ವಿಕ ಸುದ್ದಿಲೋಕ ಮಂಗಳೂರು
ರಾಜ್ಯ ವಿಧಾನಸಭಾ ಅಧಿವೇಶನದಲ್ಲಿಈ ಬಾರಿ ನಾನು 65 ಪ್ರಶ್ನೆಗಳನ್ನು ಕೇಳಿದ್ದು, ಅದರಲ್ಲಿ64ಕ್ಕೆ ಉತ್ತರ ಸಿಕ್ಕಿದೆ. ಮಂಗಳೂರು ನಗರದಲ್ಲಿ235.68 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲಿದ್ದು, ಈ ಬಗ್ಗೆ ಅಧಿವೇಶನದಲ್ಲಿಉತ್ತರ ಸಿಕ್ಕಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.
ಲಾಲ್ ಬಾಗ್ ನ ಪಾಲಿಕೆ ಕಚೇರಿಯಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿ, ಅಮೃತ್ ಯೋಜನೆ , ಜಲ್ ಹೀ ಅಮೃತ್ , ಒಳಚರಂಡಿ ಕಾಮಗಾರಿಗೆ ಅನುದಾನ ನೀಡಲಾಗಿದೆ. ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ- 2ರಡಿ 165 ಕೋಟಿ ರೂ.ಗಳ ಕಾಮಗಾರಿ ಆಗಿದೆ. 10 ಕೋಟಿ ರೂ. ವೆಚ್ಚದಲ್ಲಿರಾಜಕಾಲುವೆಗಳ ಹೂಳೆತ್ತುವ ಪ್ರಕ್ರಿಯೆಗೆ ಚಾಲನೆ ದೊರಕಿದೆ. ಶಾಸಕರಿಗೆ ಅಭಿವೃದ್ಧಿ ಯೋಜನೆಗಾಗಿ 25 ಕೋಟಿ ರೂ. ಬಿಡುಗಡೆಯಾಗಿದೆ. ನಗರದ ಒಳಚರಂಡಿ ಯೋಜನೆಯನ್ನು ಮೇಲ್ದರ್ಜೆಗೇರಿಸಲು 1250 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಇದಕ್ಕೆ ಸರಕಾರದ ಗಮನ ಸೆಳೆಯುವ ಕೆಲಸ ಆಗಬೇಕಾಗಿದೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಅಭಿವೃದ್ಧಿ ಕಾರ್ಯಕ್ಕೆ ಈಗ ಅನುದಾನ ಬರುತ್ತಿಲ್ಲಎಂದು ಪದೇ ಪದೇ ಸರಕಾರವನ್ನು ದೂರುತ್ತಿದ್ದಾರೆ. ಆದರೆ ಪ್ರತಿನಿತ್ಯ ಮಾಧ್ಯಮದಲ್ಲಿಮಾತ್ರ ಶಿಲಾನ್ಯಾಸ, ಉದ್ಘಾಟನೆ ಸುದ್ದಿ ಬರುತ್ತಿದೆ. ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಕೊಂಕಣಿ ಭವನದ ಭರವಸೆ: ಉರ್ವಾಸ್ಟೋರ್ ನಲ್ಲಿನಿರ್ಮಾಣ ಹಂತದಲ್ಲಿರುವ ಕೊಂಕಣಿ ಭವನ ಕಾಮಗಾರಿ ಪೂರ್ಣಗೊಳಿಸಲು 3 ಕೋಟಿ ರೂ.ಗಳ ಬೇಡಿಕೆ ಇರಿಸಲಾಗಿತ್ತು. ಇದಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಭರವಸೆ ಈಡೇರದಿದ್ದರೆ ಆಶ್ವಾಸನಾ ಸಮಿತಿಯಲ್ಲಿಪ್ರಶ್ನಿಸಲಾಗುವುದು. ಈ ರೀತಿಯಾಗಿ ಪೋಲು ಮಾಡಲು ಅವಕಾಶ ನೀಡಬಾರದೆಂಬ ನಿಟ್ಟಿನಲ್ಲಿ, ಕೊಂಕಣಿ ಅಕಾಡೆಮಿಯ ಚಟುವಟಿಕೆಗಳಿಗೆ ಈ ಭವನದ ತುರ್ತು ಅಗತ್ಯ ಇರುವುದನ್ನು ಸರಕಾರದ ಗಮನ ಸೆಳೆಯಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಮೇಯರ್ ಗಳಾದ ಶಶಿಧರ ಹೆಗ್ಡೆ, ಭಾಸ್ಕರ್ ಕೆ., ಪ್ರಮುಖರಾದ ಅಪ್ಪಿ, ನವೀನ್ ಡಿಸೋಜಾ, ಸ್ಟ್ಯಾನಿ ಅಲ್ವಾರಿಸ್ , ಇಮ್ರಾನ್ , ಮನುರಾಜ್ , ಕೇಶವ್ , ನಾಗೇಂದ್ರ ಅಶೋಕ್ ಡಿ.ಕೆ. ಮತ್ತಿತರರು ಉಪಸ್ಥಿತರಿದ್ದರು.
10ಎಂಎನ್ ಜಿ-ಐವನ್ ಡಿಸೋಜ

