ವಿಕ ಸುದ್ದಿಲೋಕ ಕುಶಾಲನಗರ ಹಾಸನ ಜಿಲ್ಲೆಯ ಬೇಲೂರಿನಲ್ಲಿಸೆರೆ ಹಿಡಿದು ತರಲಾಗಿದ್ದ 19 ವರ್ಷದ ಗಂಡಾನೆ ದುಬಾರೆ ಸಾಕಾನೆ ಶಿಬಿರದಲ್ಲಿಮಂಗಳವಾರ ಮೃತಪಟ್ಟಿದೆ. ಉಪಟಳ ನೀಡುತ್ತಿದ್ದ ಆನೆಯನ್ನು ಏಪ್ರಿಲ್ ತಿಂಗಳಲ್ಲಿಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿತ್ತು. ಸೆರೆ ವೇಳೆ ತೀವ್ರವಾಗಿ ಗಾಯಗೊಂಡಿತ್ತು. ಕಾದಾಟದ ಗಾಯ, ಮುರಿದ ದಂತದೊಂದಿಗೆ ಶಿಬಿರಕ್ಕೆ ತರಲಾಗಿತ್ತು. ಹೀಗಾಗಿ ಆನೆಗೆ ಶಿಬಿರದಲ್ಲಿಕಳೆದ 5 ತಿಂಗಳಿಂದ ನಿರಂತರ ಆರೈಕೆ ಮಾಡಲಾಗುತ್ತಿತ್ತು. ಅರಣ್ಯ ಇಲಾಖೆ ಪಶುವೈದ್ಯರು ಆನೆಯನ್ನು ಪ್ರತ್ಯೇಕವಾಗಿಟ್ಟು ಪ್ರತಿದಿನ ಸೂಕ್ತ ಚಿಕಿತ್ಸೆ ನೀಡುತ್ತಿದ್ದರು. ಅಲ್ಲದೆ, ಹೆಚ್ಚಿನ ಚಿಕಿತ್ಸೆಗಾಗಿ ’ವೈಲ್ಡ್ ಲೈಫ್ ಎಸ್ ಒಎಸ್ ’ ಸಂಸ್ಥೆಯ ನುರಿತ ವನ್ಯಜೀವಿ ಪಶುವೈದ್ಯರ ತಂಡ ಕರೆಸಿ ಜಂಟಿ ತಪಾಸಣೆ ನಡೆಸಲಾಗುತ್ತಿತ್ತು. ಡಿಜಿಟಲ್ ಎಕ್ಸ್ -ರೇ ಪರೀಕ್ಷೆಯಲ್ಲಿಎಡ ಮೊಣಕೈ ಮೂಳೆಯಲ್ಲಿಬಿರುಕು ಇರುವುದು ದೃಢಪಟ್ಟಿತ್ತು. ತಜ್ಞರ ಸಲಹೆಯಂತೆ ಸುಧಾರಿತ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಮಂಗಳವಾರ ಆನೆ ಏಕಾಏಕಿ ಕುಸಿದು ಬಿತ್ತು. ತಕ್ಷಣ ಅಗತ್ಯ ಚಿಕಿತ್ಸೆ ನೀಡಿದರೂ ಸ್ಪಂದಿಸದೆ ಮೃತಪಟ್ಟಿದೆ. ‘‘ದೀರ್ಘಕಾಲದ ಮೂಳೆ ಮುರಿತ, ನಿರಂತರ ಅನಾರೋಗ್ಯ ಮತ್ತು ದೈಹಿಕ ದೌರ್ಬಲ್ಯದಿಂದ ಆನೆ ಮೃತಪಟ್ಟಿರಬಹುದು’’ ಎಂದು ಪ್ರಾಥಮಿಕ ಪಶುವೈದ್ಯಕೀಯ ವರದಿ ತಿಳಿಸಿದೆ. ದುಬಾರೆಯಲ್ಲೇ ಆನೆಯ ಅಂತ್ಯಕ್ರಿಯೆ ನೆರವೇರಿಸಲಾಯಿತು.