ಬೆಂಗಳೂರು: ತೀವ್ರ ಬರದಿಂದ ರಾಜ್ಯದಲ್ಲಿಅಂದಾಜು 18,748.23 ಕೋಟಿ ರೂ. ಮೌಲ್ಯದ ಬೆಳೆ ನಷ್ಟವಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ(ಎನ್ ಡಿಆರ್ ಎಫ್ ) ರಾಜ್ಯ ಸರಕಾರ 3,705.30 ಕೋಟಿ ರೂ. ನೆರವು ಕೋರಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೇಂದ್ರ ಸಚಿವ ಎಚ್ .ಡಿ. ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಈ ಸಂಬಂಧ ಸೆ.24ರಂದು ಚೌಹಾಣ್ ಅವರಿಗೆ ಬರೆದಿದ್ದು, ‘‘ರಾಜ್ಯದಲ್ಲಿಶೇ.34ರಷ್ಟು ಮಳೆ ಕೊರತೆಯಾಗಿದೆ. 19.52 ಲಕ್ಷ ಹೆಕ್ಟೇರ್ ನಲ್ಲಿಬೆಳೆ ನಷ್ಟವಾಗಿದೆ. ಹಾಗಾಗಿ ಅಧ್ಯಯನ ಸಂಬಂಧ ಕೇಂದ್ರದ ತಂಡ ಕಳುಹಿಸಿ ಕೊಡಬೇಕು,’’ ಎಂದು ಮನವಿ ಮಾಡಿಕೊಂಡಿದ್ದರು. ಬಳಿಕ ಕುಮಾರಸ್ವಾಮಿ ಪತ್ರಕ್ಕೆ ಸೆ.29ರಂದು ಪ್ರತಿಕ್ರಿಯಿಸಿ ಪತ್ರ ಬರೆದಿರುವ ಕೇಂದ್ರ ಕೃಷಿ ಸಚಿವರು, ಸ್ಥಳ ಪರಿಶೀಲನೆಗೆ ತಂಡ ರಚಿಸಲಾಗಿದ್ದು, ಪ್ರವಾಸ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.