29 ಸಾವಿರ ಕುಟುಂಬಗಳಿಗೆ ಮನೆ ಹಕ್ಕುಪತ್ರ
*ಜಿಲ್ಲಾಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ | ಬೇಲೂರಿನಲ್ಲಿಜನಸ್ಪಂದನಾ ಕಾರ್ಯಕ್ರಮ | ಸಾವಿರಾರು ಅಹವಾಲು ಸಲ್ಲಿಕೆ
ವಿಕ ಸುದ್ದಿಲೋಕ ಬೇಲೂರು
ಜಿಲ್ಲೆಯಲ್ಲಿಸೂಕ್ತ ದಾಖಲಾತಿ ಇಲ್ಲದೆ ಮನೆ ಕಟ್ಟಿಕೊಂಡಿರುವ 700ಕ್ಕೂ ಹೆಚ್ಚು ವಸತಿ ಪ್ರದೇಶ ಗುರುತಿಸಲಾಗಿದ್ದು, 29000 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿಶುಕ್ರವಾರ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ‘‘ಈಗಾಗಲೇ ಜಿಲ್ಲಾಕೇಂದ್ರ ಹಾಸನದಲ್ಲಿ, ಚನ್ನರಾಯಪಟ್ಟಣ ಹಾಗೂ ಸಕಲೇಶಪುರದಲ್ಲಿಜನಸ್ಪಂದನಾ ಕಾರ್ಯಕ್ರಮ ನಡೆಸಿದ್ದು ಒಟ್ಟು 2893 ಅರ್ಜಿಗಳು ಬಂದಿದ್ದು, ಅದರಲ್ಲಿ2837 ವಿಲೇವಾರಿ ಆಗಿದೆ,’’ ಎಂದರು.
‘‘ಅತಿ ಹೆಚ್ಚು ದುರಸ್ತಿ ಕಾರ್ಯ ಮತ್ತು ತಾತ್ಕಾಲಿಕ ಪೋಡಿ ಕಾರ್ಯವು ಹೆಚ್ಚಾಗಿ ಕಂಡುಬಂದಿದೆ. ಐದು ವರ್ಷಗಳ ಹಿಂದೆ ಸುಮಾರು 300ರಷ್ಟು ಮಾತ್ರ ಅರ್ಜಿ ದುರಸ್ತಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಸುಮಾರು 20000 ಅರ್ಜಿ ದುರಸ್ತಿ ಕಾರ್ಯಗಳು ಈಗಾಗಲೇ ನಡೆದಿದೆ. ಇನ್ನೂ ಸುಮಾರು 25 ಸಾವಿರಕ್ಕೂ ಅಧಿಕ ದುರಸ್ತಿ ಕಾರ್ಯಗಳು ನಡೆಯಬೇಕಾಗಿದೆ. ಸದ್ಯದಲ್ಲೇ ಈ ದುರಸ್ತಿ ಕಾರ್ಯಗಳನ್ನು ನೆರವೇರಿಸಲಾಗುವುದು,’’ ಎಂದು ಹೇಳಿದರು.
ಶಾಸಕ ಎಚ್ .ಕೆ.ಸುರೇಶ್ ಮಾತನಾಡಿ, ‘‘ಬೇಲೂರು ತಾಲೂಕು ಮಲೆನಾಡು, ಅರೆಮಲೆನಾಡು, ಬಯಲು ಸೀಮೆ ಪ್ರದೇಶಗಳನ್ನು ಹೊಂದಿದ್ದು ಸಮಸ್ಯೆಗಳು ಸಾವಿರಾರು ಇವೆ. ಎಲ್ಲಾಇಲಾಖೆಗಳಲ್ಲಿಕಂದಾಯ ಇಲಾಖೆ ತಾಯಿ ಸ್ಥಾನದಲ್ಲಿದೆ. ಇಲ್ಲಿಯ ಸಮಸ್ಯೆಗಳನ್ನು ಸಚಿವರು ಆದಷ್ಟು ಬಗೆಹರಿಸುವ ನಂಬಿಕೆ ನಮಗೆ ಇದೆ. ಈ ಹಿಂದೆ ಜಿಲ್ಲಾಉಸ್ತುವಾರಿ ಸಚಿವರನ್ನು ಕರೆ ತರುವುದಾಗಿ ಭರವಸೆ ನೀಡಿದ್ದೆ. ಅದರಂತೆ ನಮ್ಮ ಮಾತನ್ನು ಉಳಿಸಿಕೊಂಡಿದ್ದೇನೆ,’’ ಎಂದರು.
ಈ ಸಂದರ್ಭದಲ್ಲಿಸಾವಿರಾರು ಜನರು ಸರತಿ ಸಾಲಿನಲ್ಲಿನಿಂತು ಸಚಿವರಿಗೆ ಅಹವಾಲು ಸಲ್ಲಿಸಿದರು. ಕಂದಾಯ, ವಿದ್ಯುತ್ , ಅರಣ್ಯ, ಗ್ರಾಮ ಪಂಚಾಯಿತಿ, ಅಂಗನವಾಡಿ, ಲೋಕೋಪಯೋಗಿ ಮತ್ತು ಜಿಲ್ಲಾಪಂಚಾಯಿತಿ, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಸಾರಿಗೆ ಇಲಾಖೆ ಬಗ್ಗೆ ಅತಿಹೆಚ್ಚು ದೂರುಗಳು ಬಂದಿದ್ದು, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೆಅಧಿಕಾರಿಗಳನ್ನು ಕರೆಸಿ ಸೂಕ್ತ ಪರಿಹಾರ ಸೂಚಿಸಿದರು.
ಸಭೆಯಲ್ಲಿಜಿಲ್ಲಾಧಿಕಾರಿ ಲತಾಕುಮಾರಿ, ಶಾಸಕ ಎಚ್ .ಕೆ.ಸುರೇಶ್ , ಸಂಸದ ಶ್ರೇಯಸ್ ಪಟೇಲ್ , ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ, ಆರ್ ಎಫ್ ಒ ಸೌರಭ್ ಕುಮಾರ್ , ಪುರಸಭೆ ಅಧ್ಯಕ್ಷೆ ಉಷಾ, ಬೇಲೂರು ಹಳೇಬೀಡು ಪ್ರಾಧಿಕಾರದ ಅಧ್ಯಕ್ಷ ತೌಫಿಕ್ , ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ ಆನಂದ್ , ಬಗರ್ ಹುಕುಂ ಸಮಿತಿ ಅಧ್ಯಕ್ಷ ನಾಗೇಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.
ತಾಲೂಕು ಕೇಂದ್ರದಲ್ಲಿಮೂರು
ತಿಂಗಳಿಗೊಮ್ಮೆ ಜನಸ್ಪಂದನಾ
ಸಾರ್ವಜನಿಕರು ತಮ್ಮ ಸಮಸ್ಯೆ, ಅಹವಾಲುಗಳನ್ನು ಸಚಿವರು, ಜಿಲ್ಲಾಡಳಿತದ ಮುಂದೆ ನೇರವಾಗಿ ಹೇಳಿಕೊಳ್ಳಲು ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೂರು ತಿಂಗಳಿಗೊಮ್ಮೆ ತಾಲೂಕು ಕೇಂದ್ರದಲ್ಲಿನಡೆಸಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
‘‘ಸರಕಾರ ಜನರ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದರಿಂದ ಜನರು ಮಧ್ಯವರ್ತಿಗಳು, ಪುಡಾರಿಗಳ ಅವಶ್ಯಕತೆ ಇಲ್ಲದೆ ನೇರವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು,’’ ಎಂದು ಹೇಳಿದರು.
‘‘ಜನರ ಎಲ್ಲಾಸಮಸ್ಯೆಗಳನ್ನೂ ಬಗೆಹರಿಸಲು ಆಗುವುದಿಲ್ಲ. ಕಾನೂನು ಚೌಕಟ್ಟಿನೊಳಗೆ ನ್ಯಾಯಯುತವಾಗಿ ಇರುವಂತಹ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಅಕ್ಕ ಪಕ್ಕದ ಮನೆಯವರ ಜಗಳ, ಜಮೀನು ವಿವಾದ ಇಂತಹ ಸಮಸ್ಯೆಗಳನ್ನು ದಯಮಾಡಿ ಇಲ್ಲಿತರಬೇಡಿ,’’ ಎಂದರು.
ಪುರಸಭೆಯಲ್ಲಿಭ್ರಷ್ಟಾಚಾರ
ಆರೋಪ: ತನಿಖೆಗೆ ಸೂಚನೆ
ಪುರಸಭೆಯಲ್ಲಿಆಕ್ರಮ ಖಾತೆ ಸೇರಿದಂತೆ ರೈಲ್ವೆ ಯೊಜನೆಗೆ ಭೂ ಸ್ವಾಧೀನಗೊಳ್ಳುವ ಜಮೀನುಗಳಿಗೆ ಸರ್ವೆ ಇಲಾಖೆಯೊಂದಿಗೆ ಶಾಮೀಲಾಗಿ ಜಮೀನುಗಳಿಗೆ ಇ-ಸ್ವತ್ತು ಮಾಡಿ ಸರಕಾರಕ್ಕೆ ಕೋಟ್ಯಂತರ ರೂ.ಗಳನ್ನು ವಂಚಿಸಿರುವ ಬಗ್ಗೆ ದೂರು ಬಂದಿದ್ದು ಇದರ ಸೂಕ್ತ ತನಿಖೆ ನಡೆಸಬೇಕೆಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರಲ್ಲದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ¨ರು.
ಅರಣ್ಯ ಇಲಾಖೆ ಸಾಗುವಳಿ
ಭೂಮಿ ಸರ್ವೆಗೆ ನಿರ್ದೇಶನ
ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಕೆಲವು ರೈತರು ಯಾವುದೇ ದಾಖಲೆ ಇಲ್ಲದೆ ಸಾಗುವಳಿ ಮಾಡುತ್ತಿದ್ದು ಇದರಿಂದ ಅರಣ್ಯ, ಕಂದಾಯ ಹಾಗೂ ಸರ್ವೆ ಇಲಾಖೆಗಳೊಂದಿಗೆ ರೈತರ ಸಂಘರ್ಷ ಉಂಟಾಗುತ್ತಿದೆ. ಇದನ್ನು ಸೂಕ್ತವಾಗಿ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು.
*ಫೋಟೊ ಇದೆ
10ಬಿಎಲ್ ಆರ್ 04ಪಿ01: ಬೇಲೂರಿನ ತಾಲೂಕು ಕಚೇರಿಯ ಆವರಣದಲ್ಲಿನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಸಾರ್ವಜನಿಕರು ಅಹವಾಲು ಸಲ್ಲಿಸಿದರು.

