ಗ್ರಾಹಕರು ಬುಕ್ ಮಾಡಿದ ಸಿಲೆಂಡರ್ ಗಳು ಕಾಳ ಸಂತೆಯಲ್ಲಿಮಾರಾಟ
ಗ್ಯಾಸ್ ಏಜೆನ್ಸಿ ವಿರುದ್ಧ ಗ್ರಾಹಕರ ಆಕ್ರೋಶ
ವಿಕ ಸುದ್ದಿಲೋಕ ಚಿತ್ರದುರ್ಗ
ಹೊಳಲ್ಕೆರೆ ಪಟ್ಟಣದ ಅಖಿಲ್ ಇಂಡೇನ್ ಏಜೆನ್ಸಿ ಮಾಲೀಕರು ಗ್ರಾಹಕರಿಗೆ ಅಡುಗೆ ಅನಿಲದ ಸಿಲಿಂಡರ್ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಹೊಳಲ್ಕೆರೆ ಸಾರ್ವಜನಿಕರು ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನಾವು ಬುಕ್ ಮಾಡಿದ ಎಲ್ ಪಿಜಿ ಸಿಲಿಂಡರ್ ಗಳನ್ನು ಡೆಲಿವರಿ ಬಾಯ್ ನಮಗೆ ಕೊಡದೆ, ಕಾಳ ಸಂತೆಯಲ್ಲಿಅಕ್ರಮವಾಗಿ ಹೆಚ್ಚಿನ ಹಣಕ್ಕೆ ಮಾರಿಕೊಳ್ಳುತ್ತಾರೆ. ಇಂಡೇನ್ ಗ್ಯಾಸ್ ಕಚೇರಿ ಮತ್ತು ಗೋದಾಮು ಬಳಿ ದಿನಗಟ್ಟಲೆ ಕಾದು ಕುಳಿತರೂ ಸಿಲಿಂಡರ್ ನೀಡುತ್ತಿಲ್ಲ. ಮನೆಗಳಿಗೂ ಸಿಲಿಂಡರ್ ಕೊಟ್ಟಿಲ್ಲಎಂದು ದೂರಿದರು.
ನಮಗೆ ಸಿಗಬೇಕಾದ 926 ರೂ. ಬೆಲೆಯ ಎಲ್ ಪಿಜಿ ಸಿಲಿಂಡರ್ ಗಳನ್ನು ಏಜೆನ್ಸಿ ಸಿಬ್ಬಂದಿ, ಡೆಲಿವರಿ ಬಾಯ್ ಗಳು 1,400ರಿಂದ 1,800 ರೂ.ಗೆ ಹೋಟೆಲ್ ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕಚೇರಿ ಬಳಿ ಹೋದರೆ ಸರಿಯಾದ ಮಾಹಿತಿ ಕೊಡುತ್ತಿಲ್ಲ, ಅಲ್ಲದೇ ಬಹುತೇಕ ಸಂದರ್ಭದಲ್ಲಿಕಚೇರಿ ಮುಚ್ಚಿರುತ್ತದೆ. ಹಿಂದಿನಿಂದಲೂ ಅಖಿಲ್ ಇಂಡೇನ್ ಏಜೆನ್ಸಿಯವರು ಗ್ರಾಹಕರಿಗೆ ಸಮರ್ಪಕವಾಗಿ ಸಿಲಿಂಡರ್ ವಿತರಿಸದೆ ತೊಂದರೆ ಕೊಡುತ್ತಿದ್ದಾರೆ. ಹಾಗಾಗಿ ಈ ಏಜೆನ್ಸಿ ರದ್ದು ಮಾಡಿ, ಬೇರೆಯವರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಹೊಳಲ್ಕೆರೆಯ ಈರಪ್ಪ, ಮಂಜಪ್ಪ, ತಿಮ್ಮಕ್ಕ, ರಾಮಕ್ಕ, ಬಸವರಾಜ, ನಿಂಗಮ್ಮ, ತಿಮ್ಮಪ್ಪ, ನಾಗೇಶ್ , ಲಲಿತಮ್ಮ, ಮತ್ತಿತರರು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.
--
ಫೋಟೊ ಕ್ಯಾಪ್ಷನ್ /13ಸಿಟಿಡಿ32
ಹೊಳಲ್ಕೆರೆ ಪಟ್ಟಣದ ಅಖಿಲ್ ಇಂಡೇನ್ ಏಜೆನ್ಸಿಯವರು ಗ್ರಾಹಕರಿಗೆ ಅಡುಗೆ ಅನಿಲದ ಸಿಲಿಂಡರ್ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಹೊಳಲ್ಕೆರೆ ಸಾರ್ವಜನಿಕರು ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.

