ಕೆಎಚ್ ಬಿ ಕಚೇರಿಗೆ ಬೀಗ ಜಡಿಯುವ ಎಚ್ಚರಿಕೆ

Contributed byphalalochanaradhya.ks@timesofindia.com|Vijaya Karnataka

ಕರ್ನಾಟಕ ಗೃಹ ಮಂಡಳಿ ನಿವೇಶನ ಹಂಚಿಕೆ ಮಾಡದ ಹಿನ್ನೆಲೆಯಲ್ಲಿ, ಅರ್ಜಿದಾರರಿಗೆ ಹಣ ವಾಪಸ್ ನೀಡದಿದ್ದರೆ ಕಚೇರಿಗೆ ಬೀಗ ಜಡಿಯುವ ಎಚ್ಚರಿಕೆ ನೀಡಲಾಗಿದೆ. 2020ರಲ್ಲಿ ಅರ್ಜಿ ಸ್ವೀಕರಿಸಲಾಗಿದ್ದು, ಆರು ವರ್ಷ ಕಳೆದರೂ ನಿವೇಶನ ನೀಡಿಲ್ಲ. 1.52 ಕೋಟಿ ರೂ. ಸಂಗ್ರಹಿಸಲಾಗಿದೆ. ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಕೂಡ್ಲೂರು ಶ್ರೀಧರಮೂರ್ತಿ ತಿಳಿಸಿದ್ದಾರೆ.

warning of locking khb office 6 year old pending allotment issue

ಕೆಎಚ್ ಬಿ ಕಚೇರಿಗೆ ಬೀಗ ಜಡಿಯುವ ಎಚ್ಚರಿಕೆ

-ನಿವೇಶನ ಹಂಚಿಕೆ ಮಾಡದ ಆರೋಪ

ವಿಕ ಸುದ್ದಿಲೋಕ ಚಾಮರಾಜನಗರ

ನಿವೇಶನಕ್ಕಾಗಿ ಅರ್ಜಿ ಶುಲ್ಕ ಕಟ್ಟಿಸಿಕೊಂಡಿರುವ ಫಲಾನುಭವಿಗಳಿಗೆ ಒಂದು ತಿಂಗಳೊಳಗೆ ನಿವೇಶನ ಅಥವಾ ಕಟ್ಟಿರುವ ಅರ್ಜಿ ಶುಲ್ಕದ ಹಣಕ್ಕೆ ಬಡ್ಡಿ ಸೇರಿಸಿ ವಾಪಸ್ ನೀಡದಿದ್ದರೆ ಕರ್ನಾಟಕ ಗೃಹ ಮಂಡಳಿಯ ಯೋಜನಾಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಬೇಕಾಗುತ್ತದೆ ಎಂದು ಕರ್ನಾಟಕ ವಿದ್ಯಾವಂತ ನಿರುದ್ಯೋಗಿಗಳ ಸಂಘದ ರಾಜ್ಯಾಧ್ಯಕ್ಷ ಕೂಡ್ಲೂರು ಶ್ರೀಧರಮೂರ್ತಿ ಎಚ್ಚರಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ‘‘ ಕರ್ನಾಟಕ ಗೃಹ ಮಂಡಳಿ ವತಿಯಿಂದ ಕಳೆದ 2020ನೇ ಸಾಲಿನಲ್ಲಿನಾನಾ ವಿಭಾಗದಿಂದ ನಿವೇಶನ ಅಥವಾ ಮನೆಯನ್ನು ನಿರ್ಮಿಸಿ ಅರ್ಜಿದಾರ ಫಲಾನುಭವಿಗಳಿಗೆ ಹಂಚಿಕೆ ಮಾಡಿಕೊಡಲಾಗುವುದು,’’ ಎಂದು ಪ್ರಕಟಣೆ ಹೊರಡಿಸಲಾಗಿತ್ತು.

ಅದರಂತೆ ಇಡಬ್ಲ್ಯೂಎಸ್ ಗೆ ಅರ್ಜಿದಾರರಿಂದ 3 ಸಾವಿರ ರೂ. ಡಿಡಿ ತೆಗೆದುಕೊಂಡು ಅರ್ಜಿ ಸ್ವೀಕರಿಸಲಾಗಿದೆ. ಈ ವಿಭಾಗದಿಂದಲೇ 730 ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಎಲ್ .ಐ.ಜಿ. ನಿವೇಶನ/ಮನೆಗಳಿಗೆ ಅರ್ಜಿ ಡಿಡಿ ಮೊತ್ತ 5 ಸಾವಿರ ರೂ. ಅರ್ಜಿ ಹಾಕಿರುವ ಫಲಾನುಭವಿಗಳು 1805 ಜನ. ಹಾಗೆಯೇ ಎಂ.ಐ.ಜಿ.ಗೆ ಅರ್ಜಿದಾರರು 174 ಜನ ಇದ್ದಾರೆ. ಎಂ.ಐ.ಜಿ. ಮನೆ ಅಥವಾ ನಿವೇಶನಕ್ಕೆ ಡಿಡಿ 10 ಸಾವಿರ ರೂ., ಅದೇ ರೀತಿ ಎಚ್ .ಐ.ಜಿ.ಗೆ 752 ಅರ್ಜಿದಾರರು ಡಿಡಿ ಮೊತ್ತ 15 ಸಾವಿರ ರೂ. ಡಿಡಿ ಮಾಡಿಸಿ, ಕೆಎಚ್ ಬಿಗೆ ನೀಡಿದ್ದಾರೆ. ಆದರೆ, 6 ವರ್ಷಗಳು ಕಳೆದರೂ ಈವರೆಗೂ ಕೆಎಚ್ ಬಿ ಇಂದ ಹೊಸ ಲೇಔಟ್ ನಿರ್ಮಾಣಗೊಂಡಿಲ್ಲ. ಇನ್ನು ನಿವೇಶನ ಕೊಡುವುದು ಎಲ್ಲಿಂದ ಅವರು ಪ್ರಶ್ನಿಸಿದ್ದಾರೆ.

ಒಟ್ಟು ಅರ್ಜಿದಾರರಿಂದ ಕಟ್ಟಿಸಿಕೊಂಡಿರುವ ಹಣ 1,52 ಕೋಟಿ ರೂ. ಇದಕ್ಕೆ ಶೇ. 8ರ ದರದಲ್ಲಿವರ್ಷಕ್ಕೆ 12,18,700 ರೂ. ಬಡ್ಡಿ ಬರಲಿದ್ದು, 6 ವರ್ಷಗಳಿಗೆ ಬಡ್ಡಿ 73,12,200 ರೂ. ಇದ್ದು, ಆ ಅಷ್ಟು ಹಣವನ್ನು ಆಯಾ ಅರ್ಜಿದಾರರಿಗೆ 6 ವರ್ಷದ ಬಡ್ಡಿ ಸಹಿತ ನೀಡಬೇಕು ಎಂದು ಆಗ್ರಹಿಸಿದರು.

ಆದ್ದರಿಂದ ಇನ್ನೊಂದು ತಿಂಗಳೊಳಗೆ ಈ ಬಗ್ಗೆ ಕ್ರಮವಹಿಸದಿದ್ದಲ್ಲಿಕೆಎಚ್ ಬಿಯ ಜಿಲ್ಲಾಯೋಜನಾಧಿಕಾರಿಯವರ ಕಚೇರಿಗೆ ಅರ್ಜಿದಾರರ ನೇತೃತ್ವದಲ್ಲಿಬೀಗ ಜಡಿಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗ್ರಾ.ಪಂ.ಮಾಜಿ ಸದಸ್ಯ ಶ್ರೀನಾಥ್ , ಜಯಶಂಕರ್ , ಮಹೇಶ್ , ಮದ್ದೂರು ಚಿನ್ನಸ್ವಾಮಿ, ಶ್ರೀನಿವಾಸ ಯರಿಯೂರು ಹಾಜರಿದ್ದರು.

====

ಶ್ರೀಧರಮೂರ್ತಿ