರ್ಗ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ 11 ತಾಲೂಕುಗಳಲ್ಲಿಸಮಗ್ರ ಪರಿಸರ ಯೋಜನೆ ಜಾರಿಯಲ್ಲಿದೆ. ಗಣಿಗಾರಿಕೆ ಪ್ರಭಾವ ವಲಯದ ಸಮಗ್ರ ಪರಿಸರ ಯೋಜನೆಯಡಿ 777 ಉಪಜಲಾನಯನಗಳ ವ್ಯಾಪ್ತಿಯಲ್ಲಿ69 ಯೋಜನೆಗಳ ಮೂಲಕ 3.4168 ಲಕ್ಷ ಹೆಕ್ಟೇರ್ ಪ್ರದೇಶವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಮೊದಲ ಹಂತದಲ್ಲಿಒಂಬತ್ತು ತಾಲೂಕುಗಳ 516 ಉಪಜಲಾನಯನಗಳ ವ್ಯಾಪ್ತಿಯಲ್ಲಿ35 ಯೋಜನೆಗಳ ಮೂಲಕ 2.223 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿಕಾಮಗಾರಿ ನಡೆಯುತ್ತಿದೆ. ಎರಡನೇ ಹಂತದಲ್ಲಿ10 ತಾಲೂಕುಗಳ 261 ಉಪಜಲಾನಯನಗಳ ವ್ಯಾಪ್ತಿಯಲ್ಲಿ34 ಯೋಜನೆಗಳ ಮೂಲಕ 1.1938 ಲಕ್ಷ ಹೆಕ್ಟೇರ್ ಪ್ರದೇಶವನ್ನು ಒಳಪಡಿಸಲಾಗಿದೆ.
2026-27ನೇ ಸಾಲಿನಲ್ಲಿ231.57 ಕೋಟಿ ರೂ. ಅಂದಾಜು ವೆಚ್ಚದಲ್ಲಿಮಣ್ಣು ಮತ್ತು ನೀರು ಸಂರಕ್ಷಣೆ, ತೋಟಗಾರಿಕೆ ಹಾಗೂ ಅರಣ್ಯೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಗೋಕಟ್ಟೆ, ಕಲ್ಯಾಣಿ, ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ , ಪಶುಗಳಿಗೆ ನೀರು ಹಾಗೂ ಇತರ ಗ್ರಾಮೀಣ ಮೂಲಸೌಕರ್ಯ ಕಾಮಗಾರಿಗಳನ್ನೂ ಕೈಗೊಳ್ಳಲಾಗುತ್ತದೆ.
*ಮಳೆಯಾಶ್ರಿತ ಪ್ರದೇಶಗಳಿಗೆ ಸಮಗ್ರ ಕೃಷಿ:
ಮಳೆಯಾಶ್ರಿತ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮದಡಿ 2026-27ನೇ ಸಾಲಿನಲ್ಲಿ16.67 ಕೋಟಿ ರೂ. ವೆಚ್ಚದಲ್ಲಿವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40ರ ಅನುದಾನದ ಅನುಪಾತದಲ್ಲಿಯೋಜನೆ ಅನುಷ್ಠಾನಗೊಳ್ಳುತ್ತಿದೆ.
ಸಮಗ್ರ ಕೃಷಿ ಪದ್ಧತಿಯಡಿ ಬೆಳೆ ಉತ್ಪಾದನೆಯ ಜತೆಗೆ ಪಶುಸಂಗೋಪನೆ, ಕೋಳಿ ಸಾಕಣೆ, ಮೇವು ಅಭಿವೃದ್ಧಿ, ತೋಟಗಾರಿಕೆ ಹಾಗೂ ಕೃಷಿ ಅರಣ್ಯವನ್ನು ಸಂಯೋಜಿಸಲಾಗುತ್ತದೆ. ಇದರಿಂದ ಮಳೆ ಕೈಕೊಟ್ಟರೂ ರೈತರಿಗೆ ಪರ್ಯಾಯ ಆದಾಯದ ಮೂಲಗಳು ಲಭ್ಯವಾಗಲಿವೆ.
*ನೀರಿನ ಮೂಲಗಳಿಗೆ ಸೂಕ್ಷ್ಮ ನೀರಾವರಿ ಸಂಪರ್ಕ
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಇತರ ಘಟಕಗಳಡಿ ನೀರಿನ ಮೂಲಗಳನ್ನು ಸೂಕ್ಷ್ಮ ನೀರಾವರಿ ಘಟಕಗಳಿಗೆ ಜೋಡಿಸುವ ಕಾರ್ಯ ನಡೆಯುತ್ತಿದೆ. 2026-27ನೇ ಸಾಲಿನಲ್ಲಿ51.38 ಕೋಟಿ ರೂ. ವೆಚ್ಚದಲ್ಲಿ5,851 ಕೃಷಿ ಹೊಂಡ, ಕೊಳವೆಬಾವಿ, ಸಣ್ಣ ಬಾವಿ ನವೀಕರಣ ಹಾಗೂ ಸ್ಥಗಿತಗೊಂಡ ಕೊಳವೆಬಾವಿಗಳ ಪುನಶ್ಚೇತನಕ್ಕೆ ಯೋಜನೆ ರೂಪಿಸಲಾಗಿದೆ.
ನೀರು ಎತ್ತಲು ಡೀಸೆಲ್ , ವಿದ್ಯುತ್ , ಸೌರ ಹಾಗೂ ಪೆಟ್ರೋಲ್ ಚಾಲಿತ ಸಾಧನಗಳನ್ನು ಒದಗಿಸಲಾಗುತ್ತಿದೆ. ಸುಮಾರು 35,583 ಹೆಕ್ಟೇರ್ ಪ್ರದೇಶಕ್ಕೆ ಪೈಪ್ ವಿತರಣಾ ವ್ಯವಸ್ಥೆ ಕಲ್ಪಿಸುವ ಗುರಿ ಇದೆ. ಪ್ರಸಕ್ತ ಸಾಲಿನಲ್ಲಿ20.07 ಕೋಟಿ ರೂ. ವೆಚ್ಚ ಮಾಡಿ 969 ಕೃಷಿ ಹೊಂಡ, ಕೊಳವೆಬಾವಿ ಹಾಗೂ ನೀರು ಎತ್ತುವ ಸಾಧನಗಳನ್ನು ಒದಗಿಸಲಾಗಿದೆ. 16,363 ಹೆಕ್ಟೇರ್ ಪ್ರದೇಶಕ್ಕೆ ಪಿವಿಸಿ ಪೈಪ್ ವಿತರಿಸಲಾಗಿದೆ.
ಸಣ್ಣ ನೀರು ಸಂಗ್ರಹಣಾ ವಿನ್ಯಾಸಗಳು ಹಾಗೂ ಸ್ಥಗಿತಗೊಂಡ ಕೊಳವೆಬಾವಿಗಳ ಮರುಸ್ಥಾಪನೆಗೆ ವೆಚ್ಚದ ಶೇ.50 ಅಥವಾ ಗರಿಷ್ಠ 75,000 ರೂ. ಸಹಾಯಧನ ನೀಡಲಾಗುತ್ತದೆ. ಗುಡ್ಡಗಾಡು ಪ್ರದೇಶಗಳಲ್ಲಿಶೇ.50 ಅಥವಾ ಗರಿಷ್ಠ 90,000 ರೂ. ನೆರವು ಒದಗಿಸಲಾಗುತ್ತದೆ. ಸುರಕ್ಷಿತ ತಾಲೂಕುಗಳಲ್ಲಿಕೊಳವೆಬಾವಿ ನಿರ್ಮಾಣಕ್ಕೆ ಗರಿಷ್ಠ 25,000ರೂ., ಸಣ್ಣಬಾವಿಗಳ ನವೀಕರಣಕ್ಕೆ ಗರಿಷ್ಠ 15,000 ರೂ. ಹಾಗೂ ಪಿವಿಸಿ ಪೈಪ್ ಗಳಿಗೆ ಪ್ರತಿ ಹೆಕ್ಟೇರ್ ಗೆ ಶೇ.50 ಅಥವಾ ಗರಿಷ್ಠ 10,000 ರೂ. ಸಹಾಯಧನ ನೀಡಲಾಗುತ್ತದೆ.
*ಬರಪೀಡಿತ ಪ್ರದೇಶಗಳಿಗೆ ಉತ್ತೇಜಕ ನೆರವು
ರಾಷ್ಟ್ರೀಯ ವಿಪತ್ತು ಉಪಶಮನ ನಿಧಿಯಡಿ ದೇಶದ 12 ಅತಿ ಬರಪೀಡಿತ ರಾಜ್ಯಗಳಿಗೆ ಬರ ನಿರ್ವಹಣಾ ಯೋಜನೆ ರೂಪಿಸಲು ಉತ್ತೇಜಕ ನೆರವು ಒದಗಿಸಲಾಗುತ್ತಿದೆ. ಕೃಷಿಯಲ್ಲಿಬರ ಎದುರಿಸುವ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಗ್ರಾಮೀಣ ಜೀವನೋಪಾಯ ಸುಧಾರಿಸುವುದು ಇದರ ಉದ್ದೇಶ.
ಕರ್ನಾಟಕಕ್ಕೆ ಕೇಂದ್ರ ಸರಕಾರದಿಂದ 100 ಕೋಟಿ ರೂ. ಅನುದಾನ ದೊರೆಯಲಿದ್ದು, ರಾಜ್ಯದ ಪಾಲಾಗಿ 10 ಕೋಟಿ ರೂ. ನೀಡಲಾಗುತ್ತದೆ. ಯೋಜನಾ ಪ್ರದೇಶಗಳಲ್ಲಿಕುಟುಂಬ ಸಮೀಕ್ಷೆ, ಮೂಲ ಮಾಹಿತಿ ಸಮೀಕ್ಷೆ ಹಾಗೂ ರೈತರು, ಸ್ವಸಹಾಯ ಸಂಘಗಳ ಸದಸ್ಯರು, ರೈತ ಉತ್ಪಾದಕ ಸಂಸ್ಥೆಗಳ ಸದಸ್ಯರು ಮತ್ತು ಸಾಮಾನ್ಯ ಬಳಕೆದಾರರ ಗುಂಪುಗಳೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
*ರೈತ ಉತ್ಪನ್ನಗಳಿಗೆ ಎಫ್ ಪಿಒ ಮಾರ್ಟ್ ಗಳು
ಜಲಾನಯನ ಅಭಿವೃದ್ಧಿಯ ಜತೆಗೆ ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಉದ್ದೇಶವೂ ಇಲಾಖೆಯದ್ದಾಗಿದೆ. ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಕೃಷಿ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಸಂಪರ್ಕ ಕಲ್ಪಿಸಲಾಗುತ್ತಿದೆ.
ಎಫ್ ಪಿಒಗಳ ನಿರ್ವಹಣೆ, ಉತ್ಪಾದನೆ, ಮೌಲ್ಯವರ್ಧನೆ, ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ಕುರಿತು ತರಬೇತಿ ನೀಡಲಾಗುತ್ತಿದೆ. ‘ರೈತ ಸಿರಿ’ ಬ್ರ್ಯಾಂಡ್ ಅಡಿ ಎಫ್ ಪಿಒ ಮಾರ್ಟ್ ಗಳನ್ನು ತೆರೆದು ರೈತರ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಕ್ರಮ ಕೈಗೊಳ್ಳಲಾಗುತ್ತಿದೆ.
ರಾಜ್ಯದ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ಮೂಲಕ ರಚಿಸಲಾಗಿರುವ 1,472 ರೈತ ಉತ್ಪಾದಕ ಸಂಸ್ಥೆಗಳ ಮಾಹಿತಿಯನ್ನು ಒಂದೇ ವೇದಿಕೆಯಡಿ ತರಲು ಎಫ್ ಪಿಒ ಡ್ಯಾಶ್ ಬೋರ್ಡ್ ಅಭಿವೃದ್ಧಿಪಡಿಸಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಯಡಿ ರಚಿಸಲಾಗಿರುವ 100 ಎಫ್ ಪಿಒಗಳ ಪೈಕಿ 81 ಸಂಸ್ಥೆಗಳಿಗೆ ಗರಿಷ್ಠ 15 ಲಕ್ಷ ರೂ. ಈಕ್ವಿಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಸಾಧನೆಗೆ ರಾಷ್ಟ್ರಮಟ್ಟದ ಪ್ರಶಸ್ತಿಯೂ ಲಭಿಸಿದೆ. ಉಳಿದ 19 ಎಫ್ ಪಿಒಗಳಿಗೂ ಅನುದಾನ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ.
*ಕೃಷಿ ಅರಣ್ಯ, ಖುಷ್ಕಿ ತೋಟಗಾರಿಕೆಗೆ ಒತ್ತು
ಮಳೆಯಾಶ್ರಿತ ಪ್ರದೇಶಗಳಲ್ಲಿಕೃಷಿ ಅರಣ್ಯ ಹಾಗೂ ಖುಷ್ಕಿ ತೋಟಗಾರಿಕೆ ರೈತರ ಆದಾಯ ಹೆಚ್ಚಿಸುವ ಪ್ರಮುಖ ಮಾರ್ಗಗಳಾಗಿವೆ. ಭೂ ಸಂಪನ್ಮೂಲ ಮಾಹಿತಿಯ ಆಧಾರದ ಮೇಲೆ ಸೂಕ್ತ ಬೆಳೆ ಮತ್ತು ಸಸ್ಯಗಳನ್ನು ಆಯ್ಕೆ ಮಾಡಲಾಗುತ್ತದೆ.
ಬದುಗಳ ಮೇಲೆ ಹಣ್ಣು, ಮೇವು ಹಾಗೂ ಅರಣ್ಯ ಸಸಿಗಳನ್ನು ನೆಡುವುದು, ಮನೆಯಂಗಳ ಮತ್ತು ಶಾಲಾ ಆವರಣದಲ್ಲಿಕೈತೋಟ ನಿರ್ಮಿಸುವುದು, ರಸ್ತೆ ಬದಿ ಹಾಗೂ ನಾಲಾ ಪ್ರದೇಶಗಳಲ್ಲಿಸಸಿ ನೆಡುವುದು ಮತ್ತು ನೀರು ಸಂಗ್ರಹಣಾ ವಿನ್ಯಾಸಗಳ ಸುತ್ತ ಅರಣ್ಯ ಸಸಿಗಳನ್ನು ಬೆಳೆಸುವುದು ಯೋಜನೆಯ ಭಾಗವಾಗಿದೆ. ಇದರಿಂದ ಮಣ್ಣು ಕೊಚ್ಚಿಹೋಗುವುದನ್ನು ತಡೆಯಬಹುದು. ಮಳೆನೀರು ನೆಲಕ್ಕೆ ಹೀರಿಕೊಳ್ಳುವ ಪ್ರಮಾಣ ಹೆಚ್ಚುತ್ತದೆ. ರೈತರಿಗೆ ಹಣ್ಣು, ಮೇವು, ಇಂಧನ ಹಾಗೂ ಮರದ ಉತ್ಪನ್ನಗಳಿಂದ ಹೆಚ್ಚುವರಿ ಆದಾಯ ದೊರೆಯಲಿದೆ. ಪರಿಸರ ಸಮತೋಲನ ಕಾಪಾಡುವುದರ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿಹಸಿರು ವ್ಯಾಪ್ತಿಯೂ ಹೆಚ್ಚಲಿದೆ.
*ಮುಂದಿನ ಐದು ವರ್ಷಗಳ ಗುರಿ
ಮುಂದಿನ ಐದು ವರ್ಷಗಳಲ್ಲಿ15 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವನ್ನು ವೈಜ್ಞಾನಿಕ ವಿಧಾನಗಳ ಮೂಲಕ ಅಭಿವೃದ್ಧಿಪಡಿಸಲು ಇಲಾಖೆ ಯೋಜನೆ ರೂಪಿಸಿದೆ. ದಿಬ್ಬದಿಂದ ಕಣಿವೆ ಆಧಾರದ ಮೇಲೆ ಜಲಾನಯನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಸುಮಾರು 300 ಉಪಜಲಾನಯನಗಳಲ್ಲಿ18 ಸಾವಿರ ಮಣ್ಣು ಮತ್ತು ನೀರು ಸಂರಕ್ಷಣಾ ವಿನ್ಯಾಸಗಳನ್ನು ನಿರ್ಮಿಸುವ ಗುರಿ ಇದೆ. ಕೃಷಿ ಹೊಂಡ, ನಾಲಾ ಬದು, ಗೋಕಟ್ಟೆ, ತಡೆ ಅಣೆಕಟ್ಟು, ಕಿಂಡಿ ಅಣೆಕಟ್ಟು, ಬದು, ಕಂದಕದೊಂದಿಗೆ ಬದು ಹಾಗೂ ತೊಟ್ಟಿಲು ಗುಂಡಿಗಳಂತಹ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಈ ಕಾರ್ಯಗಳ ಮೂಲಕ ಸುಮಾರು 12,600 ಕೋಟಿ ಲೀಟರ್ ಮಳೆನೀರು ಸಂಗ್ರಹಣಾ ಸಾಮರ್ಥ್ಯ ಸೃಷ್ಟಿಸುವ ಗುರಿಯಿದೆ. ಮಳೆನೀರು ಸಂಗ್ರಹವಾದರೆ ಅಂತರ್ಜಲ ಮಟ್ಟ ಸುಧಾರಿಸಲಿದೆ. ಕೃಷಿ ಬೆಳೆಗಳಿಗೆ ನೀರಿನ ಲಭ್ಯತೆ ಹೆಚ್ಚಲಿದ್ದು, ಪಶುಸಂಗೋಪನೆ ಹಾಗೂ ತೋಟಗಾರಿಕೆಗೆ ಉತ್ತೇಜನ ದೊರೆಯಲಿದೆ.
ಜಲಾನಯನ ಅಭಿವೃದ್ಧಿ ಕೇವಲ ನೀರು ಸಂಗ್ರಹಣೆಯ ಯೋಜನೆಯಲ್ಲ. ಮಣ್ಣು, ನೀರು, ಬೆಳೆ, ಪಶುಸಂಗೋಪನೆ, ಅರಣ್ಯ, ಮಾರುಕಟ್ಟೆ ಹಾಗೂ ಗ್ರಾಮೀಣ ಬದುಕನ್ನು ಒಟ್ಟಾಗಿ ನೋಡುವ ಸಮಗ್ರ ಅಭಿವೃದ್ಧಿ ವಿಧಾನವಾಗಿದೆ. ಸ್ಥಳೀಯ ಸಮುದಾಯದ ಭಾಗವಹಿಸುವಿಕೆ, ವೈಜ್ಞಾನಿಕ ಮಾಹಿತಿ ಹಾಗೂ ರೈತರ ಅಗತ್ಯಗಳನ್ನು ಆಧರಿಸಿ ಯೋಜನೆಗಳು ಜಾರಿಯಾದರೆ ಕರ್ನಾಟಕದ ಮಳೆಯಾಶ್ರಿತ ಕೃಷಿಗೆ ಹೊಸ ದಿಕ್ಕು ದೊರೆಯಲಿದೆ.