What Did Priyank Kharge Respond When Questioned By Kalkod Prabhakar Bhat In Chitradurga
ಚಿತ್ತಾಪುರದಲ್ಲಿಅದ್ಹೇಗೆ ಮಾಡ್ತಿರೋ ನೋಡೇ ಬಿಡೋಣ
Contributed by: KENCHE GOWDA|Vijaya Karnataka•
ಚಿತ್ತಾಪುರದಲ್ಲಿಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಸವಾಲು ಹಾಕಿದ್ದಾರೆ. ಕಾನೂನು ಮೀರಿ ಪಥ ಸಂಚಲನ ಮಾಡುವುದಾದರೆ ಮಾಡಲಿ ನೋಡೋಣ ಎಂದು ಖರ್ಗೆ ಹೇಳಿದ್ದಾರೆ. ಕೋರ್ಟ್ ಅನುಮತಿ ಇಲ್ಲದೆ ಪಥ ಸಂಚಲನ ನಡೆಸಿದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಖರ್ಗೆ ಕುಟುಂಬದ ಆಸ್ತಿ ತನಿಖೆಗೆ ಬಿಜೆಪಿ ನಾಯಕರು ಹೇಳಿಕೆಗೆ ಪ್ರತಿಕ್ರಿಯಿಸಿ, ಖರ್ಗೆ ಅವರು ತನಿಖೆಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಆರ್‌ಎಸ್‌ಎಸ್ ಸಂಘಟನೆಯ ಆಸ್ತಿ ಮೂಲದ ಬಗ್ಗೆಯೂ ತನಿಖೆಗೆ ಆಗ್ರಹಿಸಿದ್ದಾರೆ.
ಬೆಂಗಳೂರು: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಕರೆ ನೀಡಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ಮಾಡಲಿ ನೋಡೇ ಬಿಡೋಣ" ಎಂದು ಸವಾಲು ಹಾಕಿದ್ದಾರೆ. ಕೋರ್ಟ್ ಅನುಮತಿ ಇಲ್ಲದೆ ಪಥ ಸಂಚಲನ ನಡೆಸಿದರೆ ಸರ್ಕಾರ ಸುಮ್ಮನೆ ಇರುವುದಿಲ್ಲ ಎಂದು ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಆರ್‌ಎಸ್‌ಎಸ್ ಸಂಘಟನೆಯ ಆಸ್ತಿ ಮೂಲ ಮತ್ತು ತೆರಿಗೆ ಪಾವತಿ ಬಗ್ಗೆಯೂ ಅವರು ಪ್ರಶ್ನಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಲ್ಲಡ್ಕ ಪ್ರಭಾಕರ ಭಟ್ ಯಾರು ಎಂದು ಪ್ರಶ್ನಿಸಿದರು. ಅವರು ಕೋರ್ಟ್ ಮತ್ತು ಕಾನೂನಿಗಿಂತ ದೊಡ್ಡವರೇ ಎಂದು ಖರ್ಗೆ ಕೇಳಿದರು. "ಕಲ್ಲಡ್ಕ ಪ್ರಭಾಕರ್ ಆದರೂ ಒಂದೇ, ಅವರಪ್ಪ ಆದರೂ ಒಂದೇ.., ಕಾನೂನು ಮೀರಿ ಪಥ ಸಂಚಲನ ಮಾಡುತ್ತೇವೆ ಎಂದರೆ ಮಾಡಲಿ ನೋಡೋಣ," ಎಂದು ಅವರು ನೇರವಾಗಿ ಸವಾಲು ಹಾಕಿದರು.ಕೋರ್ಟ್ ಅನುಮತಿ ಇಲ್ಲದೆ ಪಥ ಸಂಚಲನ ಹೇಗೆ ಸಾಧ್ಯ ಎಂದು ಖರ್ಗೆ ಪ್ರಶ್ನಿಸಿದರು. ಅನುಮತಿ ಇಲ್ಲದೆ ಮಾಡಿದರೆ ಸರ್ಕಾರ ಸುಮ್ಮನೆ ಕಾಯುತ್ತಿರುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು. ಚಿತ್ತಾಪುರದಲ್ಲಿ 11 ಸಂಘಟನೆಗಳು ಕಾರ್ಯಕ್ರಮ ನಡೆಸಲು ಮುಂದಾಗಿವೆ. ಅಧಿಕಾರಿಗಳು ಶಾಂತಿ ಸಭೆ ನಡೆಸುತ್ತಾರೆ. ಯಾರ ಮೇಲೂ ಒತ್ತಡ ತರುವುದಿಲ್ಲ. ಕೇವಲ ಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಖರ್ಗೆ ಕುಟುಂಬದ ಆಸ್ತಿ ವಿವರ ತನಿಖೆಯಾಗಲಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ನಮ್ಮ ಆಸ್ತಿ ವಿವರ ಜನರ ಮುಂದಿದೆ. ಅಗತ್ಯವಿದ್ದರೆ ತನಿಖೆ ಎದುರಿಸಲು ನಾವು ಸಿದ್ಧರಿದ್ದೇವೆ ಎಂದರು. ಆದರೆ, ಆರ್‌ಎಸ್‌ಎಸ್ ಸಂಘಟನೆಯ ಆಸ್ತಿಯ ಮೂಲ ಏನು ಎಂಬ ಬಗ್ಗೆ ತನಿಖೆಗೆ ಬಿಜೆಪಿ ನಾಯಕರು ಸಿದ್ಧರಿದ್ದಾರಾ ಎಂದು ಅವರು ಪ್ರಶ್ನಿಸಿದರು.
ವಿಶ್ವದ ಶ್ರೀಮಂತ ಎನ್‌ಜಿಒ ಆಗಿರುವ ಆರ್‌ಎಸ್‌ಎಸ್ 100 ವರ್ಷ ಕಳೆದರೂ ನೋಂದಣಿಯಾಗಿಲ್ಲ, ತೆರಿಗೆ ಪಾವತಿಸಿಲ್ಲ ಎಂದು ಖರ್ಗೆ ಆರೋಪಿಸಿದರು. ದೇವಸ್ಥಾನದ ಹುಂಡಿಗೆ ಬೀಗ ಇರುತ್ತದೆ ಮತ್ತು ಅದನ್ನು ತೆರೆಯಲು ಜವಾಬ್ದಾರಿಯುತ ಅಧಿಕಾರಿ ಇರುತ್ತಾರೆ. ಆದರೆ, ಆರೆಸ್ಸೆಸ್ ದೇವಾಲಯ, ದೇವರಿಗಿಂತ ದೊಡ್ಡದಾ? ದೇಣಿಗೆಯ ಮೂಲ ಗೊತ್ತಾಗಬೇಕಲ್ಲವೇ? ಅದರ ಲೆಕ್ಕವನ್ನೂ ಕೊಡಲಿ ಎಂದು ಅವರು ಆಗ್ರಹಿಸಿದರು.