ವಿಕ ಸುದ್ದಿಲೋಕ ಮಂಗಳೂರುನಗರದ ಮರ್ಕೇರಾ ಹಿಲ್ ನಲ್ಲಿರುವ 139 ವರ್ಷಗಳ ಇತಿಹಾಸ ಇರುವ ಸಭಾಂಗಣವನ್ನು ಜೀರ್ಣೋದ್ಧಾರಗೊಳಿಸಿ ಸುಸಜ್ಜಿತ ಸಮುದಾಯ ಭವನವನ್ನಾಗಿ ಪರಿವರ್ತಿಸಿರುವುದು ಜೋನಾಸ್ ಕುಟುಂಬದ ಪೋಷಕರ ಸ್ಮರಣೆಗೆ ಹಾಗೂ ಸುಶಾಂತಿ ನಿಲಯದ ಭವ್ಯ ಇತಿಹಾಸಕ್ಕೆ ಸಲ್ಲಿಸಿದ ಗೌರವ. ಇದು ಸಮುದಾಯದ ಪರಂಪರೆಯ ಮರುಸೃಷ್ಟಿ ಎಂದು ಬೆಂಗಳೂರಿನ ಸಿ.ಎಸ್ .ಐ. ಡೇವಿಡ್ ಮೆಮೋರಿಯಲ್ ಚರ್ಚ್ನ ಮುಖ್ಯಸ್ಥ ಡಾ. ಡೆಕ್ ಸ್ಟರ್ ಎಸ್ . ಮಾಬೆನ್ ಹೇಳಿದರು.
ಜೋನಾಸ್ ಪೆಟ್ರೋ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ನ ಸುನಿಲ್ ಜೋನಾಸ್ ಕುಟುಂಬಸ್ಥರು ತಮ್ಮ ಪೋಷಕರಾದ ದಿ. ಸೆಬಾಸ್ಟಿಯನ್ ಎಲಿಯಾ ಜೋನಸ್ ಮತ್ತು ವಿ. ಸುಲೋಚನಿ ಜೋನಸ್ ಸ್ಮರಣಾರ್ಥವಾಗಿ ನವೀಕರಣಗೊಳಿಸಿದ ಸುಶಾಂತಿ ನಿಲಯದ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಧರ್ಮಪ್ರಾಂತ್ಯದಲ್ಲಾಗಲೀ ಅಥವಾ ಸ್ಥಳೀಯ ಚರ್ಚ್ನಲ್ಲಾಗಲೀ ಯಾವುದೇ ಅಧಿಕೃತ ಹುದ್ದೆ ಹೊಂದಿಲ್ಲದಿದ್ದರೂ ಸುನಿಲ್ ಜೋನಾಸ್ ಅವರು ಪ್ರತಿಫಲಾಪೇಕ್ಷೆಯಿಲ್ಲದೆ ಉದಾರವಾಗಿ ದೇಣಿಗೆ ನೀಡಿ ಕಟ್ಟಡದ ಮರು ನಿರ್ಮಾಣ ಮಾಡಿದ್ದಾರೆ. ಸುನಿಲ್ ಅವರ ಈ ನಿಸ್ವಾರ್ಥ ಕಾರ್ಯ ವಿಶಿಷ್ಟವಾದದ್ದು ಎಂದು ಡಾ. ಡೆಕ್ ಸ್ಟರ್ ಎಸ್ . ಮಾಬೆನ್ ಶ್ಲಾಸಿದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಬಿಷಪ್ , ಧರ್ಮಗುರುಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿನಡೆದ ವಿಶೇಷ ಪ್ರಾರ್ಥನೆಯೊಂದಿಗೆ ನೂತನ ಭವನ ಉದ್ಘಾಟನೆಗೊಂಡಿತು. ದಕ್ಷಿಣ ಭಾರತ ಚರ್ಚ್ನ (ಸಿಎಸ್ ಐ ಕೆ.ಎಸ್ .ಡಿ) ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ರೆ. ಹೇಮಚಂದ್ರ ಕುಮಾರ್ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು. ಸುಶಾಂತಿ ನಿಲಯದ ಸಭಾಪಾಲಕ ರೆ. ಸಂತೋಷ್ ಕುಮಾರ್ ಸಿಂಗ್ , ಸುನಿಲ್ ಜೋನಾಸ್ ಮತ್ತು ಸಂಧ್ಯಾ ಜೋನಾಸ್ ಮತ್ತಿತರರು ಪಾಲ್ಗೊಂಡಿದ್ದರು.
ಆತ್ರ: 139 ವರ್ಷಗಳ ಸುಶಾಂತಿ ನಿಲಯದ ನವೀಕೃತ ಸಮುದಾಯ ಭವನ ಲೋಕಾರ್ಪಣೆ ನಡೆಯಿತು.