(ಸಂಪಾದಕೀಯ) ಕೈಗೆಟಕಿದ ನಗು

Contributed byKeerthi Kolgar|Vijaya Karnataka

ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ರೂಟ್ ಕೆನಾಲ್ ಚಿಕಿತ್ಸೆ ಸೇರ್ಪಡೆಯಾಗಿದೆ. ಇದು ಬಡವರಿಗೆ ದೊಡ್ಡ ನೆಮ್ಮದಿ ತಂದಿದೆ. ಹಲ್ಲಿನ ನೋವಿಗೆ ದುಬಾರಿ ವೆಚ್ಚದ ಚಿಕಿತ್ಸೆ ಈಗ ಉಚಿತವಾಗಿ ಸಿಗಲಿದೆ. ಇದರಿಂದ ಹಲ್ಲು ಕೀಳಿಸುವ ಬದಲು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಯೋಜನೆ ಬಗ್ಗೆ ಜನರಿಗೆ ತಿಳಿಸುವುದು ಮುಖ್ಯ. ಇದು ಜನರ ಮುಖದಲ್ಲಿ ನಗು ತರುವ ಹೆಜ್ಜೆಯಾಗಿದೆ.

editorial right to health new government initiative for root canal treatment

ಬಡವರಿಗೆ ರೂಟ್ ಕೆನಾಲ್ ಆಸರೆಯಾಗಲಿ

- - -

ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿ ಇಂದಿನ ಕಾಲಘಟ್ಟದಲ್ಲಿಮತ್ತಷ್ಟು ಪ್ರಸ್ತುತವೆನಿಸಿದೆ. ಅದರಲ್ಲೂಹಲ್ಲಿನ ಆರೋಗ್ಯದ ವಿಷಯಕ್ಕೆ ಬಂದರೆ, ಹೆಚ್ಚಿನವರು ಅದನ್ನು ನಿರ್ಲಕ್ಷಿಸುವುದು ಅಥವಾ ಅತಿಯಾದ ವೆಚ್ಚಕ್ಕೆ ಹೆದರಿ ಚಿಕಿತ್ಸೆಯಿಂದ ದೂರ ಸರಿಯುವುದು ಸಾಮಾನ್ಯ ಸಂಗತಿಯಾಗಿತ್ತು. ಆದರೆ, ಈಗ ರಾಜ್ಯ ಸರಕಾರವು ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ (ಪಿಎಂಜೆಎವೈ-ಸಿಎಂ ಎಆರ್ ಕೆ) ಯೋಜನೆಯಡಿ ಹಲ್ಲಿನ ‘ರೂಟ್ ಕೆನಾಲ…’ ಚಿಕಿತ್ಸೆಯನ್ನು ಸೇರ್ಪಡೆಗೊಳಿಸಿರುವುದು ಶ್ಲಾಘನೀಯ ಮತ್ತು ಜನೋಪಯೋಗಿ ಹೆಜ್ಜೆಯಾಗಿದೆ. ಸರಕಾರದ ಈ ನಿರ್ಧಾರವು ಸಾಮಾನ್ಯ ಜನರಿಗೆ ನೆಮ್ಮದಿ ನೀಡಿರುವುದಂತೂ ಸ್ಪಷ್ಟ.

ಆಧುನಿಕ ಜೀವನಶೈಲಿ, ಆಹಾರ ಪದ್ಧತಿ ಮತ್ತು ಹಲ್ಲುಗಳ ನೈರ್ಮಲ್ಯದ ಕೊರತೆಯಿಂದಾಗಿ ಹಿರಿಯರಿಂದ ಹಿಡಿದು ಮಕ್ಕಳವರೆಗೆ ದಂತಕ್ಷಯದಿಂದ (ಹಲ್ಲಿನ ಹುಳುಕು) ಬಳಲುತ್ತಿರುವುದು ಇಂದು ತೀರಾ ಸಾಮಾನ್ಯ. ಈ ಪೈಕಿ ಸುಮಾರು ಶೇ.85-90 ವಯಸ್ಕರು ಮತ್ತು ಶೇ.60-80 ಮಕ್ಕಳು ದಂತಕ್ಷಯ ಸಮಸ್ಯೆ ಎದುರಿಸುತ್ತಿದ್ದಾರೆ. ಸಾಮಾನ್ಯವಾಗಿ ಹಲ್ಲುನೋವು ಕಾಣಿಸಿಕೊಂಡಾಗ ಅಥವಾ ಹಲ್ಲುಹುಳುಕಾದಾಗ ರೂಟ್ ಕೆನಾಲ… ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿಈ ಚಿಕಿತ್ಸೆಗೆ ತಗಲುವ ದುಬಾರಿ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ಎಷ್ಟೋ ಬಡ ಮತ್ತು ಕೆಳ ಮಧ್ಯಮ ವರ್ಗದ ರೋಗಿಗಳು ಹಲ್ಲನ್ನು ಉಳಿಸಿಕೊಳ್ಳುವ ಬದಲು, ಅದನ್ನು ಪೂರ್ತಿಯಾಗಿ ಕೀಳಿಸುವುದೇ ಲೇಸು ಎಂದು ಭಾವಿಸುತ್ತಿದ್ದರು. ಹಲ್ಲುಕಿತ್ತು ಹಾಕುವುದು ತಾತ್ಕಾಲಿಕ ಪರಿಹಾರ ನೀಡಬಹುದಾದರೂ, ಅದು ಮುಖದ ಸೌಂದರ್ಯ ಮತ್ತು ಜೀರ್ಣಕ್ರಿಯೆಯ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುತ್ತದೆ. ಈಗ ವಿಮಾ ಸೌಲಭ್ಯದ ಅಡಿಯಲ್ಲಿಈ ಚಿಕಿತ್ಸೆ ಲಭ್ಯವಿರುವುದರಿಂದ, ಜನರು ಆರ್ಥಿಕ ಅಂಜಿಕೆಯಿಲ್ಲದೆ ತಮ್ಮ ನೈಸರ್ಗಿಕ ಹಲ್ಲನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಇಲ್ಲಿಯವರೆಗೆ ಈ ಯೋಜನೆಯಲ್ಲಿಮೌಖಿಕ ಮತ್ತು ಮ್ಯಾಕ್ಸಿಲೊ ಫೇಶಿಯಲ್ ಸರ್ಜರಿ ಸೇರಿದಂತೆ 12 ವಿವಿಧ ಚಿಕಿತ್ಸೆಗಳಿಗೆ ಅವಕಾಶವಿತ್ತು. ಈಗ ರೂಟ್ ಕೆನಾಲ್ ಸೇರ್ಪಡೆಯಾಗಿರುವುದು ಯೋಜನೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಆದ್ಯತಾ (ಪಿಎಚ್ ಎಚ್ ) ಮತ್ತು ಆದ್ಯತೆಯಿಲ್ಲದ (ಎಚ್ ಪಿಎಚ್ ಎಚ್ ) ಕುಟುಂಬಗಳಿಬ್ಬರಿಗೂ ಈ ಸೌಲಭ್ಯ ಅನ್ವಯವಾಗುವುದು ಯೋಜನೆಯ ಪಾರದರ್ಶಕತೆ ಮತ್ತು ಸಮಾನತೆಯನ್ನು ಎತ್ತಿ ತೋರಿಸುತ್ತದೆ. ಈ ಯೋಜನೆಯ ಯಶಸ್ಸು ಕೇವಲ ಆದೇಶ ಹೊರಡಿಸುವುದರಲ್ಲಿಇಲ್ಲ; ಇದು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡುವುದು ಸರಕಾರ ಮತ್ತು ಆರೋಗ್ಯ ಇಲಾಖೆಯ ಜವಾಬ್ದಾರಿ. ಹಳ್ಳಿ ಮತ್ತು ಪಟ್ಟಣ ಪ್ರದೇಶಗಳಲ್ಲಿಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವುದು ಅತ್ಯವಶ್ಯ. ಹಲ್ಲುನೋವನ್ನು ಕಡೆಗಣಿಸದೆ, ದಂತ ತೆಗೆಯುವ ಬದಲು ರೂಟ್ ಕೆನಾಲ್ ಮೂಲಕ ಅದನ್ನು ಉಳಿಸಿಕೊಳ್ಳಬಹುದು ಎಂಬ ಅರಿವು ಜನಸಾಮಾನ್ಯರಿಗೆ ತಲುಪಿದಾಗ ಮಾತ್ರ ಈ ಆದೇಶಕ್ಕೆ ನಿಜವಾದ ಅರ್ಥ. ಇದು ಕೇವಲ ಚಿಕಿತ್ಸೆಯಾಗದೆ, ಬಡವರ ಮುಖದಲ್ಲಿನಗು ಉಳಿಸುವ ಸಾರ್ಥಕ ಪ್ರಯತ್ನವಾಗಲಿ.