10 ದಿನಗಳ ಮಹೋತ್ಸವಕ್ಕೆ ಚಾಲನೆ | ಅನ್ನದಾಸೋಹ ಆರಂಭ
ವಿಕ ಸುದ್ದಿಲೋಕ ಪುತ್ತೂರು
ಹತ್ತು ದಿನಗಳ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ. ಬೆಳಗ್ಗೆ 9.30ರ ವೃಷಭ ಲಗ್ನ ಸುಮುಹೂರ್ತದಲ್ಲಿದೇವಳದಲ್ಲಿಧ್ವಜಾರೋಹಣ ಮಾಡುವ ಮೂಲಕ ಉತ್ಸವ ಆರಂಭಗೊಂಡಿತು.
ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿದೇವಸ್ಥಾನದಲ್ಲಿಬೆಳಗ್ಗಿನಿಂದ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡವು. ಶ್ರೀ ಮಹಾಗಣಪತಿ ಹೋಮ ನಡೆದು ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಧ್ವಜಸ್ತಂಭ ಪೂಜೆ ನಡೆಯಿತು. ನಂತರ ದೇವರ ಉತ್ಸವ ಬಲಿಯೊಂದಿಗೆ ಧ್ವಜ ಏರಿಸಲು ಬಳಸುವ ಗರುಡನನ್ನು ಮಂಗಳವಾದ್ಯಗಳ ಮೆರವಣಿಗೆಯೊಂದಿಗೆ ತರಲಾಯಿತು. ಧ್ವಜಾರೋಹಣ ನಡೆಯುತ್ತಿದ್ದಂತೆ ಸೇರಿದ್ದ ಸಾವಿರಾರು ಭಕ್ತರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಜಯಕಾರ ಹಾಕುತ್ತಾ ಹರ ಹರ ಮಹಾದೇವ್ ಘೋಷಣೆ ಕೂಗಿದರು.
ಶಾಸಕ ಅಶೋಕ್ ರೈ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ , ಸಮಿತಿ ಸದಸ್ಯರು, ಪುತ್ತೂರಿನ ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಉಪಸ್ಥಿತರಿದ್ದರು.
ಭಗವಾಧ್ವಜಾರೋಹಣ: ಶ್ರೀದೇವರ ಕೊಡಿ ಏರಿದ ಬಳಿಕ ದೇವಸ್ಥಾನದ ಮುಂಭಾಗದ ಧ್ವಜ ಕಟ್ಟೆಯಲ್ಲಿಭಗವಾಧ್ವಜವನ್ನು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಆರೋಹಣ ಮಾಡಿದರು. ಮುರಳಿಕೃಷ್ಣ ಹಸಂತಡ್ಕ ಸಹಿತ ಮುಖಂಡರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ: ದೇವಳದ ನಟರಾಜ ವೇದಿಕೆಯಲ್ಲಿನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಾಸಕ ಅಶೋಕ್ ರೈ ಚಾಲನೆ ನೀಡಿದರು. ದೇವಸ್ಥಾನದಲ್ಲಿನಡೆಯುವ ಜೀರ್ಣೋದ್ಧಾರ ಯೋಜನೆಗಳಿಗೆ ಭಕ್ತರಿಂದ ದೇಣಿಗೆ ಸ್ವೀಕರಿಸುವ ನಿಟ್ಟಿನಲ್ಲಿಪ್ರತ್ಯೇಕ ಜೀರ್ಣೋದ್ಧಾರ ದೇಣಿಗೆ ಕೇಂದ್ರ ಸ್ಥಾಪಿಸಲಾಗಿದೆ. ಶಾಸಕ ಅಶೋಕ್ ರೈ ಇಲ್ಲಿದೇಣಿಗೆ ನೀಡುವ ಮೂಲಕ ಉದ್ಘಾಟಿಸಿದರು.
--ಬಾಕ್ಸ್ --
ನಿರಂತರ ಅನ್ನದಾಸೋಹ
ದೇವಸ್ಥಾನದ ಹಿಂಭಾಗದ ಪುಷ್ಕರಿಣಿಯ ಪಕ್ಕದಲ್ಲಿಜಾತ್ರೋತ್ಸವ ಅನ್ನದಾಸೋಹಕ್ಕೆ ಅನ್ನಪೂರ್ಣ ಅನ್ನಛತ್ರ ನಿರ್ಮಿಸಲಾಗಿದೆ. ಗ್ಯಾಸ್ ಸಮಸ್ಯೆಯ ನಡುವೆ ಅಡುಗೆ ತಯಾರಿಸಲು ಬೃಹತ್ ಸೌದೆ ಒಲೆಗಳನ್ನು ನಿರ್ಮಿಸಲಾಗಿದ್ದು, ಬೇಕಾದಷ್ಟು ಸೌದೆಗಳನ್ನು ಸಂಗ್ರಹಿಸಲಾಗಿದೆ. ಅನ್ನಛತ್ರವನ್ನು ಶಾಸಕ ಅಶೋಕ್ ರೈ ಉದ್ಘಾಟಿಸಿದರು. ಮಧ್ಯಾಹ್ನ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಪಲ್ಲಪೂಜೆ ನೆರವೇರಿಸಿದರು.
--ಬಾಕ್ಸ್ --
ಪೇಜಾವರ ಶ್ರೀ ಭೇಟಿ
ಪುತ್ತೂರು ಜಾತ್ರೋತ್ಸವದ ಆರಂಭದಲ್ಲಿಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು. ಶ್ರೀಗಳನ್ನು ದೇವಸ್ಥಾನದ ವತಿಯಿಂದ ಸ್ವಾಗತಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ , ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಹಿರಿಯ ನ್ಯಾಯವಾದಿ ಮಹೇಶ್ ಕಜೆ ಮತ್ತಿತರರು ಸ್ವಾಮೀಜಿಯವರಿಗೆ ಜಾತ್ರಾ ಸಿದ್ಧತೆಗಳ ಮಾಹಿತಿ ನೀಡಿದರು.
ಫೋಟೋ: 10ಪಿ-ಕೊಡಿ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವಕ್ಕೆ ಶುಕ್ರವಾರ ಧ್ವಜಾರೋಹಣ ನಡೆಯಿತು.
ಫೋಟೋ: 10ಪಿ-ಪಲ್ಲ
ಪುತ್ತೂರು ಜಾತ್ರೋತ್ಸವದಲ್ಲಿ ನಡೆಯುವ ಅನ್ನದಾಸೋಹಕ್ಕೆ ಶುಕ್ರವಾರ ಮಧ್ಯಾಹ್ನ ಪಲ್ಲಪೂಜೆ ನಡೆಯಿತು.

