ನಿಮ್ಹಾನ್ಸ್

Contributed by: shubha.hegde@timesgroup.com|Vijaya Karnataka•
loneliness and ocd nimhans psychiatric advice
ಡಾ. ಮೃಣ್ಮಯಿ ಭಿಡೆ

ಹಿರಿಯ ರೆಸಿಡೆಂಟ್ , ಮನೋರೋಗ ವಿಭಾಗ, ನಿಮ್ಹಾಸ್ಸ್
ಒಂಟಿತನದಿಂದ ಪಾರಾಗುವ ಮಾರ್ಗ

ನನಗೆ 62 ವರ್ಷ. ಏಕಾಂಗಿಯಾಗಿ ವಾಸಿಸುತ್ತಿದ್ದೇನೆ. ಈ ಒಂಟಿತನ ನನ್ನನ್ನು ಸತಾಯಿಸುತ್ತಿದೆ. ರಾತ್ರಿಗಳನ್ನು ಕಳೆಯುವುದೇ ಕಷ್ಟ. ಸೂಕ್ತ ಪರಿಹಾರ ಸೂಚಿಸಿ.;

ಹೆಸರು ಬೇಡ, ಊರು ಬೇಡ

ಹಗಲು , ರಾತ್ರಿ ಹೀಗೆ ನಿಮ್ಮ ಸಮಯಕ್ಕೆ ಪೂರಕವಾಗಿ ದಿನಚರಿ ರೂಪಿಸಿಕೊಳ್ಳಿ. ನಿಮ್ಮ ಭಾವನೆಗಳನ್ನು ಮನಸ್ಸಿನಲ್ಲೇ ಹತೋಟಿಯಲ್ಲಿಟ್ಟುಕೊಳ್ಳುವ ಬದಲು ಆತ್ಮೀಯರೊಂದಿಗೆ ಹಂಚಿಕೊಳ್ಳಿ. ವಿಶ್ರಾಂತಿ ಅಥವಾ ಉಸಿರಾಟದ ಅಭ್ಯಾಸಗಳು, ಯೋಗ ಅಥವಾ ಇತರ ದೈಹಿಕ ಚಟುವಟಿಕೆಗಳನ್ನು ಪ್ರಯತ್ನಿಸಿ ನಿಯಮಿತ ನಿದ್ರೆಯ ವೇಳಾಪಟ್ಟಿಯನ್ನು ಕಾಯ್ದುಕೊಳ್ಳಬಹುದು. ಜೀವನದ ಈ ಹಂತದಲ್ಲಿನಿಮಗಾಗಿ ನೀವು ಏನನ್ನು ಬಯಸುತ್ತೀರಿ ಎಂಬುದರ ಕುರಿತು ಆಲೋಚಿಸಿ. ನಿರಂತರ ಖಿನ್ನತೆ/ಸಂಕಟ, ಅತಿಯಾದ ಚಿಂತೆ ಅಥವಾ ಆತಂಕ, ಆಸಕ್ತಿಯ ಕೊರತೆ, ನಿದ್ರೆ ಅಥವಾ ಹಸಿವಿನಲ್ಲಿಗಮನಾರ್ಹ ಬದಲಾವಣೆಗಳು, ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿತೊಂದರೆಯನ್ನು ಎದುರಿಸುತ್ತಿದ್ದರೆ ಹಾಗೂ ಈ ರೋಗಲಕ್ಷಣಗಳು ತೀವ್ರ ತೊಂದರೆಯನ್ನು ಉಂಟುಮಾಡುತ್ತಿದ್ದರೆ ಮನೋ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.

ನನಗೆ ಒಸಿಡಿ ಇದೆಯೇ ಎಂದು ತಿಳಿಯುವುದು ಹೇಗೆ?

ಅಮೃತಾ, ಬೀದರ್

ಒಸಿಡಿ ಅಥವಾ ಒಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ ಎಂಬುದು ಒಂದು ಮಾನಸಿಕ ಆರೋಗ್ಯ ಸಮಸ್ಯೆ. ಇದರಲ್ಲಿಮರುಕಳಿಸುವ, ಅನಗತ್ಯ ಮತ್ತು ಮಾನಸಿಕ ಸಂಕಟ ತರುವ ಆಲೋಚನೆಗಳು, ಕಲ್ಪನೆಗಳು ಅಥವಾ ಪ್ರಚೋದನೆಗಳನ್ನು ಅನುಭವಿಸುತ್ತಾರೆæ. ಆತಂಕವನ್ನು ಕಡಿಮೆ ಮಾಡಲು ಅಥವಾ ಭಯವನ್ನು ತಡೆಯಲು ಪುನರಾವರ್ತಿತ ನಡವಳಿಕೆಗೆ ಇವರು ಒಳಗಾಗುತ್ತಾರೆ. ಉದಾಹರಣೆಗೆ ವ್ಯಕ್ತಿಯೊಬ್ಬರಿಗೆ ತಮ್ಮ ಕೈಗಳು ಕಲುಷಿತಗೊಂಡಿವೆ ಎಂಬ ಭಯ ಪದೇಪದೆ ಬರಬಹುದು ಮತ್ತು ಕೈಗಳನ್ನು ಅತಿಯಾಗಿ ತೊಳೆಯಬಹುದು. ತಾವು ಏನಾದರೂ ತಪ್ಪು ಮಾಡಿದ್ದೇವೆಯೇ ಎಂದು ಪದೇಪದೆ ಸಂಶಯಗೊಂಡು ಅದನ್ನು ಮರಳಿ ಮರಳಿ ಪರಿಶೀಲಿಸಬಹುದು. ಇಂತಹ ಆಲೋಚನೆಗಳು ಮತ್ತು ನಡವಳಿಕೆಗಳನ್ನು ಹತೋಟಿಯಲ್ಲಿಡುವುದು ಕಷ್ಟ. ಇವು ನಿರರ್ಥಕ ಅಥವಾ ಮೂರ್ಖತನದಿಂದ ಕೂಡಿದಂತೆ ತೋರಬಹುದು. ದೈನಂದಿನ ಜೀವನಕ್ಕೆ ಅಡ್ಡಿಪಡಿಸಬಹುದು ಅಥವಾ ತೀವ್ರ ಮಾನಸಿಕ ತೊಂದರೆಯನ್ನುಂಟುಮಾಡಬಹುದು.

ಸಾಂದರ್ಭಿಕ ಚಿಂತೆಗಳು, ಅನುಮಾನಗಳು ಅಥವಾ ಪುನರಾವರ್ತಿತ ಅಭ್ಯಾಸಗಳನ್ನು ಹೊಂದಿರುವುದು ಎಂದರೆ ನಿಮಗೆ ಒಸಿಡಿ ಇದೆ ಎಂದರ್ಥವಲ್ಲ. ಮಾನಸಿಕ ಆರೋಗ್ಯ ತಜ್ಞರು ರೋಗಲಕ್ಷಣಗಳ ಸ್ವರೂಪ, ಅವುಗಳ ಅವಧಿ, ಉಂಟಾಗುವ ತೊಂದರೆ ಮತ್ತು ದೈನಂದಿನ ಕಾರ್ಯಚಟುವಟಿಕೆಗಳ ಮೇಲಿನ ಪ್ರಭಾವವನ್ನು ಪರಿಗಣಿಸಿ ನಡೆಸುವ ವಿವರವಾದ ವೈದ್ಯಕೀಯ ತಪಾಸಣೆಯ ಆಧಾರದ ಮೇಲೆ ಇದರ ರೋಗನಿರ್ಣಯವನ್ನು ಮಾಡಲಾಗುತ್ತದೆ.

ಇಂತಹ ಆಲೋಚನೆಗಳು ಅಥವಾ ನಡವಳಿಕೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಕಷ್ಟ ಅಥವಾ ಅವು ನಿಮ್ಮ ದೈನಂದಿನ ಜೀವನಕ್ಕೆ ಅಡ್ಡಿಪಡಿಸುತ್ತಿವೆ ಎಂದು ನಿಮಗನಿಸಿದರೆ ತಪಾಸಣೆಗಾಗಿ ಮನೋವೈದ್ಯರನ್ನು ಸಂಪರ್ಕಿಸಿ. ಒಸಿಡಿಗೆ ಚಿಕಿತ್ಸೆ ಸಾಧ್ಯ. ಇದಕ್ಕೆ ಸೂಕ್ತ ಚಿಕಿತ್ಸೆಯು ಗಮನಾರ್ಹವಾಗಿ ನೆರವಾಗುತ್ತದೆ.

ಮಾನಸಿಕ ಆರೋಗ್ಯದ ಬೆಂಬಲ ಅಥವಾ ಮಾರ್ಗದರ್ಶನ ಅಗತ್ಯವಿದ್ದರೆ ಟೆಲಿ-ಮಾನಸ್ ಸಹಾಯವಾಣಿ ಸಂಖ್ಯೆ 14416 ಅಥವಾ 1-800-89-14416 ಅನ್ನು ಸಂಪರ್ಕಿಸಬಹುದು.