ವಿಕ ಸುದ್ದಿಲೋಕ ಕಲಬುರಗಿ ಜಿಲ್ಲೆಯ ಎಲ್ಲಗ್ರಾಮ ಪಂಚಾಯಿತಿ ಗಳಲ್ಲಿಕಾರ್ಯನಿರ್ವಹಿಸುತ್ತಿರುವ ಸ್ವಚ್ಛ ವಾಹಿನಿ ವಾಹನದ ಸಿಬ್ಬಂದಿಗೆ ಉದ್ಯೋಗ ಭದ್ರತೆ ಹಾಗೂ ಸೂಕ್ತ ಸಮಯಕ್ಕೆ ಸಂಬಳ, ಗೌರವಧನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾಘಟಕದ ಮುಖಂಡರು ಬುಧವಾರ ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿಗಳಲ್ಲಿಘನತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತಾ ಕಾರ್ಯಕ್ಕಾಗಿ ಸ್ವಚ್ಛ ವಾಹಿನಿ ವಾಹನಗಳನ್ನು ಬಳಸಲಾಗುತ್ತಿದೆ. ಈ ವಾಹನಗಳನ್ನು ಚಾಲನೆ ಮಾಡುವ ಚಾಲಕರು ಗ್ರಾಮಗಳಲ್ಲಿನ ಮನೆಮನೆಗೆ ತೆರಳಿ ಕಸ ಸಂಗ್ರಹಣೆ, ಸಾಗಣೆ ಮತ್ತು ವಿಲೇವಾರಿ ಮಾಡುವಂತಹ ಪ್ರಮುಖ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ಆದರೆ, ಅವರಿಗೆ ಇನ್ನೂವರೆಗೂ ಉದ್ಯೋಗ ಭದ್ರತೆ ಇಲ್ಲವಾಗಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು. ಚಾಲಕರಿಗೆ ನೀಡಬೇಕಾದ ಸಂಬಳ, ಗೌರವಧನವನ್ನು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ನೀಡುವಂತೆ ಎಲ್ಲಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಬೇಕು, ಡ್ರೈವರ್ ಗಳೊಂದಿಗೆ ಗೌರವಯುತವಾಗಿ ವರ್ತಿಸುವಂತೆ ಮತ್ತು ಅನ್ಯಾಯ ವಾಗದಂತೆ ಕ್ರಮಕೈಗೊಳ್ಳಬೇಕು, ವಾಹನದ ನಿರ್ವಹಣೆ, ಇಂಧನ ಹಾಗೂ ಅಗತ್ಯ ಸೌಲಭ್ಯಗಳನ್ನು ಗ್ರಾಮ ಪಂಚಾಯಿತಿಗಳಿಂದ ಸರಿಯಾಗಿ ಒದಗಿಸುವಂತೆ ಸೂಚನೆ ನೀಡಬೇಕು, ಡ್ರೈವರ್ ಗಳ ಅನೇಕ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಧ್ಯಕ್ಷ ರುಕ್ಕಣ್ಣ ರೆಡ್ಡಿ, ಕಾರ್ಯದರ್ಶಿ ಅನೀಲ ದಿಗಸಂಗಿ, ಜಿಲ್ಲಾಧ್ಯಕ್ಷ ಸಮೀತ್ರಸಿಂಗ್ ಪಟ್ಟಣ, ಮಹಿಳಾ ಘಟಕದ ಜಿಲ್ಲಾಉಪಾಧ್ಯಕ್ಷೆ ಪ್ರಮೀಳಾ ಶಾದಿಪುರ ಇತರರಿದ್ದರು.

