- ಎಂಎಸ್ ಐಎಲ್ ಮದ್ಯದಂಗಡಿ ಸ್ಥಳಾಂತರಕ್ಕೆ ಆಗ್ರಹ
ವಿಕ ಸುದ್ದಿಲೋಕ ಚನ್ನಮ್ಮನ ಕಿತ್ತೂರು
ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ಇರುವ ಎಂಎಸ್ ಐಎಲ್ ಮದ್ಯದಂಗಡಿಯನ್ನು ಈ ಕೂಡಲೇ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಮತ್ತು ಮಹಿಳೆಯರು ಶುಕ್ರವಾರ ಧರಣಿ ನಡೆಸಿದರು.
ಗ್ರಾಮದ ಕೂಗಳತೆ ದೂರದಲ್ಲಿಯೇ ಈ ಮಳಿಗೆಯನ್ನು ತೆರೆಯಲಾಗಿದ್ದು, ಇದರಿಂದ ಯುವಕರು ವ್ಯಸನಕ್ಕೆ ತುತ್ತಾಗಿ ದಾರಿ ತಪ್ಪುತ್ತಿದ್ದಾರೆ ಹಾಗೂ ದಿನನಿತ್ಯ ಕಷ್ಟಪಟ್ಟು ದುಡಿದ ಹಣ ಮದ್ಯಕ್ಕಾಗಿ ವ್ಯಯವಾಗುತ್ತಿರುವುದರಿಂದ ಕುಟುಂಬ ನಿರ್ವಹಣೆ ಸಂಕಷ್ಟಕ್ಕೀಡಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮದ್ಯ ಖರೀದಿಸಿ ರಸ್ತೆ ಬದಿಯಲ್ಲಿಯೇ ಕುಳಿತು ಸೇವಿಸುವವರಿಂದ ಮಹಿಳೆಯರು ಮತ್ತು ಮಕ್ಕಳು ಆ ಮಾರ್ಗದಲ್ಲಿಸಂಚರಿಸಲು ಅಸಾಧ್ಯವಾದ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ತಹಸೀಲ್ದಾರ್ ಸೂಚನೆ: ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಕಲ್ಲಗೌಡ ಪಾಟೀಲ ಅವರು ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿ ಮನವಿ ಸ್ವೀಕರಿಸಿದರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು, ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಸಂಪೂರ್ಣ ಪರಿಶೀಲನೆ ನಡೆಸುವವರೆಗೆ ಮದ್ಯದ ಮಳಿಗೆಯನ್ನು ತೆರೆಯಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ಅಧಿಕಾರಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.
-ಕಿತ್ತೂರು
ಎಂಎಸ್ ಐಎಲ್ ಮದ್ಯದಂಗಡಿ ಸ್ಥಳಾಂತರಿಸುವಂತೆ ಆಗ್ರಹಿಸಿ ಅಂಬಡಗಟ್ಟಿಯಲ್ಲಿಮಹಿಳೆಯರು ಪ್ರತಿಭಟನೆ ನಡೆಸಿದರು.

